'ಅವಿಶ್ವಾಸ' ಚರ್ಚೆ: ಶಿವಸೇನೆಯಿಂದ ಯೂ-ಟರ್ನ್? ಸಂಸದರಿಗೆ ಜಾರಿಗೊಳಿಸಿದ ವಿಪ್ ಕೆಲವೇ ಗಂಟೆಗಳಲ್ಲಿ ವಾಪಸ್​​?


Updated:July 20, 2018, 9:21 AM IST
'ಅವಿಶ್ವಾಸ' ಚರ್ಚೆ: ಶಿವಸೇನೆಯಿಂದ ಯೂ-ಟರ್ನ್? ಸಂಸದರಿಗೆ ಜಾರಿಗೊಳಿಸಿದ ವಿಪ್ ಕೆಲವೇ ಗಂಟೆಗಳಲ್ಲಿ ವಾಪಸ್​​?

Updated: July 20, 2018, 9:21 AM IST
ನ್ಯೂಸ್​ 18 ಕನ್ನಡ

ನವದೆಹಲಿ(ಜು.20): ಶಿವಸೇನೆಯ ಮುಖಂಡ ಉದ್ಧವ್​ ಠಾಕ್ರೆ ತನ್ನ ಪಕ್ಷದ ಸಂಸದರರಿಗೆ ದೆಹಲಿಯಲ್ಲೇ ಇರುವಂತೆ ಸೂಚನೆ ನೀಡಿದ್ದಾರೆ. ಹೀಗಿದ್ದರೂ ಮೋದಿ ಸರ್ಕಾರದ ವಿರುದ್ಧ ವಿಪಕ್ಷದ ಅವಿಶ್ವಾಸ ಮಂಡನೆಯ ಚರ್ಚೆ ಕುರಿತಾಗಿ ಇಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಶಿವಸೇನೆಯ ಪದಾಧಿಕಾರಿಯೊಬ್ಬರು ಈ ಮಾಹಿತಿಯನ್ನು ನೀಡಿದ್ದಾರೆ. ನಿನ್ನೆಯಷ್ಟೇ ಶಿವಸೇನೆಯು ತನ್ನ ಸಂಸದರಿಗೆ ವಿಪ್​ ಜಾರಿಗೊಳಿಸುವ ಮೂಲಕ ಕೇಂದ್ರದ NDA ಸರ್ಕಾರವನ್ನು ಸಮರ್ಥಿಸುವಂತೆ ಸೂಚಿಸಿತ್ತು.

ಉದ್ಧವ್​ ಠಾಕ್ರೆಯ ನಿಕಟ ಸಹಯೋಗಿ ಹರ್ಷಲ್​ ಪ್ರಧಾನ್​ ಮಾತನಾಡುತ್ತಾ "ಉದ್ಧವ್​ಜೀಯವರು ತಮ್ಮ ಪಕ್ಷದ ಎಲ್ಲಾ ಸಂಸದರಿಗೆ ನಾಳೆ ದೆಹಲಿಯಲ್ಲೇ ಇರುವಂತೆ ಸೂಚಿಸಿದ್ದಾರೆ. ಅಲ್ಲದೇ ಪಕ್ಷದ ನಿರ್ಧಾರದ ಬಗ್ಗೆ ನಾಳೆ ಬೆಳಿಗ್ಗೆ ಶಿವಸೇನೆಯ ಅಧ್ಯಕ್ಷರು ಅವರಿಗೆ ಸೂಚನೆ ನೀಡಲಿದ್ದಾರೆ" ಎಂದು ತಿಳಿಸಿದ್ದಾರೆ.

ಇನ್ನು ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಚಂದ್ರಕಾಂತ ಖೈರ್​ ಮಾತನಾಡುತ್ತಾ "ಈ ಮೊದಲು ಜಾರಿಗೊಳಿಸಿದ ನೋಟಿಸ್​​(ವಿಪ್​)ನಲ್ಲಿ ಅವರು ದಿನವಿಡೀ ಸಂಸತ್ತಿನಲ್ಲಿರಬೇಕೆಂದು ಹೇಳಲಾಗಿತ್ತು. ಅಲ್ಲದೇ ಪಕ್ಷದ ಎಲ್ಲಾ ಸಂಸದರಿಗೂ ಅಂತಿಮ ನಿರ್ಧಾರವನ್ನು ಉದ್ಧವ್​ ಠಾಕ್ರೆ ತೆಗೆದುಕೊಳ್ಳಲಿದ್ದಾರೆ. ಈ ಕುರಿತಾಗಿ ಮಾಹಿತಿ ನೀಡಲಾಗುತ್ತದೆ ಎಂದಿತ್ತು" ಎಂದು ಹೇಳಿದ್ದಾರೆ. ಶಿವಸೇನೆಯ ಉನ್ನತ ಮೂಲಗಳಿಂದ ಲಭ್ಯವಾದ ಮಾಹಿತಿಯೊಂದರ ಅನ್ವಯ ಮೊದಲು "ತಪ್ಪಾಗಿ" ವಿಪ್​ ಜಾರಿ ಮಾಡಲಾಗಿದ್ದು, ಅದನ್ನು ಜಾರಿಗೊಳಿಸಿದ ಕೆಲವೇ ಗಂಟೆಗಳಲ್ಲಿ ಹಿಂಪಡೆಯಲಾಗೆದೆ ಎಂದು ತಿಳಿದು ಬಂದಿದೆ.

ಇದಕ್ಕೂ ಮೊದಲು ಗುರುವಾರದಂದು ಮಾತನಾಡಿದ್ದ ಶಿವಸೇನೆಯ ಮುಖಂಡರು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ಮಂಡನೆಯ ಚರ್ಚೆಯ ಬಳಿಕ ನಡೆಯುವ ಮತದಾನದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಸಮರ್ಥಿಸುವುದಾಗಿ ಹೇಳಿದ್ದರು. ಕಳೆದ ಹಲವಾರು ತಿಂಗಳಿನಿಂದ ಬಿಜೆಪಿಯ ವಿರುದ್ಧ ಶಿವಸೇನೆಯು ಭಾರೀ ವಾಗ್ದಾಳಿ ನಡೆಸುತ್ತಾ ಬಂದಿದೆ. ಹೀಗಿರುವಾಗ ಶಿವಸೇನೆಯು ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆ ಇಲ್ಲವೆಂದೇ ಎಲ್ಲರ ಅಭಿಪ್ರಾಯವಾಗಿತ್ತು.

ಅದೇನಿದ್ದರೂ ಕೇಂದ್ರದಲ್ಲಿರುವ NDA ಸರ್ಕಾರವನ್ನು ಬೆಂಬಲಿಸುವುದಾಗಿ ಹೇಳಿದ್ದ ಶಿವಸೇನೆಯು ಇದೀಗ ತನ್ನ ಸಂಸದರಿಗೆ ಜಾರಿಗೊಳಿಸಿರುವ ವಿಪ್​ ಹಿಂಪಡೆದಿರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ. ಇಂದು ನಡೆಯಲಿರುವ ಮತದಾನದ ಬಳಿಕವಷ್ಟೇ ಈ ಎಲ್ಲಾ ಅನುಮಾನಗಳಿಗೆ ತೆರೆ ಬೀಳಲಿದೆ.
First published:July 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...