ನವದೆಹಲಿ (ನ. 16): ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಆದರೂ ನಿತೀಶ್ ಕುಮಾರ್ ನಿರಂತರವಾಗಿ 4ನೇ ಅವಧಿಗೆ ಹಾಗೂ ಒಟ್ಟು 7ನೇ ಬಾರಿಗೆ ಬಿಹಾರ ಮುಖ್ಯಮಂತ್ರಿ ಆಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಹಾರದ ರಾಜ್ಯಪಾಲ ಫಘು ಚೌಹಾಣ್ ಅವರು ನಿಯೋಜಿತ ಮುಖ್ಯಮಂತ್ರಿ ಅಭ್ಯರ್ಥಿ ನಿತೀಶ್ ಕುಮಾರ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ಸಮಾರಂಭಕ್ಕೆ ಕೇಂದ್ರ ಸಚಿವ ಅಮಿತ್ ಶಾ, ಬಿಹಾರ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್, ಎಚ್ ಎಎಂ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಜಿತಿನ್ ರಾಮ್ ಮಾಂಜಿ, ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಮತ್ತಿರರು ಸಾಕ್ಷಿಯಾದರು. ಆದರೆ ಮೊದಲಿಂದಲೂ ಎನ್ಡಿಎ ಅಕ್ರಮವಾಗಿ ಈ ಚುನಾವಣೆ ಗೆದ್ದಿದೆ ಎಂದು ಆರೋಪಿಸುತ್ತಿದ್ದ ಆರ್ ಜೆಡಿ ನಾಯಕರು ನಿತೀಶ್ ಕುಮಾರ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಆರ್ ಜೆಡಿ 75, ಬಿಜೆಪಿ 74, ಜೆಡಿಯು 43 ಹಾಗೂ ಕಾಂಗ್ರೆಸ್ 19 ಸ್ಥಾನಗಳನ್ನು ಗಳಿಸಿಕೊಂಡಿವೆ. ಮಿತ್ರಪಕ್ಷ ಬಿಜೆಪಿಗಿಂತ ಜೆಡಿಯು ಅತ್ಯಂತ ಕಡಿಮೆ ಸ್ಥಾನ ಗಳಿಸಿದ್ದರಿಂದ ಮತ್ತು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರಿಂದ ನಿತೀಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತೋ ಇಲ್ಲವೋ ಎಂಬ ಅನುಮಾನಗಳು ಕಾಡುತ್ತಿದ್ದವು. ಆದರೆ ಜೆಡಿಯು ಮತ್ತು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸರ್ಕಾರ ರಚಿಸಿದ್ದು ನಿತೀಶ್ ಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿತ್ತು.
ಸೋಮವಾರ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ. ನಿತೀಶ್ ಕುಮಾರ್ ಬಿಹಾರದಲ್ಲಿ ಒಟ್ಟು ಏಳನೇ ಬಾರಿಗೆ ಹಾಗೂ ನಿರಂತರವಾಗಿ ನಾಲ್ಕನೇ ಅವಧಿಗೆ ಮುಖ್ಯಮಂತ್ರಿ ಆಗಿದ್ದಾರೆ.
ಜೆಡಿಯು ನಾಯಕ ನಿತೀಶ್ ಕುಮಾರ್ ಬಿಜೆಪಿ ಸೇರಿ ಮೈತ್ರಿ ಮಾಡಿಕೊಂಡು ಸರ್ಕಾರದ ಮಾಡಿದಾಗಿನಿಂದಲೂ ಬಿಹಾರ ಬಿಜೆಪಿಯ ಹಿರಿಯ ನಾಯಕ ಸುಶೀಲ್ ಮೋದಿ ಸಾರಥಿಯಾಗಿದ್ದರು. ಒಂದು ಹಂತದಲ್ಲಿ ಸುಶೀಲ್ ಮೋದಿ ಬಿಜೆಪಿ ನಾಯಕರಿಗಿಂತ ನಿತೀಶ್ ಮಾತನ್ನೇ ಹೆಚ್ಚು ಕೇಳುತ್ತಾರೆ ಎಂಬ ಚರ್ಚೆಯೂ ಆಗಿತ್ತು. ಆದರೆ ಈ ಬಾರಿ ಸುಶೀಲ್ ಮೋದಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದೆ.
ಇದನ್ನು ಓದಿ: ಲಿಂಗಾಯಿತರಿಗೆ ಅಭಿವೃದ್ಧಿ ನಿಗಮದ ಬದಲು ಶೇ.16 ಮೀಸಲಾತಿ ನೀಡಿ; ಸಿಎಂ ಬಿಎಸ್ವೈಗೆ ಮಾಜಿ ಸಚಿವ ಎಂ.ಬಿ. ಪಾಟೀಲ ಪತ್ರ
ನಾಲ್ಕನೇ ಬಾರಿಗೆ ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಜೊತೆಗೂಡಿ ಎನ್ಡಿಎ ಮೈತ್ರಿಕೂಟದ ಸರ್ಕಾರ ರಚನೆ ಮಾಡುತ್ತಿವೆ. ಜೆಡಿಯುನ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗುತ್ತಿದ್ದು ಬಿಜೆಪಿಯಿಂದ ಇಬ್ಬರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ತಾರಾ ಕಿಶೋರ್ ಪ್ರಸಾದ್ ಮತ್ತು ಉಪ ನಾಯಕಿಯಾಗಿ ರೇಣು ದೇವಿ ಆಯ್ಕೆಯಾಗಿದ್ದು ಇಬ್ಬರು ಉಪ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ