ಬಿಹಾರದ ಸಿಎಂ ಆಗಿ ಇಂದು ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ; ಕಾರ್ಯಕ್ರಮದ 8 ಪ್ರಮುಖ ಅಂಶಗಳು ಇಲ್ಲಿವೆ...

ಬಿಹಾರದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿರುವ ನಿತೀಶ್ ಕುಮಾರ್ ಅಪರೂಪದ ದಾಖಲೆಯೊಂದನ್ನು ಬರೆಯುತ್ತಿದ್ದಾರೆ. ನಿತೀಶ್ ಕುಮಾರ್ ಬಿಹಾರದಲ್ಲಿ ಒಟ್ಟು ಏಳನೇ ಬಾರಿಗೆ ಹಾಗೂ ನಿರಂತರವಾಗಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಆಗುತ್ತಿದ್ದಾರೆ.

 ನಿತೀಶ್‌ ಕುಮಾರ್‌.

ನಿತೀಶ್‌ ಕುಮಾರ್‌.

  • Share this:
ನವದೆಹಲಿ, (ನ. 16): ನಿತೀಶ್ ಕುಮಾರ್ ಅವರ ಜೆಡಿಯು  ಪಕ್ಷ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಆದರೆ, ನಿತೀಶ್ ಕುಮಾರ್ ನಿರಂತರವಾಗಿ ನಾಲ್ಕನೇ ಬಾರಿಗೆ ಹಾಗೂ ಒಟ್ಟು ಏಳನೇ ಬಾರಿಗೆ ಬಿಹಾರ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ ಸಮಾರಂಭದ ಕುರಿತಾದ 8 ಪ್ರಮುಖ ಮಾಹಿತಿಗಳು ಇಲ್ಲಿವೆ...

1. ಇಂದು ಸಂಜೆ 4.30ಕ್ಕೆ ಪ್ರಮಾಣವಚನ ಸ್ವೀಕಾರ:
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಆರ್ ಜೆಡಿ 75, ಬಿಜೆಪಿ 74, ಜೆಡಿಯು 43 ಹಾಗೂ ಕಾಂಗ್ರೆಸ್ 19 ಸ್ಥಾನಗಳನ್ನು ಗಳಿಸಿಕೊಂಡಿವೆ. ಜೆಡಿಯು ಮತ್ತು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸರ್ಕಾರ ರಚಿಸಿದ್ದು ನಿತೀಶ್ ಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದೆ. ನಿತೀಶ್ ಕುಮಾರ್ ಇಂದು ಸಂಜೆ 4.30ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

2. 7ನೇ ಬಾರಿಗೆ ಪ್ರಮಾಣವಚನ:
ಇಂದು ಪ್ರಮಾಣವಚನ ಸ್ವೀಕರಿಸಲಿರುವ ನಿತೀಶ್ ಕುಮಾರ್ ಅಪರೂಪದ ದಾಖಲೆಯೊಂದನ್ನು ಬರೆಯುತ್ತಿದ್ದಾರೆ. ನಿತೀಶ್ ಕುಮಾರ್ ಬಿಹಾರದಲ್ಲಿ ಒಟ್ಟು ಏಳನೇ ಬಾರಿಗೆ ಹಾಗೂ ನಿರಂತರವಾಗಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಆಗುತ್ತಿದ್ದಾರೆ.

3.ಇದೇ ಮೊದಲ ಬಾರಿಗೆ ಸಾಥಿ ಮಿಸ್:
ಜೆಡಿಯು ನಾಯಕ ನಿತೀಶ್ ಕುಮಾರ್ ಬಿಜೆಪಿ ಸೇರಿ ಮೈತ್ರಿ ಮಾಡಿಕೊಂಡು ಸರ್ಕಾರ ಮಾಡಿದಾಗಿನಿಂದಲೂ ಬಿಹಾರ ಬಿಜೆಪಿಯ ಹಿರಿಯ ನಾಯಕ ಸುಶಿಲ್ ಮೋದಿ ಸಾಥಿಯಾಗಿದ್ದರು. ಒಂದು ಹಂತದಲ್ಲಿ ಸುಶಿಲ್ ಮೋದಿ ಬಿಜೆಪಿ ನಾಯಕರಿಗಿಂತ ನಿತೀಶ್ ಮಾತನ್ನೇ ಹೆಚ್ಚು ಕೇಳುತ್ತಾರೆ ಎಂಬ ಚರ್ಚೆಯೂ ಆಗಿತ್ತು. ಅಂತಹ ಸುಶಿಲ್ ಮೋದಿಗೆ ಈ ಬಾರಿ ಉಪ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದೆ.

4. ಹೊಸಬರಿಗೆ ಡಿಸಿಎಂ ಸ್ಥಾನ:
ನಾಲ್ಕನೇ ಬಾರಿಗೆ ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಜೊತೆಗೂಡಿ ಎನ್‌ಡಿಎ ಮೈತ್ರಿಕೂಟದ ಸರ್ಕಾರ ರಚನೆ ಮಾಡುತ್ತಿವೆ. ಜೆಡಿಯುನ‌ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗುತ್ತಿದ್ದು ಬಿಜೆಪಿಯಿಂದ ಇಬ್ಬರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ತಾರಾ ಕಿಶೋರ್ ಪ್ರಸಾದ್ ಮತ್ತು ಉಪ ನಾಯಕಿಯಾಗಿ ರೇಣು ದೇವಿ ಆಯ್ಕೆಯಾಗಿದ್ದು, ಇಬ್ಬರು ಉಪ ಮುಖ್ಯಮಂತ್ರಿ ಆಗಲಿದ್ದಾರೆ.

5. ಮಂತ್ರಿ ಮಂಡಲ ವಿಸ್ತರಣೆ:
ಮುಖ್ಯಮಂತ್ರಿ ಆಯ್ಕೆ ಜೊತೆಗೆ ಸಚಿವ ಸಂಪುಟ ರಚನೆ ಬಗ್ಗೆಯೂ ಎನ್ ಡಿ‌ಎ ನಾಯಕರು ತೀರ್ಮಾನಿಸಿದ್ದಾರೆ. 243  ಸದಸ್ಯ ಬಲದ ವಿಧಾನಸಭೆಯಲ್ಲಿ ನಿಯಮಾವಳಿ ಪ್ರಕಾರ (ಶೇ.15ರಷ್ಟು) 36 ಸಚಿವರಿರಬಹುದು. ಆದ್ದರಿಂದ 43 ಶಾಸಕರನ್ನು ಹೊಂದಿರುವ ಜೆಡಿಯು ಪಕ್ಷಕ್ಕೆ 12 ಸಚಿವ ಸ್ಥಾನಗಳು, 74 ಶಾಸಕರನ್ನು ಹೊಂದಿರುವ ಬಿಜೆಪಿಗೆ 18 ಸಚಿವ ಸ್ಥಾನಗಳು, ತಲಾ 4 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್ ಡಿಎ ಮೈತ್ರಿಕೂಟ ಸರಳ ಬಹುಮತ ಪಡೆಯಲು ಕಾರಣವಾಗಿರುವ ಅಂಗಪಕ್ಷಗಳಾದ ವಿಐಪಿ‌ ಹಾಗೂ ಎಚ್ಎಎಂ ಪಕ್ಷಗಳಿಗೆ ತಲಾ ಒಂದೊಂದು ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ.

7. ಇಂದು 15 ಮಂದಿ ಮಾತ್ರ ಪ್ರಮಾಣವಚನ ಸ್ವೀಕಾರ:
ನಿತೀಶ್ ಕುಮಾರ್ ಅವರು ಸೇರಿದಂತೆ ಇಂದು 15 ಜನ ಮಾತ್ರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ತಾರಾಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಹಾಗೂ ಜೆಡಿಯು ಪಕ್ಷದಿಂದ 5 ಮತ್ತು ಬಿಜೆಪಿಯಿಂದ 5 ಮಂದಿ‌ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಲ್ಲದೆ ಎಚ್‌ಎಎಂ ಹಾಗೂ ವಿಐಪಿ ಪಕ್ಷದ ಒಬ್ಬೊಬ್ಬರು ಕೂಡ ಮಂತ್ರಿಗಳಾಗಿ‌ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

8. ಬಿಜೆಪಿ ನಾಯಕರ ಬಲ:
ನಿತೀಶ್ ಕುಮಾರ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಗೈರು ಹಾಜರಾಗಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ರವಿಶಂಕರ ಪ್ರಸಾದ್, ಬಿಹಾರ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್, ಚುನಾವಣಾ ಉಸ್ತುವಾರಿ ಭೂಪೇಂದ್ರ ಯಾದವ್ ಮತ್ತಿತರರು ಭಾಗವಹಿಸಲಿದ್ದಾರೆ.
Published by:Sushma Chakre
First published: