ನಿರ್ಭಯಾ ಪ್ರಕರಣ: ರಾಷ್ಟ್ರಪತಿಯಿಂದ ವಿನಯ್ ಶರ್ಮ ಕ್ಷಮಾದಾನ ಅರ್ಜಿ ತಿರಸ್ಕೃತ; ನಾಲ್ವರಿಗೂ ಗಲ್ಲುಶಿಕ್ಷೆ ಖಚಿತ

ಇಂದು ಮುಂಜಾನೆ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳು ಗಲ್ಲಿಗೇರಬೇಕಾಗಿತ್ತು. ಆದರೆ, ವಿನಯ್ ಶರ್ಮನ ಕ್ಷಮಾದಾನ ಅರ್ಜಿ ಇತ್ಯರ್ಥವಾಗದ ಕಾರಣ ಗಲ್ಲುಶಿಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಆ ಅರ್ಜಿಯೂ ತಿರಸ್ಕೃತಗೊಂಡಿದೆ.

ನಿರ್ಭಯಾ ಅತ್ಯಾಚಾರಿಗಳು

ನಿರ್ಭಯಾ ಅತ್ಯಾಚಾರಿಗಳು

  • Share this:
ನವದೆಹಲಿ (ಫೆ. 1): ದೇಶವನ್ನು ಬೆಚ್ಚಿ ಬೀಳಿಸಿದ್ದ ದೆಹಲಿಯ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ನಾಲ್ವರು ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಈ ಕುರಿತು ಅಪರಾಧಿ ವಿನಯ್ ಕುಮಾರ್ ಶರ್ಮ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ತಿರಸ್ಕರಿಸಿದ್ದಾರೆ.

ಫೆಬ್ರವರಿ 1 ಬೆಳಗ್ಗೆ 6 ಗಂಟೆಗೆ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ನಾಲ್ವರು ದೋಷಿಗಳ ಗಲ್ಲುಶಿಕ್ಷೆ ಮುಂದೂಡಲಾಗಿದ್ದು, ಇನ್ನೂ ಹೊಸ ದಿನಾಂಕ ನಿಗದಿಯಾಗಿಲ್ಲ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಶುಕ್ರವಾರ ತಿಹಾರ್ ಜೈಲಿನ ಅಧಿಕಾರಿಗಳು ಮತ್ತು ಅಪರಾಧಿಗಳ ಪರ ವಕೀಲರ ವಾದಗಳನ್ನು ಆಲಿಸಿದ್ದರು. ಮರಣದಂಡನೆ ತಡೆಹಿಡಿದಿದ್ದ ಮೂರು ಅಪರಾಧಿಗಳ ಅರ್ಜಿಯನ್ನು ಪ್ರಶ್ನಿಸಿ, ತಿಹಾರ್ ಜೈಲಿನ ಅಧಿಕಾರಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಒಬ್ಬ ಅಪರಾಧಿಯ ಕ್ಷಮಾದಾನ ಅರ್ಜಿ ಮಾತ್ರ ಬಾಕಿ ಉಳಿದಿದೆ ಮತ್ತು ಇತರರನ್ನು ಗಲ್ಲಿಗೇರಿಸಬಹುದಾಗಿದೆ ಎಂದು ಹೇಳಲಾಗಿತ್ತು.

ಗಲ್ಲುಶಿಕ್ಷೆಯನ್ನು ಮುಂದೂಡುವಂತೆ ದೋಷಿಗಳಾದ ಪವನ್​ ಗುಪ್ತಾ, ವಿನಯ್​ ಕುಮಾರ್​ ಶರ್ಮಾ ಮತ್ತು ಅಕ್ಷಯ್​ ಕುಮಾರ್​​ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಅಪರಾಧಿ ವಿನಯ್​ ಕ್ಷಮಾದಾನ ಅರ್ಜಿ ವಿಚಾರಣೆ ಇನ್ನೂ ಸಹ ಬಾಕಿಯಿದೆ ಎಂದು ವಕೀಲ ಎಪಿ ಸಿಂಗ್ ಹೇಳಿದ್ದರು. ಆ ಕ್ಷಮಾದಾನ ಅರ್ಜಿಯನ್ನು ಇಂದು ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ.

ಇದನ್ನೂ ಓದಿ: ನಿರ್ಭಯಾ ಪ್ರಕರಣ: ಇಂದೂ ಅಪರಾಧಿಗಳ ನೇಣುಶಿಕ್ಷೆ ಜಾರಿ ಇಲ್ಲ - ಕೋರ್ಟ್ ಆದೇಶ

ಗಲ್ಲುಶಿಕ್ಷೆಗೆ ಗುರಿಯಾಗಿರುವ ನಾಲ್ಕನೇ ದೋಷಿ ಮುಖೇಶ್​ ಕುಮಾರ್​​ ಸಲ್ಲಿಸಿದ್ದ ಕ್ಷಮಾಪಣಾ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಜನವರಿ 17ರಂದು ​​ತಿರಸ್ಕರಿಸಿದ್ದರು.  ಇದುವರೆಗೂ ಕ್ಷಮಾದಾನ ಕೋರಿರುವ ಎಲ್ಲ ಅಪರಾಧಿಗಳ ಅರ್ಜಿಗಳು ತಿರಸ್ಕೃತಗೊಂಡಿದ್ದು, ನಾಲ್ವರಿಗೂ ಗಲ್ಲು ಶಿಕ್ಷೆ ಖಚಿತವಾಗಿದೆ.2012ರಲ್ಲಿ ದೆಹಲಿಯಲ್ಲಿ ಆರು ಜನರು ಸೇರಿ ನಿರ್ಭಯಾ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಕೆಲ ದಿನಗಳ ಬಳಿಕ ಆಕೆ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಇವರು ತಪ್ಪೆಸಗಿದ್ದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಒಬ್ಬಾತ ಅಪ್ರಾಪ್ತನಾಗಿದ್ದರಿಂದ ಬಾಲಾಪರಾಧ ನ್ಯಾಯಾಲಯದಲ್ಲಿ ಆತನ ವಿಚಾರಣೆ ನಡೆದು 3 ವರ್ಷ ಆತನನ್ನು ಪರಿವರ್ತನಾ ಗೃಹದಲ್ಲಿರಿಸಿ ಬಿಡುಗಡೆಗೊಳಿಸಲಾಗಿದೆ. ರಾಮ್ ಸಿಂಗ್ ಎಂಬಾತ ತಿಹಾರ್ ಜೈಲಿನಲ್ಲಿ ನೇಣಿಗೆ ಶರಣಾಗಿದ್ದ.

ಇದನ್ನೂ ಓದಿ: ನಿರ್ಭಯಾ ಅತ್ಯಾಚಾರ ಪ್ರಕರಣ: ಅಪರಾಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ, ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್​

ಉಳಿದ ದೋಷಿಗಳಾದ ಮುಖೇಶ್ ಸಿಂಗ್, ವಿನಯ್ ಶರ್ಮಾ, ಅಕ್ಷಯ್ ಕುಮಾರ್ ಸಿಂಗ್ ಮತ್ತು ಪವನ್ ಗುಪ್ತಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇವರು ಸಲ್ಲಿಸಿದ್ದ ಮೇಲ್ಮನವಿಗಳೆಲ್ಲವೂ ತಿರಸ್ಕೃತಗೊಂಡಿವೆ. ಇಂದು ಮುಂಜಾನೆ ಈ ನಾಲ್ವರು ಅಪರಾಧಿಗಳು ಗಲ್ಲಿಗೇರಬೇಕಾಗಿತ್ತು. ಆದರೆ, ವಿನಯ್ ಶರ್ಮನ ಕ್ಷಮಾದಾನ ಅರ್ಜಿ ಇತ್ಯರ್ಥವಾಗದ ಕಾರಣ ಗಲ್ಲುಶಿಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಆ ಅರ್ಜಿಯೂ ತಿರಸ್ಕೃತಗೊಂಡಿರುವ ಕಾರಣ ಶೀಘ್ರದಲ್ಲೇ ಗಲ್ಲು ಶಿಕ್ಷೆಯ ಹೊಸ ದಿನಾಂಕವನ್ನು ನಿಗದಿಪಡಿಸಲಾಗುವುದು.

 
First published: