ಸ್ವಘೋಷಿತ ದೇವಮಾನವ ನಿತ್ಯಾನಂದ ಕೆಲ ದಿನಗಳಿಂದ ನಾಪತ್ತೆಯಾಗಿದ್ಧಾರೆ. ತನಿಖಾ ಸಂಸ್ಥೆಗಳು ಅವರ ಬೆನ್ನುಬಿದ್ದಿವೆ. ತಾನು ದೇವರು. ತನ್ನನ್ನು ಯಾವ ಕಾನೂನು ತಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಿರುವ ನಿತ್ಯಾನಂದ ಬಗ್ಗೆ ಅಚ್ಚರಿ ಮೂಡದೇ ಇರಲ್ಲ. ಈ ಒಂದು ಸುದ್ದಿ ನಿಮ್ಮ ಮೂಗಿನ ಮೇಲೆ ನೀವು ಬೆರಳಿಟ್ಟುಕೊಂಡರೆ ಅಚ್ಚರಿ ಇಲ್ಲ. ದಕ್ಷಿಣ ಅಮೆರಿಕದಲ್ಲಿ ನಿತ್ಯಾನಂದ ಹೊಸ ಅಪ್ಪಟ ಹಿಂದೂ ದೇಶ ಕಟ್ಟುತ್ತಿದ್ದಾರೆ. ಅದೇ ಕೈಲಾಸ ರಾಷ್ಟ್ರ. ಇದು ತಯಾಷೆಯಲ್ಲ, ನಿಜ.
ದಕ್ಷಿಣ ಅಮೆರಿಕ ಖಂಡದ ಈಕ್ವೆಡಾರ್ ದೇಶಕ್ಕೆ ಸೇರಿದ ದ್ವೀಪವೊಂದನ್ನು ನಿತ್ಯಾನಂದ ಖರೀದಿಸಿದ್ದಾರೆ. ಈ ದ್ವೀಪಕ್ಕೆ ಅವರು ಕೈಲಾಸ ಎಂದು ಹೆಸರಿಟ್ಟಿದ್ಧಾರೆ. ಟ್ರಿನಿಡಾಡ್ ಅಂಡ್ ಟೊಬಾಗೋ ದ್ವೀಪಗಳ ಸಮೀಪ ಇರುವ ಇವರ ಕೈಲಾಸ ದ್ವೀಪವನ್ನು ಇವರು ಹಿಂದೂ ಸಾರ್ವಭೌಮ ದೇಶ ಎಂದು ಸ್ವಘೋಷಣೆ ಮಾಡಿದ್ದಾರೆ. ಇನ್ನೂ ಅಚ್ಚರಿಯ ವಿಷಯವೆಂದರೆ, ಇವರ ಕೈಲಾಸ ರಾಷ್ಟ್ರಕ್ಕೆ ವಿಶ್ವಸಂಸ್ಥೆಯ ಮಾನ್ಯತೆ ಪಡೆಯಲು ಗಂಭೀರ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಅಮೆರಿಕದ ಪ್ರಖ್ಯಾತ ಕಾನೂನು ಸಲಹಾ ಸಂಸ್ಥೆಯೊಂದು ಈಗಾಗಲೇ ಕೈಲಾಸ ರಾಷ್ಟ್ರದ ಮಾನ್ಯತೆಗೆ ವಿಶ್ವಸಂಸ್ಥೆ ಬಳಿ ಅರ್ಜಿ ಗುಜರಾಯಿಸಿದೆ ಎಂಬ ಸುದ್ದಿ ಕೇಳಿಬಂದಿದೆ.
ಇದನ್ನೂ ಓದಿ: ಅಪಾಯದ ಮಟ್ಟ ಮೀರಿರುವ ಬೆಂಗಳೂರು ಟ್ರಾಫಿಕ್; ಪರಿಸ್ಥಿತಿ ಹೀಗೆ ಮುಂದುವರೆದರೆ ಡೆಡ್ ಸಿಟಿ ಆಗುವ ಭೀತಿಯಲ್ಲಿ ಮಹಾನಗರ!
ನಾವು ನೀವು ಕನಸಿನಲ್ಲೂ ಎಣಿಸದ ರೀತಿಯಲ್ಲಿ ನಿತ್ಯಾನಂದ ಹೊಸ ಲೋಕ ಸೃಷ್ಟಿಸಿದ್ದಾರೆ. Kailaasa.org ಎಂಬ ಜಾಲತಾಣದಲ್ಲಿ ಅವರ ಎಲ್ಲಾ ಪರಿಕಲ್ಪನೆಗಳ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಈ ವೆಬ್ಸೈಟ್ನಲ್ಲಿರುವ ಮಾಹಿತಿ ಪ್ರಕಾರ, ಕೈಲಾಸ ಎಂಬುದು ಯಾವುದೇ ಗಡಿಗಳಿಲ್ಲದ ಸೀಮಾತೀತವಾದ ರಾಷ್ಟ್ರವಾಗಿದೆ. ಹಿಂದೂ ಧರ್ಮಪಾಲನೆಯಿಂದ ವಂಚಿತವಾದ ಧರ್ಮೀಯರಿಗೆಂದೇ ರೂಪಿಸಲಾದ ರಾಷ್ಟ್ರದ ಇದಾಗಿದೆ ಎಂದು ಹೇಳಿಕೊಳ್ಳಲಾಗಿದೆ. ನಿತ್ಯಾನಂದರ ‘ಕೈಲಾಸ’ದಲ್ಲಿ ಪ್ರತ್ಯೇಕ ಸಂವಿಧಾನ, ಭದ್ರತಾ ಪಡೆ, ಶಾಸನ, ಆರ್ಥಿಕತೆ, ಕರೆನ್ಸಿ, ಲಾಂಛನ, ರಿಸರ್ವ್ ಬ್ಯಾಂಕ್, ಶಿಕ್ಷಣ ಇತ್ಯಾದಿ ವ್ಯವಸ್ಥೆಗಳಿವೆಯಂತೆ. ಕೈಲಾಸಕ್ಕೆ ಪ್ರಧಾನಿ, ಸಂಪುಟ ಸೇರಿದಂತೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಇದೆ. ಹಾಗೆಯೇ, ಕೈಲಾಸಕ್ಕೆ ಹೋಗಲು ಪ್ರತ್ಯೇಕ ಪಾಸ್ಪೋರ್ಟ್ ಕೂಡ ರೂಪಿಸಲಾಗಿದೆ.
ನಿತ್ಯಾನಂದರ ಕೈಲಾಸದಲ್ಲಿ ಹಣದ ಹರಿವಿಗೆ ಕ್ರಿಪ್ಟೋಕರೆನ್ಸಿ ಅಥವಾ ಡಿಜಿಟಲ್ ರೂಪದ ಗೂಢ ಹಣ ಚಲಾವಣೆ ಪದ್ಧತಿಗೆ ಅವಕಾಶ ಕೊಡಲಾಗಿದೆ. ಹಿಂದೂ ಧಾರ್ಮಿಕ ಭಕ್ತರು ಕೈಲಾಸದಲ್ಲಿ ಹಣ ಹೂಡಿಕೆ ಮಾಡಬಹುದು. ಇಲ್ಲಿ ಹೂಡಿಕೆದಾರರಿಗೆ ಆಕರ್ಷಕ ಲಾಭ ಸಿಗುತ್ತದೆ ಎಂದು ಈ ವೆಬ್ಸೈಟ್ ಹೇಳಿಕೊಂಡಿದೆ.
ನಿತ್ಯಾನಂದರ ನಾಡಿನಲ್ಲಿ ಇಂಗ್ಲೀಷ್, ಸಂಸ್ಕೃತ ಮತ್ತು ತಮಿಳು ಭಾಷೆಗಳಿಗೆ ಮಾನ್ಯತೆ ಇದೆ. ಹಿಂದೂ ಧರ್ಮದ ವಿವಿಧ ಪಂಥಗಳು ತಮ್ಮ ತಮ್ಮ ಸಂಪ್ರದಾಯಗಳನ್ನು ಇಲ್ಲಿ ನಿರ್ಭೀತಿಯಿಂದ ಅನುಸರಿಸಬಹುದು. ಸನಾತನ ಹಿಂದೂ ಧರ್ಮದ ಆಗಮ ಪದ್ಧತಿಗಳನ್ನು ಅಪಭ್ರಂಶವಲ್ಲದ ಅಪ್ಪಟ ರೂಪದಲ್ಲಿ ಪಾಲನೆ ಮಾಡಲಾಗುತ್ತದೆಯಂತೆ. ಈ ದೇಶದಲ್ಲಿ ಮಂದಿರ ಆಧಾರಿತ ಜೀವನಶೈಲಿ, ಎಲ್ಲರಿಗೂ ಉಚಿತ ಶಿಕ್ಷಣ, ಉಚಿತ ಆಹಾರ ಇರುತ್ತದೆ. ಗುರುಕುಲ ಪದ್ಧತಿಯಲ್ಲಿ ಶಿಕ್ಷಣವಿರುತ್ತದೆ.
ಕುತೂಹಲವೆಂದರೆ ಗೂಗಲ್ನಲ್ಲಿ ಕೈಲಾಸ ರಾಷ್ಟ್ರದ ಬಗ್ಗೆ ಜನರು ಕುತೂಹಲದಿಂದ ನಡೆಸುತ್ತಿರುವ ಶೋಧಗಳ ಪ್ರಮಾಣ ಹೆಚ್ಚಾಗಿದೆ. ಕೈಲಾಸದ ಸ್ಥಳ, ಪಾಸ್ಪೋರ್ಟ್ ಇತ್ಯಾದಿ ಮಾಹಿತಿಯನ್ನು ಜನರು ಹೆಚ್ಚು ಸರ್ಚ್ ಮಾಡುತ್ತಿದ್ಧಾರೆ. ಬಿಡದಿ ಆಶ್ರಮದಲ್ಲಿ ಯೋಗ ಧ್ಯಾನ ಪೀಠಂ ಸ್ಥಾಪಿಸಿ ದೂರದ ಅಮೆರಿಕದಲ್ಲಿ ಒಂದು ರಾಷ್ಟ್ರವನ್ನೇ ಕಟ್ಟಲು ಹೊರಟಿರುವ ನಿತ್ಯಾನಂದರ ಹೊಸ ಸಾಹಸಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಗೊಂದಲಕ್ಕೊಳಗಾಗಿದ್ದಾರೆ.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ