ಕರುಣಾನಿಧಿ ಅಂತಿಮ ಕ್ರಿಯೆಯಲ್ಲಿ ಬಿಳಿ ಶರ್ಟ್​ ಧರಿಸಿದ್ದ ಆ ಯುವಕ ಯಾರು?: ಇಲ್ಲಿದೆ ಅಸಲಿಯತ್ತು


Updated:August 11, 2018, 2:54 PM IST
ಕರುಣಾನಿಧಿ ಅಂತಿಮ ಕ್ರಿಯೆಯಲ್ಲಿ ಬಿಳಿ ಶರ್ಟ್​ ಧರಿಸಿದ್ದ ಆ ಯುವಕ ಯಾರು?: ಇಲ್ಲಿದೆ ಅಸಲಿಯತ್ತು

Updated: August 11, 2018, 2:54 PM IST
ನ್ಯೂಸ್​ 18 ಕನ್ನಡ

ಚೆನ್ನೈ(ಆ.11): ದಿಗ್ಗಜ ನಾಯಕ ಕರುಣಾನಿಧಿಯವರ ಅಂತಿಮ ಕ್ರಿಯೆಯಲ್ಲಿ ಬಿಳಿ ಶರ್ಟ್​ ಧರಿಸಿದ್ದ ವ್ಯಕ್ತಿಯೊಬ್ಬರು ಯಾರು ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡಿತ್ತು. ಈ ಯುವಕ ಕೆಲವು ಬಾರಿ ಕುಟುಂಬಸ್ಥರೊಡನೆ ಮಾತನಾಡುತ್ತಿದ್ದರೆ, ಮತ್ತೆ ಕೆಲವು ಬಾರಿ ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳೊಂದಿಗೆ ಮಾತನಾಡಿಕೊಂಡಿದ್ದ. ಮರೀನಾ ಬೀಚ್​ನಲ್ಲಿ ಅವರು ಕರುಣಾನಿಧಿಯವರ ಪಾರ್ಥೀವ ಶರೀರದ ಬಳಿ ತೆರಳಿ ಸ್ವಲ್ಪ ಮರಳನ್ನು ತೆಗೆದುಕೊಂಡು ಸಮಾಧಿಗೆ ಹಾಕಿ, ಕೆಲ ಕ್ಷಣಗಳ ಕಾಲ ಅವರನ್ನೇ ನೋಡುತ್ತಾ ನಿಂತಿದ್ದರು.

ರಾಜಕೀಯ ವಿಚಾರಧಾರೆಯಿಂದ ಹೊರಬಂದು ನೋಡಿದರೆ ಲಕ್ಷಾಂತರ ಮಂದಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಕರುಣಾನಿಧಿಯವರನ್ನು ಇಷ್ಟಪಡುತ್ತಿದ್ದರು. ಆದರೆ ಈ ಒಬ್ಬ ಯುವಕ ಕರುಣಾನಿಧಿಯವರನ್ನು ತಾಯಿಯಂತೆ ಕಾಳಜಿಯಿಂದ ನೋಡಿಕೊಂಡಿದ್ದರು. ಇವರನ್ನು ನಿತ್ಯಾನಂದ ಎಂದು ಗುರುತಿಸಲಾಗಿದ್ದು, ಸಾಮಾನ್ಯವಾಗಿ ಅವರನ್ನು ನಿತ್ಯಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಯಾವಾಗಿನಿಂದ ಕರುಣಾನಿಧಿಯವರು ವೀಲ್​ ಚೇರ್​ನಲ್ಲೇ ಉಳಿದುಕೊಂಡರೋ ಅಂದಿನಿಂದ ಇದೇ ಯುವಕ ಅವರನ್ನು ನೋಡಿಕೊಳ್ಳುತ್ತಿದ್ದರು.

ಆರಂಭದಿಂದಲೂ ನಿತ್ಯಾ ಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕರುಣಾನಿಧಿಯವರಲ್ಲಿ ಸೂಕ್ತ ವ್ಯಕ್ತಿಯನ್ನು ಸೂಕ್ತ ಜಾಗಕ್ಕೆ ನೇಮಿಸುವ ಗುಣವಿತ್ತು. ನಿತ್ಯಾರವರ ಕಠಿಣ ಪರಿಶ್ರಮ ಗಮನಿಸಿದ ಅವರು ಆತನನ್ನು ತನ್ನೊಂದಿಗೆ ಇರಿಸಿಕೊಂಡಿದ್ದರು. ಅನಾಥರಾಗಿದ್ದ ನಿತ್ಯಾ ತನ್ನ ಮನೆಗೂ ಹೋಗುತ್ತಿರಲಿಲ್ಲವಂತೆ.

ಮದುವೆಯನ್ನೂ ಮಾಡಿಕೊಳ್ಳದ ನಿತ್ಯಾ, ಸರ್ಕಾರಿ ನೌಕರಿ ಮಾಡಲೂ ಒಪ್ಪಿಕೊಳ್ಳುತ್ತಿರಲಿಲ್ಲವಂತೆ. ತನ್ನ ನೆಚ್ಚಿನ ನಾಯಕ ಕರುಣಾನಿಧಿಯವರೊಂದಿಗಿರಬೇಕೆಂಬ ಒಂದೇ ಒಂದು ಆಸೆಯಿಂದ ಅವರು ಇದನ್ನೆಲ್ಲಾ ಕಡೆಗಣಿಸಿದ್ದರು. 2008ರಲ್ಲಿ ನಡೆದ ಬೆನ್ನಿನ ಆಪರೇಷನ್​ ಬಳಿಕ ಅವರು ಕರುಣಾನಿಧಿಯವರ ಮನೆಯಲ್ಲೇ ಉಳಿದುಕೊಂಡರು.

ಒಂದು ಸಮಯದಲ್ಲಿ ಅವರೇ ಕರುಣಾನಿಧಿಯ ಜೀವನದಲ್ಲಿ ಸರ್ವಸ್ವವಾಗಿದ್ದರು. ತಮಿಳು ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ಸಂದರ್ಶನವೊಂದರಲ್ಲಿ ಅವರು "ನೀವು ಕರುಣಾನಿಧಿಯಂತಹ ಸಕ್ರಿಯ ವ್ಯಕ್ತಿಯನ್ನು ನೋಡಲು ಸಾಧ್ಯವಿಲ್ಲ. ಅವರೆಷ್ಟು ಆ್ಯಕ್ಟಿವ್​ ಆಗಿದ್ದರೆಂದರೆ ಸ್ನಾನ ಮಾಡುವಾಗಲೂ ನನ್ನನ್ನು ಕರೆದು ಪುಸ್ತಕಗಳನ್ನು ಹುಡುಕಿ ಇಡುವಂತೆ ಸೂಚಿಸುತ್ತಿದ್ದರು" ಎಂದು ಹೇಳಿದ್ದಾರೆ.

ಒಂದು ಸಮಯದಲ್ಲಿ ಕರುಣಾನಿಧಿಯವರ ಕುಟುಂಬಸ್ಥರೂ ನಿತ್ಯಾರವರ ಅನುಮತಿ ಇಲ್ಲದೆ ಭೇಟಿಯಾಗಲು ಆಗುತ್ತಿರಲಿಲ್ಲ ಎಂಬ ಮಾತುಗಳು ಕೇಳಲು ಸಿಕ್ಕಿವೆ.
Loading...

ಖುದ್ದು ಕರುಣಾನಿಧಿಯವರೇ ಹಲವಾರು ಬಾರಿ ನಿತ್ಯಾ ನನ್ನ ನಿಜವಾದ ಜೊತೆಗಾರ ಎಂದು ಹೇಳಿಕೊಂಡಿದ್ದಾರೆ. ಕರುಣಾನಿಧಿಯವರು ಆಸ್ಪತ್ರೆಗೆ ದಾಖಲಾಸ ಸಂದರ್ಭದಲ್ಲೂ ನಿತ್ಯಾ ವೈದ್ಯರ ಬಳಿ ತೆರಳಿ ಕಣ್ಣೀರು ಹರಿಸುತ್ತಾ 'ದಯವಿಟ್ಟು ಅವರನ್ನು ಕಾಪಾಡಿ, ನಾನಿನ್ನೂ 30 ವರ್ಷ ಅವರ ಸೇವೆ ಮಾಡಬೇಕು' ಎನ್ನುತ್ತಿದ್ದರಂತೆ.

ಕರುಣಾನಿಧಿಯವರ ನಿಧನದಿಂದಾಗಿ ಲಕ್ಷಾಂತರ ಮಂದಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಸಂಕಟವಾಗಿದೆ. ಆದರೆ ನಿತ್ಯಾ ತನ್ನ ಮಗು, ನಾಯಕ ಹಾಗೂ ಬಾಸ್​ನಂತಿದ್ದ ಕರುಣಅನಿಧಿಯವರನ್ನು ಕಳೆದುಕೊಂಡಿದ್ದಾರೆ.
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ