• Home
  • »
  • News
  • »
  • national-international
  • »
  • Nivar Cyclone: ತಮಿಳುನಾಡಿಗೆ ಇಂದು ಅಪ್ಪಳಿಸಲಿದೆ ನಿವಾರ್ ಚಂಡಮಾರುತ; ಚೆನ್ನೈನಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತ

Nivar Cyclone: ತಮಿಳುನಾಡಿಗೆ ಇಂದು ಅಪ್ಪಳಿಸಲಿದೆ ನಿವಾರ್ ಚಂಡಮಾರುತ; ಚೆನ್ನೈನಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತ

 ಚಂಡಮಾರುತ

ಚಂಡಮಾರುತ

Chennai Rain: ತಮಿಳುನಾಡಿನಲ್ಲಿ ಇಂದು ರಾತ್ರಿ ನಿವಾರ್ ಚಂಡಮಾರುತ ಅಪ್ಪಳಿಸಲಿದೆ. ಈಗಾಗಲೇ ತಮಿಳುನಾಡಿನಲ್ಲಿ 24 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ನಿವಾರ್ ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈಗೆ ತೆರಳುವ 24 ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮುಂದೆ ಓದಿ ...
  • Share this:

ಚೆನ್ನೈ (ನ. 25): ತಮಿಳುನಾಡು, ಪುದುಚೆರಿಯಲ್ಲಿ ಇಂದಿನಿಂದ ನಿವಾರ್ ಚಂಡಮಾರುತದ ಅಬ್ಬರ ಹೆಚ್ಚಾಗಲಿದೆ. ಇಂದು ಸಂಜೆ ತಮಿಳುನಾಡಿನ ಕರಾವಳಿ ಪ್ರದೇಶಗಳಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದೆ. ಇದರ ಪರಿಣಾಮ ತಮಿಳುನಾಡಿನ ನೆರೆಯ ರಾಜ್ಯಗಳಾದ ಕರ್ನಾಟಕ, ಕೇರಳ, ಆಂಧ್ರ ಪ್ರದೇಶದ ಮೇಲೂ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಬೆಳಗ್ಗೆಯಿಂದಲೇ ತಮಿಳುನಾಡಿನಲ್ಲಿ ಮಳೆಯ ಅಬ್ಬರ ಶುರುವಾಗಿದೆ. ಭೀಕರ ನಿವಾರ್ ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈಗೆ ತೆರಳುವ 24 ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇಂದು ರಾತ್ರಿ 8 ಗಂಟೆಗೆ ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ನಿವಾರ್ ಚಂಡಮಾರುತ ಅಪ್ಪಳಿಸಲಿದೆ. ಹೀಗಾಗಿ, ಹೈಅಲರ್ಟ್​ ಘೋಷಿಸಲಾಗಿದೆ. ಈಗಾಗಲೇ ತಮಿಳುನಾಡಿನಲ್ಲಿ 24 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ.


ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ನಿವಾರ್ ಚಂಡಮಾರುತ ಅಪ್ಪಳಿಸಲಿದೆ. ಒಂದು ಗಂಟೆಗೆ 150 ಕಿಮೀ ವೇಗದಲ್ಲಿ ನಿವಾರ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭೀಕರ ನಿವಾರ್ ಚಂಡಮಾರುತದ ಪರಿಣಾಮದಿಂದ ತಮಿಳುನಾಡಿನಲ್ಲಿ ಇಂದು ಸರ್ಕಾರಿ ರಜೆ ಘೋಷಿಸಲಾಗಿದೆ. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶದಲ್ಲಿ ನಿವಾರ್ ಚಂಡಮಾರುತದ ಪ್ರಭಾವ ಹೆಚ್ಚಾಗಿರಲಿದೆ ಎನ್ನಲಾಗಿದೆ.ಇಂದು ತಮಿಳುನಾಡಿನ ಕಾರೈಕಾಲ್ ಮತ್ತು ಮಾಮಲ್ಲಪುರಂ ನಡುವೆ ವಾಯುವ್ಯ ದಿಕ್ಕಿನಲ್ಲಿ ಚಲಿಸಲಿದೆ. ಭಾರತದ ಪೂರ್ವ ಕರಾವಳಿಯನ್ನು ತಲುಪುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ತಮಿಳುನಾಡು ಮತ್ತು ಈಶಾನ್ಯ ಶ್ರೀಲಂಕಾಗಳಲ್ಲೂ ವಾಯುಭಾರ ಕುಸಿತವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್​ನಲ್ಲಿ ಇಂದು ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.


ಇದನ್ನೂ ಓದಿ: Karnataka Weather: ನಿವಾರ್ ಚಂಡಮಾರುತದ ಎಫೆಕ್ಟ್​; ಇನ್ನೆರಡು ದಿನ ಬೆಂಗಳೂರಿನಲ್ಲಿ ಭಾರೀ ಮಳೆ


ಇಂದು ರಾಯಲಸೀಮಾ, ತೆಲಂಗಾಣ, ದಕ್ಷಿಣ ಒಳನಾಡು ಕರ್ನಾಟಕ ಮತ್ತು ಕರಾವಳಿ ಆಂಧ್ರ ಪ್ರದೇಶದಲ್ಲಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 22 ಎನ್​ಡಿಆರ್​ಎಫ್​ ತಂಡಗಳು ಬೀಡು ಬಿಟ್ಟಿವೆ. 800 ರಕ್ಷಣಾ ಸಿಬ್ಬಂದಿ ನಿವಾರ್ ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ಸಜ್ಜಾಗಿದ್ದಾರೆ.ಇಂದು ಬೆಳಗ್ಗೆಯಿಂದ ತಮಿಳುನಾಡಿನಲ್ಲಿ ಮಳೆಯ ಅಬ್ಬರ ಶುರುವಾಗಿದ್ದು, ಮಧ್ಯಾಹ್ನದ ಬಳಿಕ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಹೀಗಾಗಿ, ಮೀನುಗಾರರು ಸಮುದ್ರದ ದಡಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಆಂಧ್ರಪ್ರದೇಶದಲ್ಲೂ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಮುಖ್ಯಮಂತ್ರಿ ವೈಎಸ್​ ಜಗನ್ ಮೋಹನ್ ರೆಡ್ಡಿ ಹೈ ಅಲರ್ಟ್​ ಆಗಿರುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ.


ಕರ್ನಾಟಕದಲ್ಲೂ ನಿವಾರ್ ಚಂಡಮಾರುತದ ಪರಿಣಾಮ ಉಂಟಾಗಲಿದ್ದು, ಹಲವು ಜಿಲ್ಲೆಗಳಲ್ಲಿ ಹಳದಿ ಮತ್ತು ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ನಿವಾರ್ ಚಂಡಮಾರುತದ ಪರಿಣಾಮದಿಂದ ಇಂದು ಮತ್ತು ನಾಳೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ. ಇಂದಿನಿಂದ ಎರಡು ದಿನ ರಾಜ್ಯದ ಎಲ್ಲಾ ಭಾಗದಲ್ಲೂ ಮಳೆಯಾಗುವ ಸಾಧ್ಯತೆಯಿದೆ. ಇಂದಿನಿಂದ ಎರಡು ದಿನ ರಾಜ್ಯದ ಎಲ್ಲಾ ಭಾಗದಲ್ಲೂ ಮಳೆಯಾಗಲಿದ್ದು, ಬೆಂಗಳೂರು‌ ನಗರ,‌ ಗ್ರಾಮಾಂತರ, ಕೋಲಾರ‌, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಚಾಮರಾಜನಗರದಲ್ಲಿ ಭಾರೀ‌ ಮಳೆಯಾಗುವ ಸಾಧ್ಯತೆಯಿದೆ.

Published by:Sushma Chakre
First published: