ಇಂದು ಮಹತ್ವದ ಎನ್​ಡಿಎ ಸಭೆ: ನಿತೀಶ್ ಕುಮಾರ್ ಭವಿಷ್ಯ ನಿರ್ಧಾರ

ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ತೋರದ ಹಿನ್ನೆಲೆಯಲ್ಲಿ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರಾ ಎಂಬ ಪ್ರಶ್ನೆ ಇದೆ. ಇವತ್ತು ಎನ್​ಡಿಎ ಸಭೆಯಲ್ಲಿ ಇದರ ನಿರ್ಧಾರ ಆಗಲಿದೆ.

 ನಿತೀಶ್‌ ಕುಮಾರ್‌.

ನಿತೀಶ್‌ ಕುಮಾರ್‌.

  • Share this:
ನವದೆಹಲಿ, ನ. 15: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷ ಜೆಡಿಯು ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿರುವುದರಿಂದ ನಿತೀಶ್ ಕುಮಾರ್ ಅವರು ಆರನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೋ ಇಲ್ಲವೋ ಎಂಬುದು ಇಂದು ನಿರ್ಧಾರವಾಗಲಿದೆ.

ಚುನಾವಣೆಗೂ ಮುನ್ನವೇ ನಿತೀಶ್ ಕುಮಾರ್ ಅವರನ್ನು ಜೆಡಿಯು-ಬಿಜೆಪಿ ನೇತೃತ್ವದ ಮೈತ್ರಿಕೂಟ ಎನ್ ಡಿಎ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಬಳಿಕ ಆರ್ ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನದ ಎದುರು ಬಹಳಷ್ಟು ತಿಣಕಾಡಿ ಎನ್ ಡಿಎ ಸರಳ ಬಹುಮತ ಗಳಿಸಿದೆ. ಆದರೆ, ಜೆಡಿಯು ಪಕ್ಷ ಅತ್ಯಂತ ಕಳಪೆ ಸಾಧನೆ ತೋರಿರುವ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವ ಬಗ್ಗೆ ಅನುಮಾನಗಳು ಮೂಡುತ್ತಿವೆ. ಕೆಲ ಬಿಜೆಪಿ ನಾಯಕರಿಂದ ಅಪಸ್ವರವೂ ಕೇಳಿಬರುತ್ತಿದೆ.

ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಎನ್​ಡಿಎ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ನಿತೀಶ್ ಕುಮಾರ್ ಪಾಲಿಗೆ ಅತ್ಯಂತ ನಿರ್ಣಾಯಕವೂ ಆಗಿದೆ. ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದ್ದು ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಿತೀಶ್ ಕುಮಾರ್ ಹಾಗೂ ಇನ್ನಿತರ ಎನ್​ಡಿಎ ನಾಯಕರು ಭಾಗವಹಿಸಲಿದ್ದಾರೆ. ಎಲ್ಲರೂ ಸೇರಿ ಸಮಾಲೋಚನೆ ನಡೆಸಿ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎನ್ನಲಾಗಿದೆ. ಸಭೆಯ ಬಳಿಕ ಮೈತ್ರಿಕೂಟದ ವತಿಯಿಂದ ಅಧಿಕೃತವಾಗಿ ಮುಖ್ಯಮಂತ್ರಿ ಯಾರು ಎಂಬ ಸಂಗತಿ ಘೋಷಣೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ನಮ್ಮ ಸೈನಿಕರು ಗಡಿಯನ್ನು ರಕ್ಷಿಸುವುದನ್ನು ತಡೆಯಲು ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ- ಪಿಎಂ ಮೋದಿ

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ 108 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 43 ಸ್ಥಾನಗಳನ್ನು ಮಾತ್ರ ಗೆದ್ದಿರುವುದರಿಂದ ತೊಡಕಾಗಿದೆ. ಇಲ್ಲಿ ಆರ್ ಜೆಡಿ 75 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ‌ ಹೊರಹೊಮ್ಮಿದೆ. ಬಿಜೆಪಿ 74 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿದೆ.

ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ ಬಹುಮತಕ್ಕೆ ಬೇಕಿದ್ದ 122 ಸ್ಥಾನಗಳನ್ನು ಗೆಲ್ಲದಿದ್ದರೂ ತೀವ್ರ ಪೈಪೋಟಿ ನೀಡಿದೆ. ಮತ್ತು 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು-ಸೋಲಿನ ಪ್ರಮಾಣ 1,000ದ ಒಳಗಡೆ ಇದೆ. ಅಂಚೆ ಮತಗಳ ಎಣಿಕೆ ಸರಿಯಾಗಿ ಆಗಿಲ್ಲ ಎಂಬ ದೂರಿದೆ. ಕೆಲವು ಕಡೆ ಪೂರ್ಣ ಪ್ರಮಾಣದಲ್ಲಿ ಮತ ಎಣಿಕೆ ಮಾಡಿಲ್ಲ ಎಂಬ ಗುರುತರ ಆರೋಪವೂ ಕೇಳಿಬಂದಿದೆ.

ಇದನ್ನೂ ಓದಿ: ಪಾಕ್​ನಿಂದ ಕದನ ವಿರಾಮ ಉಲ್ಲಂಘನೆ: ಐವರು ಸೈನಿಕರು, ನಾಲ್ವರು ನಾಗರಿಕರ ಸಾವು

ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ 'ಬಿಜೆಪಿ ಚೋರ್ ದರ್ವಾಜಾ (ಕಳ್ಳ ಕದ)ದ ಮೂಲಕ ಅಧಿಕಾರ ಹಿಡಿದಿದೆ. ನಿಜವಾದ ಗೆಲುವು ನಮ್ಮದೆ. ಅವರು ಕುರ್ಚಿಯ ಮೇಲೆ ಕೂರಬಹುದು, ನಾವು ಬಿಹಾರ ಜನತೆಯ ಹೃದಯದಲ್ಲಿ ಪ್ರತಿಷ್ಠಾಪಿತರಾಗಿದ್ದೇವೆ' ಎಂದು ಹೇಳುವ ಮೂಲಕ ನಿತೀಶ್ ಕುಮಾರ್ ಅವರ ನೈತಿಕತೆಯನ್ನು ನಡುಗಿಸಿದ್ದಾರೆ.

ಇನ್ನೊಂದೆಡೆ ಬಿಜೆಪಿ ನಾಯಕರು, ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಿದ್ದ ಕಾರಣಕ್ಕೆ ಅನಿವಾರ್ಯವಾಗಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದ್ದರು. ಆನಂತರದಲ್ಲಿ ಜೆಡಿಯುಗಿಂತ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ಬರಬೇಕೆಂದೇ ಚಿರಾಗ್ ಪಾಸ್ವಾನ್ ಅವರ ಎಲ್​ಜೆಪಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಈಗ ತಮ್ಮದೇ ದೊಡ್ಡ ಪಕ್ಷ ಹಾಗಾಗಿ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಫಲಿತಾಂಶದ ಜೊತೆಗೆ ಈ ಬೆಳವಣಿಗೆಗಳಿಂದ ಬೇಸತ್ತಿರುವ ನಿತೀಶ್ ಕುಮಾರ್ 'ಮುಖ್ಯಮಂತ್ರಿ ಆಗಲು ಮನಸ್ಸು ಒಪ್ಪುತ್ತಿಲ್ಲ' ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ವರದಿ: ಧರಣೀಶ್ ಬೂಕನಕೆರೆ
Published by:Vijayasarthy SN
First published: