ನಿರ್ಭಯಾ ಅತ್ಯಾಚಾರ ಪ್ರಕರಣ: ರಾಷ್ಟ್ರಪತಿಯಿಂದ ಪವನ್ ಗುಪ್ತಾ ಕ್ಷಮಾದಾನ ಅರ್ಜಿ ತಿರಸ್ಕೃತ

ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 2012ರ ನಿರ್ಭಯಾ ಅತ್ಯಾಚಾರಿಗಳನ್ನು ಮುಂದಿನ ಆದೇಶದವರೆಗೂ ಗಲ್ಲಿಗೆ ಏರಿಸದಂತೆ ದೆಹಲಿ ಹೈಕೋರ್ಟ್ ಸೋಮವಾರ ಸಂಜೆ ಆದೇಶ ನೀಡಿತ್ತು. ಅತ್ಯಾಚಾರಿ ಪವನ್ ಗುಪ್ತಾ ರಾಷ್ಟ್ರಪತಿಗೆ ಸಲ್ಲಿಸಿರುವ ಕ್ಷಮಾದಾನ ಅರ್ಜಿ ಬಾಕಿ ಇದ್ದ ಕಾರಣ ಗಲ್ಲುಶಿಕ್ಷೆಯನ್ನು ಮುಂದೂಡಲಾಗಿತ್ತು.

Sushma Chakre | news18-kannada
Updated:March 4, 2020, 3:49 PM IST
ನಿರ್ಭಯಾ ಅತ್ಯಾಚಾರ ಪ್ರಕರಣ: ರಾಷ್ಟ್ರಪತಿಯಿಂದ ಪವನ್ ಗುಪ್ತಾ ಕ್ಷಮಾದಾನ ಅರ್ಜಿ ತಿರಸ್ಕೃತ
ನಿರ್ಭಯಾ ಅತ್ಯಾಚಾರಿಗಳು.
  • Share this:
ನವದೆಹಲಿ(ಮಾ. 4): ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾಗಿದ್ದ ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ತಿರಸ್ಕರಿಸಿದ್ದಾರೆ. ಈ ಮೂಲಕ ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅತ್ಯಾಚಾರಿಗಳ ಮುಂದಿದ್ದ ಕೊನೆಯ ಮಾರ್ಗವೂ ಮುಚ್ಚಿದಂತಾಗಿದೆ. 

ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 2012ರ ನಿರ್ಭಯಾ ಅತ್ಯಾಚಾರಿಗಳನ್ನು ಮುಂದಿನ ಆದೇಶದವರೆಗೂ ಗಲ್ಲಿಗೆ ಏರಿಸದಂತೆ ದೆಹಲಿ ಹೈಕೋರ್ಟ್ ಸೋಮವಾರ ಸಂಜೆ ಆದೇಶ ನೀಡಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ ಧರ್ಮೇಂದ್ರ ರಾಣಾ, ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತಾ ರಾಷ್ಟ್ರಪತಿಗೆ ಸಲ್ಲಿಸಿರುವ ಕ್ಷಮಾದಾನ ಅರ್ಜಿ ಬಾಕಿ ಇರುವಾಗ ಮರಣದಂಡನೆ ಶಿಕ್ಷೆ ಜಾರಿ ಮಾಡಲು ಸಾಧ್ಯವಿಲ್ಲ. ಕ್ಷಮಾದಾನ ಅರ್ಜಿ ರಾಷ್ಟ್ರಪತಿಯಿಂದ ಇತ್ಯರ್ಥವಾಗುವವರೆಗೂ ಮರಣದಂಡನೆಯನ್ನು ಮುಂದೂಡಿ ಆದೇಶ ನೀಡಿದ್ದರು. ಹೀಗಾಗಿ, ಮಾ. 3ಕ್ಕೆ ನೇಣಿಗೇರಬೇಕಾಗಿದ್ದ ನಾಲ್ವರು ಅಪರಾಧಿಗಳ ಗಲ್ಲುಶಿಕ್ಷೆಯನ್ನು ಮುಂದೂಡಲಾಗಿತ್ತು.

ಇದನ್ನೂ ಓದಿ: ಅತ್ಯಾಚಾರದ ಕೇಸ್ ಹಿಂಪಡೆಯಲು ಒಪ್ಪದ ಮಹಿಳೆಗೆ ಥಳಿಸಿ, ಬೆತ್ತಲಾಗಿಸಿ ವಿಡಿಯೋ ಮಾಡಿದ ನೀಚರು

ಇದೀಗ, ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದು, ಇನ್ನಾದರೂ ಈ ಅಪರಾಧಿಗಳಿಗೆ ಗಲ್ಲುಶಿಕ್ಷೆ ನೀಡಲಾಗುತ್ತದೆಯಾ? ಎಂಬ ಕುತೂಹಲ ಮನೆಮಾಡಿದೆ. ಒಂದಿಲ್ಲೊಂದು ಕಾರಣದಿಂದ ನೇಣಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿರುವ ನಾಲ್ವರು ಅತ್ಯಾಚಾರಿಗಳಿಗೆ ಗಲ್ಲಿಗೇರಲು ಹೊಸ ದಿನಾಂಕವನ್ನು ನಿಗದಿಗೊಳಿಸಬೇಕಾಗಿದೆ.

ಮರಣದಂಡನೆ ಶಿಕ್ಷೆಗೆ ತಡೆ ನೀಡಬೇಕೆಂದು ಕೋರಿ ನಾಲ್ವರು ಅಪರಾಧಿಗಳು ಪಟಿಯಾಲ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿತ್ತು. ಪವನ್​ ಗುಪ್ತಾ ಸಲ್ಲಿಸಿದ್ದ ಪರಿಹಾರಾತ್ಮಕ(Curative) ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿತ್ತು. ಅಲ್ಲದೇ, ತನಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಗೆ ತಡೆ ನೀಡಬೇಕು ಎಂಬ ಕೋರಿಕೆಯನ್ನೂ ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಈ ಮೂಲಕ ಮರಣದಂಡನೆಯಿಂದ ಪಾರಾಗಲು ಅಪರಾಧಿಗಳ ಮುಂದಿದ್ದ ಎಲ್ಲ ಕಾನೂನು ಆಯ್ಕೆಗಳು ಕೊನೆಗೊಂಡಿದ್ದವು. ಆದರೆ, ಪವನ್ ಗುಪ್ತಾ ಕೊನೆಕ್ಷಣದಲ್ಲಿ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ಬಾಕಿ ಇರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಸೋಮವಾರ ಸಂಜೆ ಮರಣದಂಡನೆ ಶಿಕ್ಷೆಯನ್ನು ಮುಂದೂಡಿತ್ತು.

ಇದನ್ನೂ ಓದಿ: ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಖಾಯಂಗೊಳಿಸಿದ ಸುಪ್ರೀಂ; ನಾಳೆ ಬೆಳಗ್ಗೆ 6ಕ್ಕೆ ನೆರವೇರಲಿರುವ ಶಿಕ್ಷೆ

ಏನಿದು ಘಟನೆ?2012ರಲ್ಲಿ ದೆಹಲಿಯಲ್ಲಿ ಆರು ಜನರು ಸೇರಿ ನಿರ್ಭಯಾ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಕೆಲ ದಿನಗಳ ಬಳಿಕ ಆಕೆ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಇವರು ತಪ್ಪೆಸಗಿದ್ದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಒಬ್ಬಾತ ಅಪ್ರಾಪ್ತನಾಗಿದ್ದರಿಂದ ಬಾಲಾಪರಾಧ ನ್ಯಾಯಾಲಯದಲ್ಲಿ ಆತನ ವಿಚಾರಣೆ ನಡೆದು 3 ವರ್ಷ ಆತನನ್ನು ಪರಿವರ್ತನಾ ಗೃಹದಲ್ಲಿರಿಸಿ ಬಿಡುಗಡೆಗೊಳಿಸಲಾಗಿದೆ. ರಾಮ್ ಸಿಂಗ್ ಎಂಬಾತ ತಿಹಾರ್ ಜೈಲಿನಲ್ಲಿ ನೇಣಿಗೆ ಶರಣಾಗಿದ್ದ. ಉಳಿದ ದೋಷಿಗಳಾದ ಮುಖೇಶ್ ಸಿಂಗ್, ವಿನಯ್ ಶರ್ಮಾ, ಅಕ್ಷಯ್ ಕುಮಾರ್ ಸಿಂಗ್ ಮತ್ತು ಪವನ್ ಗುಪ್ತಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
First published: March 4, 2020, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading