ನವದೆಹಲಿ: 2012ರಂದು ದೆಹಲಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅಮಾಯಕ ಯುವತಿ ಮೇಲೆ ರಾಕ್ಷಸರಂತೆ ಎರಗಿದ ಕಾಮುಕರ ಕೊರಳಿಗೆ ಕಡೆಗೂ ನ್ಯಾಯದೇವತೆ ಸಾವಿನ ಕುಣಿಕೆ ಬಿಗಿದಿದ್ದಾಳೆ. ಇಂದು ಬೆಳಗ್ಗೆ 5.30ಕ್ಕೆ ತಿಹಾರ್ ಜೈಲಿನಲ್ಲಿ ನಾಲ್ವರು ಆಪಾದಿತರನ್ನು ನೇಣಿಗೆ ಏರಿಸಲಾಗಿದೆ.
ಮುಖೇಶ್ ಸಿಂಗ್, ಅಕ್ಷಯ್ ಠಾಕೂರ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾ ಅವರನ್ನು ಇಂದು ಸರಿಯಾಗಿ ಮುಂಜಾನೆ 5.30ರಲ್ಲಿ ನೇಣಿಗೆ ಹಾಕಲಾಯಿತು. ಉತ್ತರಪ್ರದೇಶದ ಪವನ್ ಜಲ್ಲದ್ ಎಂಬ ವ್ಯಕ್ತಿ ನಾಲ್ವರನ್ನು ನೇಣಿಗೆ ಹಾಕಿದರು.
ನಾಲ್ವರು ನೇಣಿಗೆ ಹಾಕುವ ಸಲುವಾಗಿಯೇ ಪವನ್ ಜಲ್ಲದ್ ಎಂಬ ವ್ಯಕ್ತಿಯನ್ನು ಉತ್ತರ ಪ್ರದೇಶದ ಕಾರಾಗೃಹ ಇಲಾಖೆಯಿಂದ ಗಲ್ಲಿಗೇರಿಸಲೆಂದೇ ಕರೆಸಲಾಗಿತ್ತು. ಕಾರಾಗೃಹದ ಸಿಬ್ಬಂದಿ ಕಳೆದ ಬುಧವಾರ ಬೆಳಗ್ಗೆ ಅವರನ್ನು ಗಲ್ಲಿಗೇರಿಸುವ ಸ್ಥಳಕ್ಕೆ ಕರೆದೊಯ್ದು ಸ್ಥಳವನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ಗುರುವಾರ ಬೆಳಗ್ಗೆಯೂ ಅದೇ ಜಾಗಕ್ಕೆ ಕರೆದೊಯ್ಯಲಾಗಿತ್ತು. ಗಲ್ಲಿಗೇರಿಸಲು ಹತ್ತು ಹಗ್ಗಗಳನ್ನು ಬಕ್ಸರ್ ಮತ್ತು ಬಿಹಾರದಿಂದ ತರಿಸಲಾಗಿದೆ. ಅವುಗಳಲ್ಲಿ ಒಂದನ್ನು ಪರಿಶೀಲಿಸಲಾಗಿತ್ತು. ನೇಣಿಗೆ ಹಾಕುವ ಮುನ್ನ ಆಪಾದಿತರಷ್ಟೇ ತೂಕದ ಮೂಟೆಗಳನ್ನು ಗಲ್ಲು ಕಂಬಕ್ಕೆ ಹಾಕಿ ತಾಲೀಮು ಸಹ ನಡೆಸಲಾಗಿತ್ತು.
ಇದನ್ನು ಓದಿ: ಗಲ್ಲಿಗೇರುವ ಮುನ್ನ ಮಗನಿಗೆ ಪೂರಿ-ಸಾಗು ತಿನ್ನಿಸಬೇಕು; ಮನದಾಸೆ ಬಿಚ್ಚಿಟ್ಟ ನಿರ್ಭಯಾ ಅತ್ಯಾಚಾರಿಯ ಅಮ್ಮ
ಅದರಂತೆ ಇಂದು ಮುಂಜಾನೆ 5.30ಕ್ಕೆ ನಾಲ್ವರು ಅಪರಾಧಿಗಳನ್ನು ಗಲ್ಲಿಗೆ ಹಾಕಲಾಯಿತು. ಅದರೊಂದಿಗೆ ಸುದೀರ್ಘ ಎಂಟು ವರ್ಷಗಳ ಕಾಲ ನಡೆದುಕೊಂಡು ಬಂದಿದ್ದ ಹಗ್ಗ ಜಗ್ಗಾಟ ಕೊನೆಗೂ ನೇಣು ಶಿಕ್ಷೆಯೊಂದಿಗೆ ಕೊನೆಗೊಂಡಿತು. ಯುವತಿ ಮೇಲೆ ಅಟ್ಟಹಾಸ ಮೆರೆದಿದ್ದ ಕಾಮುಕರು ಸೂರ್ಯೋದಯಕ್ಕೂ ಮುನ್ನ ಶಾಶ್ವತವಾಗಿ ಕಣ್ಮುಚ್ಚಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ