• Home
  • »
  • News
  • »
  • national-international
  • »
  • Nithyanada: ನಿತ್ಯಾನಂದನ ದೇಶದಲ್ಲಿ ಉದ್ಯೋಗಾವಕಾಶ! ಕಾಸಿಲ್ಲದಿದ್ದರೂ ಕೈಲಾಸಕ್ಕೆ ಹೋಗಿ, ಕೈ ತುಂಬಾ ಸಂಬಳ ಪಡೆಯಿರಿ!

Nithyanada: ನಿತ್ಯಾನಂದನ ದೇಶದಲ್ಲಿ ಉದ್ಯೋಗಾವಕಾಶ! ಕಾಸಿಲ್ಲದಿದ್ದರೂ ಕೈಲಾಸಕ್ಕೆ ಹೋಗಿ, ಕೈ ತುಂಬಾ ಸಂಬಳ ಪಡೆಯಿರಿ!

ನಿತ್ಯಾನಂದನ ಕೈಲಾಸ ದೇಶ!

ನಿತ್ಯಾನಂದನ ಕೈಲಾಸ ದೇಶ!

"ಕಾಸಿದ್ರೆ ಕೈಲಾಸ" ಅಂತ ಹಿರಿಯರು ಹೇಳ್ತಾರೆ, ಆದ್ರೆ "ಕಾಸೇ ಇಲ್ಲದಿದ್ದರೂ ಕೈಲಾಸಕ್ಕೆ ಕರೆಸಿ, ಕೈ ತುಂಬಾ ಕಾಸು, ಮಾಡೋದಕ್ಕೆ ಕೆಲಸ ಕೊಡ್ತೀನಿ" ಅಂದಿದ್ದಾರೆ ಸ್ವಾಮಿ ನಿತ್ಯಾನಂದ! ಹಾಗಿದ್ರೆ ಏನಿದು ಕೈಲಾಸದ ಕೆಲಸದ ಕಥೆ?

  • Share this:

ವಿವಾದಿತ ಸ್ವಯಂ ಘೋಷಿತ ಸ್ವಾಮೀಜಿ ನಿತ್ಯಾನಂದ (Nithyananda Swami) ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ವಿವಾದಗಳಿಂದಲೇ (Controversy) ಸುದ್ದಿ ಮಾಡುತ್ತಿದ್ದ ನಿತ್ಯಾನಂದ, ಬಳಿಕ ಕೈಲಾಸ ದೇಶ (Kailasa Nation) ನಿರ್ಮಿಸಿದ್ದೀನಿ ಅಂತ ಹೇಳಿ ಸುದ್ದಿ ಮಾಡಿದ್ದರು. ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದು, ಶ್ರೀಲಂಕಾದಲ್ಲಿ (Sri Lanka) ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ನಿತ್ಯಾನಂದರ ಕೈಲಾಸ ದೇಶದಲ್ಲಿ ಭಾರೀ ಉದ್ಯೋಗಾವಕಾಶ (job opportunity) ಇದೆ ಎನ್ನುವ ಸುದ್ದಿ ಬಂದಿದೆ. “ಕಾಸಿದ್ರೆ ಕೈಲಾಸ” ಅಂತ ಹಿರಿಯರು ಹೇಳ್ತಾರೆ, ಆದ್ರೆ “ಕಾಸೇ ಇಲ್ಲದಿದ್ದರೂ ಕೈಲಾಸಕ್ಕೆ ಕರೆಸಿ, ಕೈ ತುಂಬಾ ಕಾಸು, ಮಾಡೋದಕ್ಕೆ ಕೆಲಸ ಕೊಡ್ತೀನಿ” ಅಂದಿದ್ದಾರೆ ನಿತ್ಯಾನಂದ! ಹೌದು, ಕೈಲಾಸ ದೇಶದಲ್ಲಿ ಭರಪೂರ ಉದ್ಯೋಗಾವಕಾಶಗಳು ಇದೆಯಂತೆ. ಬೇರೆ ಬೇರೆ ರೀತಿಯ ಉದ್ಯೋಗಳಿದ್ದು, ಅರ್ಹರಿಂದ, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೆಲಸಕ್ಕೆ ಸೇರುವವರಿಗೆ ಕೆಲಸದ ಜೊತೆ ಆಕರ್ಷಕ ಸಂಬಳ, ವಸತಿ ಹಾಗೂ ವೈದ್ಯಕೀಯ ವ್ಯವಸ್ಥೆ ನೀಡಲಾಗುತ್ತದೆ ಅಂತ ಕೈಲಾಸದ ಪ್ರಕಟಣೆಯಲ್ಲಿ ತಿಳಿಸಲಾಗಿದೆ!


ಕೈಲಾಸದಲ್ಲಿ ಉದ್ಯೋಗಾವಕಾಶ!


ನಿತ್ಯಾನಂದ ಸ್ವಾಮಿ ತಾನೇ ನಿರ್ಮಿಸಿದ್ದೇನೆ ಎಂದು ಹೇಳಿ ಕೊಳ್ಳುವ ಕೈಲಾಸ ದೇಶದಲ್ಲಿ ಉದ್ಯೋಗಾವಕಾಶ ಇದೆಯಂತೆ. ಭಾರತದ ವಿವಿಧ ಕೈಲಾಸ ಶಾಖೆಗಳು ಉತ್ತಮ ಸಂಬಳದೊಂದಿಗೆ ಉದ್ಯೋಗಗಳನ್ನು ಒದಗಿಸುತ್ತಿವೆ ಎಂದು ಕೈಲಾಸ ದೇಶದ ಪ್ರಕಟಣೆ ತಿಳಿಸಿದೆ.


ಕೈಲಾಸದಲ್ಲಿ ಉದ್ಯೋಗಾವಕಾಶದ ಪ್ರಕಟಣೆ


ಭಾರತೀಯ ಶಾಖೆಯಲ್ಲಿ ಉದ್ಯೋಗ ತರಬೇತಿ


ಉದ್ಯೋಗಿಗಳು ಕೈಲಾಸದ ಭಾರತೀಯ ಶಾಖೆಯಲ್ಲಿ ಸೂಕ್ತ ವೇತನದೊಂದಿಗೆ 1 ವರ್ಷದ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಕೈಲಾಸಕ್ಕೆ ಸೇರಿದ ಕಂಪನಿಗಳಲ್ಲಿ ಕೆಲಸ ಮಾಡಲು ವಿದೇಶಕ್ಕೆ ಹೋಗಬಹುದು ಅಂತ ಪ್ರಕಟಣೆಯಲ್ಲಿ ಹೇಳಲಾಗಿದೆ.


ಕೈಲಾಸದ ಕೆಳಗಿನ ಕ್ಷೇತ್ರಗಳಲ್ಲಿ ಕೆಲಸ ಖಾಲಿ ಇದೆ!


ನಿತ್ಯಾನಂದ ಹಿಂದೂ ವಿಶ್ವವಿದ್ಯಾಲಯ, ಸಾಗರೋತ್ತರ ದೇವಾಲಯಗಳು, ಭಾರತದಲ್ಲಿನ ಕೈಲಾಸ ದೇವಾಲಯಗಳು, ಕೈಲಾಸ ಐಟಿ ವಿಭಾಗ, ಕೈಲಾಸ ವಿದೇಶಿ ರಾಯಭಾರ ಕಚೇರಿ, ಕೊಳಾಯಿ ಮತ್ತು ವಿದ್ಯುತ್ ಘಟಕ, ಗ್ರಂಥಾಲಯ ಸೇರಿದಂತೆ ಹಲವೆಡೆ ಕೆಲಸ ಖಾಲಿ ಇದೆಯಂತೆ.


ಉದ್ಯೋಗದ ಜೊತೆ ಕೈತುಂಬಾ ಸಂಬಳ, ವಾಸ್ತವ್ಯದ ಸೌಲಭ್ಯ


ಇನ್ನು ಅರ್ಹರಿಗೆ ಭಾರತದ ವಿವಿಧ ಶಾಖೆಗಳಲ್ಲಿ ಒಂದು ವರ್ಷ ತರಬೇತಿ ನೀಡಲಾಗುತ್ತದೆಯಂತೆ. ಬಳಿಕ ಆಹಾರ, ವಸತಿ, ವೈದ್ಯಕೀಯ ವೆಚ್ಚವನ್ನು ಉಚಿತವಾಗಿ ನೀಡಿ, ಕೈಲಾಸದಲ್ಲಿ ಉದ್ಯೋಗ ನೀಡಲಾಗುತ್ತದೆ. ಆಸಕ್ತರು ಸಂಪರ್ಕಿಸಿ ಎಂದು ಸ್ವಾಮಿ ನಿತ್ಯಾನಂದ ಪ್ರಕಟಣೆ ಹೊರಡಿಸಿದ್ದಾರೆ.


ವೈದ್ಯಕೀಯ ಸಹಾಯ ಕೋರಿದ್ದ ನಿತ್ಯಾನಂದ


ಕೆಲ ದಿನಗಳ ಹಿಂದಷ್ಟೇ ನಿತ್ಯಾನಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎನ್ನಲಾಗಿತ್ತು. ಶ್ರೀಲಂಕಾದಲ್ಲಿ ವೈದ್ಯಕೀಯ ಆಶ್ರಯವನ್ನು ಕೋರಿದ್ದಾರೆ ಎನ್ನಲಾಗಿದೆ. ತನ್ನ ಆರೋಗ್ಯದಲ್ಲಿ ಕ್ಷೀಣಿಸುತ್ತಿರುವುದರಿಂದ ತನ್ನ ಜೀವ ಅಪಾಯದಲ್ಲಿದೆ ಎಂದು ನಿತ್ಯಾನಂದ ಸ್ವಾಮಿ ಶ್ರೀಲಂಕಾದ ಮೊರೆ ಹೋಗಿದ್ದಾರೆ ಅಂತ ಹೇಳಲಾಗುತ್ತಿತ್ತು.


ಭಾರತದಿಂದ ಪರಾರಿಯಾಗಿದ್ದ ನಿತ್ಯಾನಂದ


2018ರ ನವೆಂಬರ್‌ನಲ್ಲಿ ನಿತ್ಯಾನಂದ ಸ್ವಾಮಿಯ ಇಬ್ಬರು ಶಿಷ್ಯರನ್ನು ಅಪಹರಣ ಮಾಡಿದ ಹಿನ್ನೆಲೆಯಲ್ಲಿ ಗುಜರಾತ್ ಪೊಲೀಸರು ಅವರನ್ನು ಬಂಧಿಸಿದ್ದರು. ಅದಾದ ಬಳಿಕ ನಿತ್ಯಾನಂದ ಭಾರತದಿಂದ ಪರಾರಿಯಾಗಿದ್ದರು.


ನಿತ್ಯಾನಂದ ವಿರುದ್ಧ ಕರ್ನಾಟಕದಲ್ಲೂ ಕೇಸ್


ಕರ್ನಾಟಕದಲ್ಲಿ ನಿತ್ಯಾನಂದನ ವಿರುದ್ಧ ಅತ್ಯಾಚಾರ ಆರೋಪ ಕೂಡ ದಾಖಲಾಗಿತ್ತು. 2010ರಲ್ಲಿ ನಿತ್ಯಾನಂದನ ಮಾಜಿ ಚಾಲಕ ಲೆನಿನ್ ನೀಡಿದ ದೂರಿನ ಆಧಾರದ ಮೇಲೆ ನಿತ್ಯಾನಂದನ ವಿರುದ್ಧ ಅತ್ಯಾಚಾರ ಆರೋಪಗಳನ್ನು ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ನಿತ್ಯಾನಂದನನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.


ಇದನ್ನೂ ಓದಿ: Nithyananda: ಐ ಆ್ಯಮ್ ಗಾಡು, ಶೀಘ್ರವೇ ನನ್ನನ್ನು ನೋಡು! ಕೈಲಾಸದಿಂದ ಬಂತು ನಿತ್ಯಾನಂದ ಸ್ವಾಮಿ ಸಂದೇಶ


ಕೈಲಾಸ ದೇಶ ಸ್ಥಾಪಿಸಿದ್ದೇನೆ ಎಂದಿರುವ ನಿತ್ಯಾನಂದ


ಲ್ಯಾಟಿನ್ ಅಮೆರಿಕ ದೇಶವಾದ ಈಕ್ವೆಡಾರ್‌ನಲ್ಲಿ ನಿತ್ಯಾನಂದ ಹಿಮಾಚ್ಛಾದಿತವಾದ ಖಾಸಗಿ ದ್ವೀಪ ಪ್ರದೇಶವನ್ನು ಖರೀದಿಸಿ ಇದು ನನ್ನ ದೇಶ ಎಂದು ಹೇಳಿಕೊಳ್ಳುತ್ತಿದ್ದಾನೆ. ಟ್ರಿನಿಡಾಡ್ ಮತ್ತು ಟೊಬ್ಯಾಗೊ ಪಟ್ಟಣಗಳಿಗೆ ಈ ದೇಶ ಬಲು ಸನಿಹ. ಭೂಪಟದಲ್ಲಿ ಗಮನಿಸಿದರೆ, ಅಮೆರಿಕ ದೇಶದ ಕೆಳಭಾಗದಲ್ಲಿ ನಿತ್ಯಾನಂದನ ಹೊಸ ದೇಶ ಇದೆ. ಈ ದೇಶಕ್ಕೆ 'ಕೈಲಾಸ' ಎಂದು ಹೆಸರಿಟ್ಟಿದ್ದಾನೆ.

Published by:Annappa Achari
First published: