Sushma ChakreSushma Chakre
|
news18-kannada Updated:November 27, 2020, 8:53 AM IST
ನಿವಾರ್ ಚಂಡಮಾರುತದಿಂದ ಬಿದ್ದ ಮರಗಳು
ಚೆನ್ನೈ (ನ. 27): ತಮಿಳುನಾಡಿಗೆ ಅಪ್ಪಳಿಸಿರುವ ನಿವಾರ್ ಚಂಡಮಾರುತ ತನ್ನ ಉಗ್ರರೂಪ ತೋರಿಸುತ್ತಿದೆ. ಬುಧವಾರ ರಾತ್ರಿ ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ನಿವಾರ್ ಚಂಡಮಾರುತ ಉಂಟಾಗಿತ್ತು. ಭೀಕರ ಚಂಡಮಾರುತವಾದ ನಿವಾರ್ ಆರ್ಭಟಕ್ಕೆ ಈಗಾಗಲೇ ಚೆನ್ನೈ ಸುತ್ತಮುತ್ತ ಐವರು ಪ್ರಾಣ ಕಳೆದುಕೊಂಡಿದ್ದಾರೆ. ತಮಿಳುನಾಡು, ಪುದುಚೆರಿಯಲ್ಲಿ ಸಾವಿರಾರು ಮರಗಳು ಉರುಳಿಬಿದ್ದಿದ್ದು, ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಗಂಟೆಗೆ 120ರಿಂದ 130 ಕಿಮೀ ವೇಗದಲ್ಲಿ ಅಪ್ಪಳಿಸುತ್ತಿರುವ ನಿವಾರ್ ಚಂಡಮಾರುತದ ತೀವ್ರತೆ ಇನ್ನಷ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಈಗಾಗಲೇ ತಮಿಳುನಾಡು ಮತ್ತು ಪುದುಚೆರಿ ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಹಾಗೇ, ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ. ಪುದುಚೆರಿಯಲ್ಲಿ ನಿವಾರ್ ಸೈಕ್ಲೋನ್ನಿಂದ ಸುಮಾರು 400 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗಳು ನಷ್ಟವಾಗಿವೆ. ಪುದುಚೆರಿಗೆ ತುರ್ತಾಗಿ 50 ಕೋಟಿ ರೂ. ಪರಿಹಾರ ಘೋಷಿಸಬೇಕೆಂದು ಸಿಎಂ ವಿ. ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ನಿವಾರ್ ಚಂಡಮಾರುತ ತಮಿಳುನಾಡು ಮತ್ತು ಪುದುಚೆರಿಯ ಕಾರೈಕಲ್ ಹಾಗೂ ಮಾಮಲ್ಲಪುರಂ ನಡುವೆ ಹಾದುಹೋಗಲಿದೆ. ಈಗಾಗಲೇ ಎನ್ಡಿಆರ್ಎಫ್ ತಂಡ ತಮಿಳುನಾಡು ಮತ್ತು ಪುದುಚೆರಿಯಲ್ಲಿ ಬೀಡುಬಿಟ್ಟಿವೆ. 1.5 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಚೆನ್ನೈ, ಇರುಂಬುಲಿಯಾರ್, ಉರಪಕ್ಕಂ ಮುಂತಾದ ತಗ್ಗು ಪ್ರದೇಶಗಳಲ್ಲಿ ಮನೆಯೊಳಗೆ ನೀರು ನುಗ್ಗಿ, ಅವಾಂತರಗಳು ಸೃಷ್ಟಿಯಾಗಿವೆ.
ಪುದುಚೆರಿಯಲ್ಲಿ ನಿವಾರ್ ಚಂಡಮಾರುತದಿಂದ 400 ಕೋಟಿ ರೂ. ನಷ್ಟವಾಗಿದೆ. 200 ಹೆಕ್ಟೇರ್ ತರಕಾರಿ ಬೆಳೆ, 170 ಹೆಕ್ಟೇರ್ ಕಬ್ಬು, 55 ಹೆಕ್ಟೇರ್ ಬಾಳೆಗಿಡ ಸಂಪೂರ್ಣ ನೆಲಸಮವಾಗಿವೆ ಎಂದು ಪುದುಚೆರಿ ಸಿಎಂ ನಾರಾಯಣಸ್ವಾಮಿ ಮಾಹಿತಿ ನೀಡಿದ್ದಾರೆ.
ತಮಿಳುನಾಡು, ಪುದುಚೆರಿಯಲ್ಲಿ ನಿವಾರ್ ಚಂಡಮಾರುತದ ಅಬ್ಬರ ಹೆಚ್ಚಾಗಿದೆ. ಇದರ ಪರಿಣಾಮ ತಮಿಳುನಾಡಿನ ನೆರೆಯ ರಾಜ್ಯಗಳಾದ ಕರ್ನಾಟಕ, ಕೇರಳ, ಆಂಧ್ರ ಪ್ರದೇಶದ ಮೇಲೂ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭೀಕರ ನಿವಾರ್ ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈಗೆ ತೆರಳುವ ಹಲವು ಬಸ್, ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ನಿವಾರ್ ಚಂಡಮಾರುತ ಅಪ್ಪಳಿಸಿದೆ. ಭೀಕರ ನಿವಾರ್ ಚಂಡಮಾರುತದ ಪರಿಣಾಮದಿಂದ ತಮಿಳುನಾಡಿನಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶದಲ್ಲಿ ನಿವಾರ್ ಚಂಡಮಾರುತದ ಪ್ರಭಾವ ಹೆಚ್ಚಾಗಿರಲಿದೆ ಎನ್ನಲಾಗಿದೆ.
Published by:
Sushma Chakre
First published:
November 27, 2020, 8:05 AM IST