ಕಾಂಗ್ರೆಸ್​ಗೆ ಭಾರೀ ಮುಖಭಂಗ; ಸೋನಿಯಾ ಕರೆದ ಸಿಎಎ ವಿರುದ್ಧದ ವಿರೋಧ ಪಕ್ಷಗಳ ಸಭೆಗೆ ಯುಪಿಎ ಮೈತ್ರಿ ಪಕ್ಷಗಳೇ ಗೈರು!

ಭಾರತ್ ಬಂದ್ ವೇಳೆ ಪಶ್ವಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೃಷ್ಟಿಸಿದ ಹಿಂಸಾಚಾರವನ್ನು ನಾನು ಬೆಂಬಲಿಸದ ಕಾರಣ ಸೋನಿಯಾ ಗಾಂಧಿ ಕರೆದಿರುವ ವಿರೋಧ ಪಕ್ಷಗಳ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇನೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿತಿಳಿಸಿದ್ದಾರೆ.

MAshok Kumar | news18-kannada
Updated:January 13, 2020, 4:25 PM IST
ಕಾಂಗ್ರೆಸ್​ಗೆ ಭಾರೀ ಮುಖಭಂಗ; ಸೋನಿಯಾ ಕರೆದ ಸಿಎಎ ವಿರುದ್ಧದ ವಿರೋಧ ಪಕ್ಷಗಳ ಸಭೆಗೆ ಯುಪಿಎ ಮೈತ್ರಿ ಪಕ್ಷಗಳೇ ಗೈರು!
ಇಂದು ದೆಹಲಿಯಲ್ಲಿ ನಡೆದ ವಿರೋಧ ಪಕ್ಷಗಳ ಸಭೆ.
  • Share this:
ನವದೆಹಲಿ (ಜನವರಿ 13); ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯ ವಿರುದ್ಧ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿರೋಧ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಕಾಯ್ದೆಯ ವಿರುದ್ಧ ವಿರೋಧ ಪಕ್ಷಗಳ ಬಲ ಪ್ರದರ್ಶಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇಂದು ವಿರೋಧ ಪಕ್ಷಗಳ ಸಭೆ ಕರೆದಿದ್ದರು. ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್​ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಸೇರಿದಂತೆ ಅನೇಕರು ಈ ಸಭೆಯಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಕಾಂಗ್ರೆಸ್​ಗೆ ಆಘಾತ ನೀಡಿದ್ದಾರೆ.

ತಮಿಳುನಾಡಿನಲ್ಲಿ ಕಾಂಗ್ರೆಸ್ ಮಿತ್ರ ಪಕ್ಷವಾದ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಪೌರತ್ವ ಕಾಯ್ದೆ ಕುರಿತು ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಸ್ಥಳೀಯ ನಾಯಕರು ನೀಡಿರುವ ಬೇಜವಾಬ್ದಾರಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಸ್ಟಾಲಿನ್ ಸಹ ವಿರೋಧ ಪಕ್ಷಗಳ ಸಭೆಯಿಂದ ದೂರು ಉಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ತಿಂಗಳ ದೆಹಲಿಯಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ವಿರುದ್ಧ ಸೆಣಸಲು ಸಿದ್ಧವಾಗಿರುವ ಆಮ್ ಆದ್ಮಿ ಪಕ್ಷ ಇದೇ ಕಾರಣಕ್ಕಾಗಿ ಕಾಂಗ್ರೆಸ್ ಆಹ್ವಾನಿಸಿರುವ ಸಭೆಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ.

ಇನ್ನೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಸರ್ಕಾರ ರಚಿಸಿರುವ ಶಿವಸೇನೆ ಈ ಸಭೆಯಲ್ಲಿ ಪಾಲ್ಗೊಳ್ಳುವ ಕುರಿತು ದಿನವಿಡೀ ಅನೇಕ ಗೊಂದಲಮಯ ವರದಿಗಳು ಬರುತ್ತಿದ್ದವು. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಶಿವಸೇನೆ ಪಕ್ಷ, “ಸಿಎಎ ಮತ್ತು ಎನ್ಆರ್​ಸಿ ಕುರಿತ ವಿರೋಧ ಪಕ್ಷಗಳ ಸಭೆಗೆ ಶಿವಸೇನೆಯನ್ನು ಆಹ್ವಾನಿಸಿಲ್ಲ. ಹೀಗಾಗಿ ಈ ಸಭೆಯಲ್ಲಿ ಪಕ್ಷದ ಯಾವ ಮುಖಂಡರೂ ಬಾಗವಹಿಸುವುದಿಲ್ಲ” ಎಂದು ತಿಳಿಸಿದೆ.

ಆದರೆ, ಶಿವಸೇನೆ ನಡೆಯನ್ನು ಅನುಮಾನಿಸಿರುವ ರಾಜಕೀಯ ವಿಶ್ಲೇಷಕರು, “ಶಿವಸೇನೆ ಪಕ್ಷ ಸಿಎಎ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಿಕೊಳ್ಳುವ ಸಲುವಾಗಿ ಈ ಸಭೆಗೆ ಭಾಗವಹಿಸಬೇಕೆ? ಬೇಡವೇ? ಎಂದು ನಿರ್ಧರಿಸಲು ಇಷ್ಟು ಸಮಯ ತೆಗೆದುಕೊಂಡಿದೆ. ಶಿವಸೇನೆ ವಿವಾದಾತ್ಮಕ ಸಿಎಎ ಅನ್ನು ಲೋಕಸಭೆಯಲ್ಲಿ ಬೆಂಬಲಿಸಿತ್ತು. ಆದರೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಒತ್ತಡಕ್ಕೆ ಮಣಿದು ರಾಜ್ಯ ಸಭೆಯಲ್ಲಿ ಮತದಾನದಿಂದ ದೂರು ಉಳಿದಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಡಬಲ್​ ಸ್ಟ್ಯಾಂಡರ್ಡ್​ ಪಕ್ಷ ಎಂದು ಹೀಗೆಳೆದ ಮಮತಾ ಬ್ಯಾನರ್ಜಿ:

ಅರಂಭದಿಂದಲೂ ಸಿಎಎ ಮತ್ತು ಎನ್ಆರ್​ಸಿ ವಿರುದ್ಧ ಕೋಲ್ಕತ್ತಾ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಮಮತಾ ಬ್ಯಾನರ್ಜಿ ಈ ಸಭೆಗೆ ಹಾಜರಾಗಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಈ ಸಭೆಗೆ ಹಾಜರಾಗದೆ ದೂರು ಉಳಿಯುವ ಮೂಲಕ ಅವರು ಅಚ್ಚರಿಗೆ ಕಾರಣರಾಗಿದ್ದಾರೆ.ಅಸಲಿಗೆ ಕೇಂದ್ರ ಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ಜನವರಿ 8 ರಂದು ದೇಶದ ವಿವಿಧ ಕಾರ್ಮಿಕ ಸಂಘನೆಗಳು ದೇಶವ್ಯಾಪಿ ಭಾರತ್ ಬಂದ್​ಗೆ ಕರೆ ನೀಡಿದ್ದರು. ಈ ವೇಳೆ ಕಾಂಗ್ರೆಸ್ ಮತ್ತು ಎಡಪಂಥ ಒಟ್ಟಾಗಿ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಸೃಷ್ಟಿಸಿದ್ದವು. ಇದರಿಂದ ಬೇಸರಗೊಂಡಿರುವ ಮಮತಾ ಬ್ಯಾನರ್ಜಿ ಸೋನಿಯಾ ಗಾಂಧಿ ಕರೆದ ಸಭೆಯಿಂದ ದೂರು ಉಳಿದಿದ್ದಾರೆ ಎನ್ನಲಾಗುತ್ತಿದೆ.

ಕೇಂದ್ರ ಕಾರ್ಮಿಕ ಸಂಘಗಳು ಬುಧವಾರ ಕರೆ ನೀಡಿದ್ದ ಬಂದ್ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ಬೆಂಕಿ ಹಚ್ಚುವುದು, ರೈಲ್ವೆ ಮತ್ತು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದರು. ಇಡೀ ರಾಜ್ಯವನ್ನು ಸ್ಥಬ್ಧಗೊಳಿಸಿದ್ದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ್ದ ಮಮತಾ ಬ್ಯಾನರ್ಜಿ, “ಎಡರಂಗ ಮತ್ತು ಕಾಂಗ್ರೆಸ್ ಪಕ್ಷದ ಡಬಲ್ ಸ್ಟ್ಯಾಂಡರ್ಡ್ ಗುಣವನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ” ಎಂದು ಕಿಡಿಕಾರಿದ್ದರು.

ಅಲ್ಲದೆ, “ಭಾರತ್ ಬಂದ್ ವೇಳೆ ಪಶ್ವಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೃಷ್ಟಿಸಿದ ಹಿಂಸಾಚಾರವನ್ನು ನಾನು ಬೆಂಬಲಿಸದ ಕಾರಣ ಸೋನಿಯಾ ಗಾಂಧಿ ಕರೆದಿರುವ ವಿರೋಧ ಪಕ್ಷಗಳ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇನೆ” ಎಂದು ತಿಳಿಸಿದ್ದಾರೆ.

ಇನ್ನೂ ಟ್ವೀಟ್ ಮೂಲಕ ತನ್ನ ಅಭಿಪ್ರಾಯವನ್ನು ಹೊರ ಹಾಕಿರುವ ಬಿಎಸ್​ಪಿ ನಾಯಕಿ ಮಾಯಾವತಿ, “ರಾಜಸ್ತಾನದಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಪಕ್ಷದ ಶಾಸಕರ ವಿರುದ್ಧ ಆಪರೇಷನ್ ನಡೆಸುತ್ತಿದೆ. ಈಗಾಗಲೇ 6 ಜನ ಬಿಎಸ್​ಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಹೀಗಾಗಿ ಕಾಂಗ್ರೆಸ್ ನಡೆಯನ್ನು ಖಂಡಿಸಿ ನಾವು ವಿರೋಧ ಪಕ್ಷಗಳ ಸಭೆಯನ್ನು ಬಹಿಷ್ಕರಿಸಿದ್ದೇವೆ” ಎಂದು ತಿಳಿಸಿದ್ದಾರೆ. ಈ ಹಿಂದೆ ವಿರೋಧ ಪಕ್ಷಗಳ ನಿಯೋಗ ಸಿಎಎ ವಿರುದ್ಧ ರಾಷ್ಟ್ರಪತಿಗಳನ್ನು ಭೇಟಿ ಮಾಡಲು ತೆರಳಿದ್ದ ಸಂದರ್ಭದಲ್ಲೂ ಮಾಯಾವತಿ ಈ ಸಭೆಯಿಂದ ದೂರ ಉಳಿದಿದ್ದರು.

ಒಟ್ಟಾರೆ ಸಿಎಎ ಹಾಗೂ ಎನ್​ಆರ್​ಸಿ ಕಾಯ್ದೆಯ ವಿರುದ್ಧ ಕೇಂದ್ರ ಸರ್ಕಾರವನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳು ತಮ್ಮ ಒಳಗೆ ಒಗ್ಗಟ್ಟು ಕಾಯ್ದುಕೊಳ್ಳಲು ಬಲ ಪ್ರದರ್ಶಿಸಲು ವಿಫಲವಾಗಿವೆ. ಆದರೆ, ಸಿಎಎ ದೆಹಲಿ ಜಾಮೀಯ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಆರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ಇಂದು ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳ ಚಳುವಳಿಯಾಗಿ ವ್ಯಾಪಿಸಿದೆ. ಈ ಮೂಲಕ ವಿರೋಧ ಪಕ್ಷಗಳನ್ನೂ ನಾಚಿಸಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಜೆಎನ್​ಯು ಹಿಂಸಾಚಾರ; ಮಾಹಿತಿ ಸಂರಕ್ಷಿಸಲು ವಾಟ್ಸಾಪ್​, ಫೇಸ್​ಬುಕ್​ಗೆ ದೆಹಲಿ ಹೈ ಕೋರ್ಟ್​ ನೋಟಿಸ್​
Published by: MAshok Kumar
First published: January 13, 2020, 4:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading