• Home
 • »
 • News
 • »
 • national-international
 • »
 • Karnataka Politics: ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಇಲ್ಲ; ಮಿಷನ್ 150+ ಟಾರ್ಗೆಟ್​ ಎಂದ ಅಮಿತ್​ ಶಾ!

Karnataka Politics: ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಇಲ್ಲ; ಮಿಷನ್ 150+ ಟಾರ್ಗೆಟ್​ ಎಂದ ಅಮಿತ್​ ಶಾ!

ಅಮಿತ್ ಶಾ-ಯಡಿಯೂರಪ್ಪ ಚರ್ಚೆ

ಅಮಿತ್ ಶಾ-ಯಡಿಯೂರಪ್ಪ ಚರ್ಚೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದಲ್ಲಿ ಬಿಜೆಪಿಯು ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

 • Trending Desk
 • 4-MIN READ
 • Last Updated :
 • Karnataka, India
 • Share this:

ಸದ್ಯಕ್ಕೆ ಉನ್ನತ ಮೂಲಗಳಿಂದ ದೊರೆತಿರುವ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ (Karnataka) ಬಿಜೆಪಿಯು ಜೆಡಿಎಸ್ (BJP-JDS) ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದು ಕರ್ನಾಟಕದಲ್ಲಿ ಬಿಜೆಪಿಯು ಜೆಡಿಎಸ್ ಸೋಲಿಸಲು ಹಾಗೂ 150ಕ್ಕೂ ಅಧಿಕ ಕ್ಷೇತ್ರಗಳನ್ನು ಗೆಲ್ಲಲು ಚುನಾವಣೆ ಎದುರಿಸಲಿದೆ ಎಂದಿರುವುದಾಗಿ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.


ಈ ವರ್ಷ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಜರುಗಲಿದ್ದು ಈಗಾಗಲೇ ರಾಜ್ಯ ರಾಜಕೀಯ ವಲಯವು ಸಾಕಷ್ಟು ಸಕ್ರಿಯವಾಗುತ್ತಿದೆ. ಎಲ್ಲೆಡೆ ಆಡಳಿತಾರೂಢ ಪಕ್ಷ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಭರ್ಜರಿ ರಣತಂತ್ರಗಳನ್ನು ಹೆಣೆಯುವಲ್ಲಿ ನಿರತವಾಗಿವೆ ಎಂದರೂ ತಪ್ಪಿಲ್ಲ.


ಪ್ರಸ್ತುತ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಮಾತುಗಳು ತೆರೆಮರೆಯಿಂದ ಆಗಾಗ ಕೇಳಿಬರುತ್ತಿದ್ದವು. ಇನ್ನೊಂದೆಡೆ ಬಿಜೆಪಿಯೂ ಸಹ ಸುಮ್ಮನಿದ್ದ ಕಾರಣ ಈ ಬಗ್ಗೆ ಸಾಕಷ್ಟು ಸಂದೇಹಗಳೂ ಸಹ ವ್ಯಕ್ತವಾಗಿದ್ದವು.


ಆದರೆ, ಈಗ ದೊರೆತಿರುವ ಮಾಹಿತಿಗಳ ಪ್ರಕಾರ, ಕೇಂದ್ರದಲ್ಲಿರುವ ಬಿಜೆಪಿ ಹೈಕಮಾಂಡ್, ಕರ್ನಾಟಕದಲ್ಲಿ ಬಿಜೆಪಿಯು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಚಾರವನ್ನು ನೇರವಾಗಿ ತೀರಸ್ಕರಿಸಿದ್ದಾರೆನ್ನಲಾಗಿದೆ.


ಬಲ್ಲ ಮೂಲಗಳ ಪ್ರಕಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದಲ್ಲಿ ಬಿಜೆಪಿಯು ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದು ಈ ಬಾರಿ ಕರ್ನಾಟಕದಲ್ಲಿ ಬಿಜೆಪಿಯು 150ಕ್ಕೂ ಅಧಿಕ ಕ್ಷೇತ್ರಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಕುತೂಹಲ ಕೆರಳಿಸಿರುವ ಹಳೆಯ ಮೈಸೂರು ಭಾಗ


ಕರ್ನಾಟಕದಲ್ಲಿ ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿ ಉತ್ತಮ ಸ್ಥಾನಮಾನಗಳಿಸಿದ್ದರೂ ಸಹ ಕೆಲ ಪ್ರದೇಶಗಳಲ್ಲಿ ಬಿಜೆಪಿ ಸಾಕಷ್ಟು ದುರ್ಬಲವಾಗಿ ಗುರುತಿಸಿಕೊಂಡಿರುವುದು ಅಷ್ಟೇ ಸತ್ಯ. ಉದಾಹರಣೆಗೆ ಹಳೆಯ ಮೈಸೂರಿನ ಭಾಗ.


ಮುಂಚೆಯಿಂದಲೂ ಹಳೆಯ ಮೈಸೂರು ಭಾಗವು ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಮಹತ್ವ ನೀಡಿರುವಂತಹ ಪ್ರದೇಶವಾಗಿದೆ ಎಂದರೂ ತಪ್ಪಿಲ್ಲ. ಏಕೆಂದರೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಾರ್ಟಿಯ ಭದ್ರಕೋಟೆಯಾಗಿ ಇಂದಿಗೂ ಹಳೆಯ ಮೈಸೂರಿನ ಭಾಗ ಗುರುತಿಸಿಕೊಳ್ಳುತ್ತದೆ.


ಮಂಡ್ಯ, ಹಾಸನ, ಚಾಮರಾಜನಗರ, ರಾಮನಗರಗಳಂತಹ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷಕ್ಕೆ ತಿರುಗೇಟು ನೀಡುವುದು ಕಾಂಗ್ರೆಸ್ ಪಕ್ಷಕ್ಕಾಗಲಿ ಅಥವಾ ಬಿಜೆಪಿ ಪಕ್ಷಕ್ಕಾಗಲಿ ಖಂಡಿತ ಚೆಂಡು ಉರುಳಿಸುವಂತಹ ಸುಲಭದ ಕೆಲಸವಲ್ಲ. ಅಲ್ಲದೆ ಬಿಜೆಪಿಗೆ ಈ ಬಗ್ಗೆ ಅರಿವೂ ಸಹ ಇದೆ ಎಂಬುದರಲ್ಲಿ ಸಂಶಯವಿಲ್ಲ.
ಹಾಗಾಗಿಯೇ ದೆಹಲಿ ಸ್ಥಿತ ಬಿಜೆಪಿ ಹೈಕಮಾಂಡ್ ವತಿಯಿಂದ ಸಾಕಷ್ಟು ರಣತಂತ್ರಗಳನ್ನು ಈ ಬಾರಿ ಹಳೆಯ ಮೈಸೂರಿನ್ನು ಆಕರ್ಷಿಸುವ ಸಂಬಂಧ ಹೆಣೆಯಲಾಗುತ್ತಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.


ಸದ್ಯ, ಬಿಜೆಪಿ ಪಕ್ಷವು ಕರ್ನಾಟಕದ ಜೆಡಿಎಸ್ ಭದ್ರಕೋಟೆಗಳನ್ನು ತಮ್ಮದಾಗಿಸಿಕೊಳ್ಳಬೇಕೆಂದಿದ್ದಲ್ಲಿ ಈ ಕ್ಷೇತ್ರಗಳಲ್ಲಿ ಬಿಜೆಪಿ ವತಿಯಿಂದ ಸಾಕಷ್ಟು ಪ್ರಸಿದ್ಧ ಹಾಗೂ ಸದೃಢ ವ್ಯಕ್ತಿತ್ವವುಳ್ಳ ಮುಖಗಳನ್ನು ತರಬೇಕಾಗಬಹುದೆಂಬ ಲೆಕ್ಕಾಚಾರ ಹೊಂದಿದೆ.


ಏಕೆಂದರೆ ಜನಪ್ರೀಯ ವ್ಯಕ್ತಿತ್ವವುಳ್ಳ ಮುಖಗಳು ಇಂತಹ ಪ್ರದೇಶಗಳಲ್ಲಿ ಸಾಕಷ್ಟು ವರ್ಚಸ್ಸು ಹೊಂದಿದ್ದು ಚುನಾವಣೆಯಲ್ಲಿ ಬೇಕಾದ ಫಲಿತಾಂಶ ತಂದುಕೊಡಲು ಸಮರ್ಥವಾಗಿರುತ್ತವೆ ಎಂಬ ದಟ್ಟವಾದ ಅನಿಸಿಕೆಯನ್ನು ಬಿಜೆಪಿ ಹೊಂದಿದೆ.


ಅರುಣ್ ಸಿಂಗ್


ಇನ್ನು ಕರ್ನಾಟಕದ ಇನ್-ಚಾರ್ಜ್ ಆಗಿರುವ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾದ ಅರುಣ್ ಸಿಂಗ್ ಅವರು, "ನಾವು ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಹಳೆಯ ಮೈಸೂರು ಭಾಗ ಹಾಗೂ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಹೆಚ್ಚು ಶ್ರಮಪಟ್ಟು ಕೆಲಸ ನಿರ್ವಹಿಸಬೇಕಾಗಿದೆ, ಬಿಜೆಪಿ ಈ ಎರಡೂ ಭಾಗಗಳಲ್ಲಿ ಎಸ್ಸಿ ಹಾಗೂ ಒಬಿಸಿ ಸಮುದಾಯದವರ ಸಭೆಗಳನ್ನು ಆಯೋಜಿಸುತ್ತಿದೆ, ನಾವು ಈಗಾಗಲೇ ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಏಳು ಮಂತ್ರಿಗಳು ಹಾಗೂ ಕೇಂದ್ರದಲ್ಲಿ ಒಬ್ಬ ಮಂತ್ರಿಯನ್ನು ಹೊಂದಿದ್ದೇವೆ" ಎಂದು ಹೇಳಿದ್ದಾರೆ.


ಮುಂದುವರೆಯುತ್ತ, ನಾವು ಈ ಹಿಂದೆ ಹೆಚ್ಚು ಸೀಟುಗಳನ್ನು ಗೆಲ್ಲದ ಪ್ರದೇಶಗಳಲ್ಲಿ ಈಗ ಅನೇಕ ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ, ರಾಜ್ಯದಲ್ಲಿ 2Cಹಾಗೂ 2D ಮೀಸಲಾತಿಗಳನ್ನು ಘೋಷಿಸಿದ್ದೇವೆ ಹಾಗೂ ಮುಂಬರುವ ದಿನಗಳಲ್ಲಿ ನಾವು ಇನ್ನೂ ಅನೇಕ ಘೋಷಣೆಗಳನ್ನು ಹೊಂದಿದ್ದೇವೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ.


ಪ್ರಧಾನಿ ಟ್ರಂಪ್ ಕಾರ್ಡ್ ಇದ್ದಂತೆ


ಇನ್ನು, ಪ್ರಧಾನಿ ಮೋದಿ ಅವರ ಹೆಸರು ಹಾಗೂ ಜನಪ್ರೀಯತೆ ರಾಜ್ಯದಲ್ಲಿ ಟ್ರಂಪ್ ಕಾರ್ಡ್ ಆಗಿ ಗುರುತಿಸಲ್ಪಟ್ಟಿದೆ. ಈಗಾಗಲೇ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿ ಒಕ್ಕಲಿಗ ಸಮುದಾಯದ ಐತಿಹಾಸಿಕ ನಾಯಕರಾದ ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ಧನಾತ್ಮಕ ಸಂದೇಶ ಸಾರಿದ್ದಾರೆ.


ಇದನ್ನೂ ಓದಿ: Kodimatha Swamiji: 2023ರ ಚುನಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಭವಿಷ್ಯ! ಈ ಬಾರಿಯೂ ಸಮ್ಮಿಶ್ರ ಸರ್ಕಾರ ಫಿಕ್ಸಾ?


ಇನ್ನೂ ಮುಂಬರುವ ದಿನಗಳಲ್ಲಿ ಮೋದಿ ಅವರು ಮೂರು ಬಾರಿ ಕರ್ನಾಟಕದ ಪ್ರವಾಸ ಕೈಗೊಳ್ಳಲಿದ್ದು ನಿನ್ನೆಯ ರಾಷ್ಟ್ರೀಯ ಯುವದಿನಾಚರಣೆ ನಿಮಿತ್ತ ಹುಬ್ಬಳ್ಳಿಯ ಭೇಟಿಯೂ ಅದರಲ್ಲೊಂದಾಗಿದೆ. ಇದನ್ನು ಹೊರತುಪಡಿಸಿ ಪ್ರಧಾನಿ ಮೋದಿ ಅವರು ಮುಂಬರುವ ಜನವರಿ 19 ಹಾಗೂ 29ರಂದು ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.


ಹಾಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಯಾವ ರೀತಿ ತನ್ನ ರಾಜಕೀಯ ದಾಳಗಳನ್ನು ಉರುಳಿಸಲಿದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ. ಅಷ್ಟಕ್ಕೂ ಈ ಬಾರಿಯ ಕರ್ನಾಟಕದ ವಿಧಾನಸಭೆ ಚುನಾವಣೆ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಸಾಕಷ್ಟು ಸವಾಲಿನ ಹಾಗೂ ಪ್ರತಿಷ್ಠೆಯ ವಿಷಯವಾಗಿದ್ದು ಹೆಚ್ಚು-ಕಡಿಮೆ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಜಿದ್ದಿನ ಹೋರಾಟವನ್ನು ನಿರೀಕ್ಷಿಸಬಹುದಾಗಿದೆ ಎಂಬುದು ಹಲವು ರಾಜಕೀಯ ವಿಶ್ಲೇಷಕರ ಮಾತಾಗಿದೆ.

Published by:ಪಾವನ ಎಚ್ ಎಸ್
First published: