ಜಿನೀವಾ: ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಹೊತ್ತು ದೇಶದಿಂದ ಪರಾರಿಯಾಗಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ (Godman Nithyananda) ಮತ್ತೆ ಸುದ್ದಿಗೆ ಬಂದಿದ್ದಾನೆ. ತಾನೇ ಸೃಷ್ಟಿಸಿರುವ ಕೈಲಾಸ (Kailas) ದೇಶದಲ್ಲಿ ನೆಲೆಸಿರುವ ನಿತ್ಯಾನಂದ ಇದೀಗ ಕೈಲಾಸ ದೇಶದ ಇ-ಪೌರತ್ವ (E-Citizenship) ಹಾಗೂ ಇ-ವೀಸಾಗೆ ಅರ್ಜಿ ಆಹ್ವಾನಿಸಿದ್ದಾನೆ. ಕೈಲಾಸವನ್ನು ಸರ್ವೋಚ್ಛ ಹಿಂದೂ ದೇಶ ಎಂದು ಕರೆದಿರುವ ನಿತ್ಯಾನಂದ, ಈ ಹಿಂದೆಯೇ ತನ್ನ ದೇಶಕ್ಕೆ ಬರುವ ಕುರಿತು ಮುಕ್ತ ಆಹ್ವಾನ ನೀಡಿದ್ದ, ಇದೀಗ ಮತ್ತೆ ತನ್ನ ದೇಶಕ್ಕೆ ಆಹ್ವಾನ ನೀಡಿದ್ದಾನೆ.
ಇ-ಪೌರತ್ವಕ್ಕೆ ಕ್ಯೂ ಆರ್ ಕೋಡ್
ನಿತ್ಯಾನಂದ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಸಂಬಂಧ ಪೋಸ್ಟ್ ಮಾಡಿದ್ದು, ಯುನೈಟೆಡ್ ಸ್ಟೇಟ್ ಆಫ್ ಕೈಲಾಸಕ್ಕೆ ಉಚಿತ ಪೌರತ್ವಕ್ಕೆ ಅರ್ಜಿ ಆಹ್ವಾನಿಸಿದ್ದಾನೆ. ಯುನೈಟೆಡ್ ಸ್ಟೇಟ್ ಆಫ್ ಕೈಲಾಸದ ಉಚಿತ ಪೌರತ್ವಕ್ಕೆ ಅರ್ಜಿ ಸಲ್ಲಿಸಿ ಎಂದು ಕ್ಯೂ ಆರ್ ಕೋಡ್ ನೀಡಿದ್ದು, ಇದನ್ನು ಸ್ಕ್ಯಾನ್ ಮಾಡಿ ಅರ್ಜಿ ಸಲ್ಲಿಸಿ ಎಂದು ಟ್ವೀಟ್ನಲ್ಲಿ ಮಾಹಿತಿ ನೀಡಿದ್ದಾನೆ.
ಪ್ರತ್ಯೇಕ ವೆಬ್ಸೈಟ್
ನಿತ್ಯಾನಂದ ಟ್ವೀಟ್ ಮಾಡಿರುವ ಈ ಕ್ಯೂ ಆರ್ ಕೋಡ್ ಅನ್ನು ಸ್ಕಾನ್ ಮಾಡಿದರೆ, ಅದು ನೇರವಾಗಿ Kailaasa.org ಎಂಬ ಜಾಲತಾಣದ ಪೌರತ್ವ ವಿಭಾಗದ ದಾಖಲಾತಿಗೆ ಕರೆದೊಯ್ಯುತ್ತದೆ. ಇದರಲ್ಲಿ ಈ ಪೌರತ್ವ ಪಡೆಯುವವರು ತಮ್ಮ ಹೆಸರು, ಇಮೇಲ್ ವಿಳಾಸ ಸೇರಿದಂತೆ ಹಲವು ಮಾಹಿತಿಯನ್ನು ಭರ್ತಿ ಮಾಡಬೇಕಿದೆ.
ಇದನ್ನೂ ಓದಿ:Kailasa: ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ ಸ್ವಾಮಿ ನಿತ್ಯಾನಂದನ ಕೈಲಾಸದ ಮಹಿಳಾ ಪ್ರತಿನಿಧಿ!
ಕೈಲಾಸದಲ್ಲಿ ವಿಶೇಷ ಸೌಲಭ್ಯಗಳು
ಕೈಲಾಸದಲ್ಲಿ ನಿತ್ಯಾನಂದ ಹಲವು ಸವಲತ್ತುಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾನೆ, ಕೈಲಾಸ ವೆಬ್ ಸೈಟ್ನಲ್ಲಿ ಇ-ಪೌರತ್ವ, ಇ-ವೀಸಾ ಪಡೆದವರಿಗೆ ವಿಶೇಷ ಹೋಮ ಹಾಗೂ ಅಧ್ಯಾತ್ಮಿಕ ಸೇವೆಗಳು, ನಿತ್ಯಾನಂದನ ವಿಶೇಷ ದರ್ಶನ ಹಾಗೂ ಆಶೀರ್ವಾದ, ಸಂಸ್ಕೃತ ಮಂತ್ರಗಳ ಕಲಿಕಾ ಸೌಲಭ್ಯ, ಆಧ್ಯಾತ್ಮಿಕ ಮನೋಭಾವ ಬೆಳೆಸಿಕೊಳ್ಳಲು ವಾತಾವರಣ ಸೇರಿ ಕೈಲಾಸದಲ್ಲಿ ಹಲವು ಸೌಲಭ್ಯ ದೊರೆಯಲಿವೆ ಎಂದು ತಿಳಿಸಿದ್ದಾನೆ.
ವಿಶ್ವಸಂಸ್ಥೆಯಲ್ಲಿ ಕಾಣಿಸಿಕೊಂಡಿದ್ದ ನಿತ್ಯಾನಂದನ ಶಿಷ್ಯೆ
ಕಳೆದ ತಿಂಗಳು ನಡೆದಿದ್ದ ವಿಶ್ವಸಂಸ್ಥೆಯ ಈವೆಂಟ್‌ನಲ್ಲಿ ತಾನು ಸ್ವಯಂ-ಘೋಷಿತ ದೇವಮಾನವ ನಿತ್ಯಾನಂದ ಹಾಗೂ ಆತನ ದೇಶ ಯುಸ್‌ಕೆ (ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ) ಯ ಪ್ರತಿನಿಧಿ ಎಂದು ಹೇಳಿಕೊಂಡು ವಿಜಯಪ್ರಿಯ ನಿತ್ಯಾನಂದ ಎಂಬ ಮಹಿಳೆ ಭಾಗವಹಿಸಿದ್ದರು. ಸಾರ್ವಭೌಮ ರಾಜ್ಯವಾದ ಶ್ರೀ ಕೈಲಾಸದಿಂದ UN ಗೆ ಖಾಯಂ ರಾಯಭಾರಿ" ಎಂದು ತನ್ನನ್ನು ಪರಿಚಯಿಸಿಕೊಂಡರು. ಕೈಲಾಸ ಹಿಂದೂಗಳ ಮೊದಲ ಸಾರ್ವಭೌಮ ರಾಜ್ಯವಾಗಿದ್ದು, ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶ ನಿತ್ಯಾನಂದ ಪರಮಶಿವಂ ಕೈಲಾಸವನ್ನು ಸ್ಥಾಪಿಸಿದ್ದಾರೆ ಎಂದು ತಿಳಿಸಿದ್ದರು.
ಇದೇ ವೇಳೆ ಹಿಂದುತ್ವದ ಪುರಾತನ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಿದ್ದಕ್ಕಾಗಿ ನಿತ್ಯಾನಂದನಿಗೆ ಕಿರುಕುಳ ನೀಡಲಾಗುತ್ತಿದೆ ಮತ್ತು ತನ್ನದೇ ತಾಯ್ನಾಡಿನಲ್ಲಿ ಅವರನ್ನು ನಿಷೇಧಿಸಲಾಗಿದೆ ಎಂದು ಆರೋಪಿಸಿದ್ದರು.
Apply Now for E-Citizenship of United States of KAILASAhttps://t.co/zPWSIaOVxl#Kailasa #USK #Citizen pic.twitter.com/F9YNxZZgYd
— KAILASA's SPH Nithyananda (@SriNithyananda) March 1, 2023
ನಿತ್ಯಾನಂದನ ಶಿಷ್ಯೆ ಎನ್ನಲಾಗಿರುವ ವಿಜಯಪ್ರಿಯ ನಿತ್ಯಾನಂದ, ನಿತ್ಯಾನಂದನಿಗೆ ಭಾರತದಲ್ಲಿ ಕಿರುಕುಳ ನೀಡಲಾಗುತ್ತಿದ್ದು, ಭಾರತ ಸರ್ಕಾರದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಮಾತನಾಡಿದ್ದರು. ಈ ವಿಡಿಯೋ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ವಿಶ್ವಸಂಸ್ಥೆ, ಕಾಲ್ಪನಿಕ ದೇಶದ ಹೇಳಿಕೆಗಳನ್ನು ನಾವು ಪರಿಗಣಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಇದರ ಬೆನ್ನಲ್ಲೆ ಕೈಲಾಸ ಸಂಯುಕ್ತ ಸಂಸ್ಥಾನದ ಜೊತೆ ಮಾಡಿಕೊಂಡಿದ್ದ ಸಿಸ್ಟರ್ ಸಿಟಿ ಒಪ್ಪಂದವನ್ನು ಅಮೆರಿಕದ ನೆವಾರ್ಕ್ ನಗರ ರದ್ದುಗೊಳಿಸಿದೆ. ಕೈಲಾಸ ಎಂಬ ದೇಶ ಅಸ್ತಿತ್ವಕ್ಕೆ ಬಂದ ಸಂದರ್ಭಗಳನ್ನು ಗಮನಿಸಲಾಯಿತು. ಆದರೆ ಇದರ ಹಿಂದೆ ವಂಚನೆ ಇರುವುದು ಖಚಿತವಾದ ಬೆನ್ನಲ್ಲೇ ಒಪ್ಪಂದವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನೆವಾರ್ಕ್ ನಗರದ ಸಂವಹನ ಇಲಾಖೆಯ ಪತ್ರಿಕಾ ಕಾರ್ಯದರ್ಶಿ ಸುಸಾನ್ ಗರೊಫಾಲೊ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ