news18 Updated:January 4, 2021, 11:38 AM IST
ಪಂಜಾಬ್ ರೈತರ ಪ್ರತಿಭಟನೆಯ ಚಿತ್ರ
- News18
- Last Updated:
January 4, 2021, 11:38 AM IST
ಮುಂಬೈ(ಜ. 04): ಅನ್ನದಾತರೆನಿಸಿರುವ ರೈತರ ಬಗ್ಗೆ ತಮಗೆ ಬಹಳ ಗೌರವ ಇದೆ. ತಮ್ಮ ಸಂಸ್ಥೆ ಗುತ್ತಿಗೆ ಆಧಾರಿತ ಅಥವಾ ಕಾರ್ಪೊರೇಟ್ ಆಧಾರಿತ ಕೃಷಿಗಾರಿಕೆಗೆ (Contract Farming ಮತ್ತು Corporate Farming) ಕೈ ಹಾಕುವ ಯಾವ ಉದ್ದೇಶವೂ ಇಲ್ಲ. ಕಾರ್ಪೊರೇಟ್ ಅಥವಾ ಕಾಂಟ್ರಾಕ್ಟ್ ಫಾರ್ಮಿಂಗ್ ಉದ್ದೇಶದಿಂದ ಯಾವತ್ತೂ ಕೂಡ ರೈತರ ಕೃಷಿ ಭೂಮಿಯನ್ನು ಖರೀದಿಸಿದಿದ್ದಿಲ್ಲ. ಮುಂದಿಯೂ ಖರೀದಿಸುವ ಉದ್ದೇಶ ಇಲ್ಲ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಲಿ (ಆರ್ಐಎಲ್) ಸಂಸ್ಥೆ ಇಂದು ಸೋಮವಾರ ಹೇಳಿಕೆ ನೀಡಿದೆ.
ರೈತರ ಸಬಲೀಕರಣಕ್ಕೆ ರಿಲಾಯನ್ಸ್ ಸಂಸ್ಥೆ ಕಟಿಬದ್ಧವಾಗಿದೆ. ರೈತರಿಂದ ನೇರವಾಗಿ ದವಸ ಧಾನ್ಯಗಳನ್ನ ತಮ್ಮ ಸಂಸ್ಥೆಗಳು ಕೊಳ್ಳುವುದಿಲ್ಲ. ಸರ್ಕಾರದಿಂದ ನಿರ್ಧಾರಿತವಾದ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ವ್ಯವಸ್ಥೆ ಅಥವಾ ಮತ್ಯಾವುದಾದರೂ ವ್ಯವಸ್ಥೆಯ ನಿಯಮಗಳಿಗನುಗುಣವಾಗಿ ವ್ಯವಹರಿಸಬೇಕೆಂದು ನಮ್ಮ ಸರಬರಾಜುದಾರರಿಗೆ ಸೂಚಿಸಿದ್ದೇವೆ ಎಂದು ಆರ್ಐಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ರೈತರಿಗೆ ಅನ್ಯಾಯವಾಗುವ ರೀತಿಯಲ್ಲಿ ದೀರ್ಘಕಾಲೀನ ಗುತ್ತಿಗೆಗಳಿಗೆ ಮುಂದಾಗಿದ್ದಾಗಲೀ ಅಥವಾ ನಿಗದಿತ ದರಕ್ಕಿಂತ ಕಡಿಮೆ ಬೆಲೆಗೆ ತಮ್ಮ ಸರಬರಾಜುದಾರರು ರೈತರಿಂದ ಬೆಳೆ ಖರೀದಿ ಮಾಡಿದ್ದಾಗಲೀ ಯಾವತ್ತೂ ಆಗಿಲ್ಲ. ಮುಂದೆ ಎಂದಿಗೂ ಅಂತಹ ಬೆಳವಣಿಗೆ ಆಗುವುದಿಲ್ಲ” ಎಂದು ರಿಲಾಯನ್ಸ್ ಸಂಸ್ಥೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Amazon-Future War: ಕಷ್ಟದಲ್ಲಿದ್ದಾಗ ಕೈಹಿಡಿಯಲಿಲ್ಲ – ಅಮೇಜಾನ್ ವಿರುದ್ಧ ಫ್ಯೂಚರ್ ಗ್ರೂಪ್ ಸಿಇಒ ಕಿಡಿ
ಖಾಸಗಿ ಸಂಸ್ಥೆಗಳಿಗೆ ಕೃಷಿ ಮಾರುಕಟ್ಟೆಯಲ್ಲಿ ಅವಕಾಶ ಕೊಡುವುದು ಸೇರಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು, ಅದರಲ್ಲೂ ಪಂಜಾಬ್ ಮತ್ತು ಹರಿಯಾಣ ಭಾಗದ ರೈತರು ಹಲವು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಂಎಸ್ಪಿ ಬೆಲೆ ವ್ಯವಸ್ಥೆಯನ್ನು ರದ್ದು ಮಾಡಲಾಗುತ್ತದೆ. ಖಾಸಗಿ ಕಂಪನಿಗಳ ಕಪಿಮುಷ್ಠಿಗೆ ರೈತರನ್ನು ಸಿಲುಕಿಸುವ ಹುನ್ನಾರ ನಡೆದಿದೆ ಎಂಬುದು ರೈತರ ಪ್ರಮುಖ ಆತಂಕವಾಗಿದೆ. ಹೀಗಾಗಿ, ರಿಲಾಯನ್ಸ್ ಸಂಸ್ಥೆಯನ್ನೇ ಕೆಲ ಗುಂಪುಗಳು ಗುರಿಯಾಗಿಸಿ ದಾಳಿ ಆಡಿವೆ. ಪಂಜಾಬ್ನಲ್ಲಿ ರಿಲಾಯನ್ಸ್ಗೆ ಸೇರಿದ 1,500 ಮೊಬೈಲ್ ಟವರ್ ಮತ್ತು ಟೆಲಿಕಾಂ ಗೇರ್ಗಳನ್ನ ಪ್ರತಿಭಟನೆ ಹೆಸರಿನಲ್ಲಿ ನಾಶ ಮಾಡಲಾಗಿದೆ. ಈ ಘಟನೆ ವಿರುದ್ಧ ರಿಲಾಯನ್ಸ್ ಸಂಸ್ಥೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಈ ದುರ್ಘಟನೆಯಲ್ಲಿ ಸ್ವಾರ್ಥ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು, ಸಂಘಟನೆಗಳಿವೆ ಎಂದು ಆರೋಪಿಸಿದೆ.
ಕೃಷಿ ಕಾಯ್ದೆಯ ಒಳಿತಿನ ಬಗ್ಗೆ ರೈತರಿಗೆ ತಿಳಿಹೇಳಿ ಪ್ರತಿಭಟನೆ ಶಮನಗೊಳಿಸಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಆದರೆ, ಪ್ರತಿಭಟನಾಕಾರರೊಂದಿಗೆ ನಡೆದಿರುವ ಹಲವು ಸುತ್ತಿನ ಮಾತುಕತೆಗಳು ಯಾವುದೇ ಫಲ ತರಲು ವಿಫಲವಾಗಿವೆ. ಕಾಯ್ದೆಗಳನ್ನ ಸಂಪೂರ್ಣವಾಗಿ ಹಿಂಪಡೆಯಬೇಕೆಂದು ರೈತ ಸಂಘಟನೆಗಳು ಹಠ ತೊಟ್ಟಿವೆ. ಕೃಷಿ ಸುಧಾರಣೆಯ ಭಾಗವಾಗಿರುವ ಕಾಯ್ದೆಗಳನ್ನ ಹಿಂಪಡೆಯುವುದು ಬಿಟ್ಟು ಕಾಯ್ದೆಯ ಯಾವ ಅಂಶವನ್ನಾದರೂ ಪುನರ್ಪರಿಶೀಲಿಸುವುದಾಗಿ ಕೇಂದ್ರ ಸರ್ಕಾರವೂ ಹೇಳುತ್ತಾ ಬಂದಿದೆ. ಹೀಗಾಗಿ, ಇವತ್ತು ನಡೆಯುವ ಮತ್ತೊಂದು ಸುತ್ತಿನ ಸಂಧಾನ ಸಭೆಯಲ್ಲೂ ನಿರೀಕ್ಷಿತ ಫಲ ಸಿಗುವುದು ಅನುಮಾನವೇ ಆಗಿದೆ.
Published by:
Vijayasarthy SN
First published:
January 4, 2021, 11:38 AM IST