ಇಂದು 4ನೇ ಅವಧಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ನಿತೀಶ್ ಕುಮಾರ್

243 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ 125 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಪಡೆಯಿತು. ಆರ್​ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ 110 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಆದರೆ, ಎನ್​ಡಿಎನಲ್ಲಿ ದೊಡ್ಡಣ್ಣನಂತಿದ್ದು ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಯು ಪಕ್ಷ ಕೇವಲ 43 ಸ್ಥಾನ ಪಡೆದರೆ, ಬಿಜೆಪಿ 74 ಸ್ಥಾನಗಳನ್ನು ಜಯಿಸಿತು.

ನಿತೀಶ್​ ಕುಮಾರ್​.

ನಿತೀಶ್​ ಕುಮಾರ್​.

 • Share this:
  ನವದೆಹಲಿ; ಜೆಡಿ (ಯು) ಮುಖ್ಯಸ್ಥ ನಿತೀಶ್ ಕುಮಾರ್ ಅವರು ದಾಖಲೆಯ ನಾಲ್ಕನೇ ಅವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಭಾನುವಾರ ಪಾಟ್ನಾದಲ್ಲಿ ನಡೆದ ಎನ್​ಡಿಎ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಆಯ್ಕೆ ಮಾಡಲಾಯಿತು.

  ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯುಗೆ ಕಡಿಮೆ ಮತ ಬಂದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರಿಗೆ ಸಿಎಂ ಪಟ್ಟ ಕೈತಪ್ಪಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಭಾನುವಾರ ನಡೆದ ಸಭೆಯಲ್ಲಿ ನಿತೀಶ್ ಅವರನ್ನೇ ಮುಖ್ಯಮಂತ್ರಿಯಾಗಿ ಎನ್​ಡಿಎ ಆಯ್ಕೆ ಮಾಡಿದೆ. ಈ ಮೂಲಕ ಫಲಿತಾಂಶ ಏನೇ ಬಂದರೂ ನಿತೀಶ್ ಅವರೇ ಸಿಎಂ ಎಂದು ಹೇಳಿದ್ದ ಬಿಜೆಪಿ ತನ್ನ ಮಾತು ಉಳಿಸಿಕೊಂಡಿದೆ.


  ಮೂಲಗಳ ಪ್ರಕಾರ, ನಿತೀಶ್ ಅವರು ಸಿಎಂ ಆಗುವುದು ಪೂರ್ವನಿಶ್ಚಿತ. ಸಭೆಯಲ್ಲಿ ಅಧಿಕೃತವಾಗಿ ಅವರ ಆಯ್ಕೆ ನಡೆಯಿತಷ್ಟೇ ಎನ್ನಲಾಗಿದೆ. ಇದರೊಂದಿಗೆ ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಸತತ ನಾಲ್ಕನೇ ಅವಧಿಗೆ ಮುಖ್ಯಮಂತ್ರಿ ಆಗುತ್ತಿದ್ದಾರೆ. ಇಂದು ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ, ಯಾರು ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕುತೂಹಲ ಹಾಗೆಯೇ ಇದೆ. ಸುಶೀಲ್ ಕುಮಾರ್ ಮೋದಿ ಅವರು ಉಪಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರಾ ಅಥವಾ ಕೇಸರಿ ಪಕ್ಷ ಹೊಸಬರನ್ನು ಆ ಸ್ಥಾನಕ್ಕೆ ತಂದು ಕೂರಿಸಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.


  ಇದನ್ನು ಓದಿ:  ಬಂಗಾಳದ ಹೆಸರಾಂತ ಹಿರಿಯ ನಟ, ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಸೌಮಿತ್ರ ಚಟರ್ಜಿ ನಿಧನ
  ಅಕ್ಟೋಬರ್ 28ರಿಂದ ನವೆಂಬರ್ 7ರವರೆಗೆ ಮೂರು ಹಂತದಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ನವೆಂಬರ್ 10ರಂದು ಪ್ರಕಟಗೊಂಡಿತು. 243 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ 125 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಪಡೆಯಿತು. ಆರ್​ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ 110 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಆದರೆ, ಎನ್​ಡಿಎನಲ್ಲಿ ದೊಡ್ಡಣ್ಣನಂತಿದ್ದು ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಯು ಪಕ್ಷ ಕೇವಲ 43 ಸ್ಥಾನ ಪಡೆದರೆ, ಬಿಜೆಪಿ 74 ಸ್ಥಾನಗಳನ್ನು ಜಯಿಸಿತು. ಚಿರಾಗ್ ಪಾಸ್ವಾನ್ ಅವರ ಎಲ್​ಜೆಪಿ ಪಕ್ಷ ಜೆಡಿಯು ವಿರುದ್ಧ ಸ್ಪರ್ಧೆ ಮಾಡಿದ ಹಿನ್ನೆಲೆಯಲ್ಲಿ ಆ ಪಕ್ಷಕ್ಕೆ ಹೆಚ್ಚು ಸ್ಥಾನ ದಕ್ಕಲಿಲ್ಲ ಎಂಬ ವಿಮರ್ಶೆಗಳು ನಡೆದಿವೆ. ಅದೇನೇ ಇದ್ದರೂ ನಿತೀಶ್ ಕುಮಾರ್ ಅವರೇ ಸಿಎಂ ಆಗುತ್ತಾರೆ ಎಂದು ಬಿಜೆಪಿಯ ಅನೇಕ ನಾಯಕರು ಅನೇಕ ಬಾರಿ ಹೇಳುತ್ತಲೇ ಬಂದಿದ್ದರು. ಅದೀಗ ನಿಜವಾಗಿದೆ.
  Published by:HR Ramesh
  First published: