ನಿರ್ಭಯಾ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಜ. 7ರವರೆಗೂ ಜೀವದಾನ

ಕೋರ್ಟ್ ತೀರ್ಪಿಗೆ ನಿರ್ಭಯಾ ತಾಯಿ ಆಶಾ ದೇವಿ ತುಸು ಅಸಮಾಧಾನಪಟ್ಟಿದ್ದಾರೆ. ನಾವೆಲ್ಲೇ ಹೋದರೂ ಅಪರಾಧಿಗಳ ಹಕ್ಕಿನ ಬಗ್ಗೆಯೇ ಮಾತನಾಡುತ್ತಾರೆ. ಹಾಗಾದರೆ ನಮಗೆ ಹಕ್ಕಿಲ್ಲವಾ? ಎಂದು ಆಶಾ ದೇವಿ ದುಃಖಿತಗೊಂಡಿದ್ದಾರೆ.

Vijayasarthy SN | news18
Updated:January 31, 2020, 5:21 PM IST
ನಿರ್ಭಯಾ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಜ. 7ರವರೆಗೂ ಜೀವದಾನ
ನಿರ್ಭಯಾ ತಾಯಿ ಆಶಾ ದೇವಿ
  • News18
  • Last Updated: January 31, 2020, 5:21 PM IST
  • Share this:
ನವದೆಹಲಿ(ಡಿ. 18): ಏಳು ವರ್ಷಗಳ ಹಿಂದಿನ ನಿರ್ಭಯಾ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಆರು ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ನಾಲ್ವರು ದೋಷಿಗಳಿಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಯ ತೀರ್ಪನ್ನು ಸುಪ್ರೀಂ ನ್ಯಾಯಪೀಠ ಎತ್ತಿಹಿಡಿದಿದೆ. ಆದರೆ, ರಾಷ್ಟ್ರಪತಿಗಳಲ್ಲಿ ಕ್ಷಮಾದಾನಕ್ಕೆ ಮನವಿ ಸಲ್ಲಿಸಲು ಆತನಿಗೆ ಒಂದು ವಾರ ಕಾಲಾವಕಾಶವನ್ನೂ ನೀಡಿದೆ.

ಇತ್ತ, ಮರಣದಂಡನೆ ಶಿಕ್ಷೆ ನೀಡಲಾಗಿರುವ ನಾಲ್ವರು ಅಪರಾಧಿಗಳನ್ನು ತತ್​ಕ್ಷಣವೇ ನೇಣಿಗೆ ಏರಿಸಬೇಕು ಎಂದು ಕೋರಿ ನಿರ್ಭಯಾ ಪೋಷಕರು ಪಟಿಯಾಲ ಹೌಸ್ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ಬೆನ್ನಲ್ಲೇ ನಿರ್ಭಯಾ ಪೋಷಕರ ಅರ್ಜಿ ವಿಚಾರಣೆ ನಡೆಯಿತು. ರಾಷ್ಟ್ರಪತಿಗಳಲ್ಲಿ ಕ್ಷಮಾದಾನ ಕೋರಲು ನಾಲ್ವರು ದೋಷಿಗಳಿಗೆ ಒಂದು ವಾರ ಕಾಲಾವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ತತ್​ಕ್ಷಣವೇ ಇವರನ್ನ ನೇಣುಗಂಬಕ್ಕೇರಿಸುವಂತೆ ಆದೇಶಿಸಲು ಪಟಿಯಾಲ ಹೌಸ್ ಕೋರ್ಟ್ ನಿರಾಕರಿಸಿದೆ.

ಇದನ್ನೂ ಓದಿ: ನಿರ್ಭಯಾ ಅತ್ಯಾಚಾರ ಪ್ರಕರಣ: ಅಪರಾಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ, ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್

ಜನವರಿ 7ಕ್ಕೆ ಈ ಅರ್ಜಿಯ ವಿಚಾರಣೆಯನ್ನು ಮುಂದೂಡಿರುವ ಪಟಿಯಾಲಾ ಹೌಸ್ ನ್ಯಾಯಾಲಯವು, ದೋಷಿಗಳು ಒಂದು ವಾರದೊಳಗೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸುತ್ತಾರೋ ಇಲ್ಲವೋ ಎಂದು ಅವರಿಗೆ ನೋಟೀಸ್ ನೀಡುವಂತೆ ತಿಹಾರ್ ಜೈಲಿನ ಅಧಿಕಾರಿಗಳಿಗೆ ನಿರ್ದೇಶನ ಹೊರಡಿಸಿದೆ.

ಆದರೆ, ಕೋರ್ಟ್ ತೀರ್ಪಿಗೆ ನಿರ್ಭಯಾ ತಾಯಿ ತುಸು ಅಸಮಾಧಾನಪಟ್ಟಿದ್ದಾರೆ. ನಾವೆಲ್ಲೇ ಹೋದರೂ ಅಪರಾಧಿಗಳ ಹಕ್ಕಿನ ಬಗ್ಗೆಯೇ ಮಾತನಾಡುತ್ತಾರೆ. ಹಾಗಾದರೆ ನಮಗೆ ಹಕ್ಕಿಲ್ಲವಾ? ಎಂದು ದುಃಖಿತಗೊಂಡಿದ್ದಾರೆ.

ನಿರ್ಭಯಾ ತಾಯಿಯ ಅಭಿಪ್ರಾಯಕ್ಕೆ ಸಹಾನುಭೂತಿ ಪಟ್ಟ ನ್ಯಾಯಾಧೀಶರು, “ನಿಮ್ಮ ನೋವು ಅರ್ಥವಾಗುತ್ತದೆ. ಒಬ್ಬರು ಸತ್ತಿದ್ದಾರೆಂದು ಗೊತ್ತಿದೆ. ಆದರೆ, ದೋಷಿಗಳಿಗೂ ಹಕ್ಕು ಇರುತ್ತದೆ. ನಿಮ್ಮ ಮಾತನ್ನು ಆಲಿಸಲು ನಾವಿಲ್ಲಿ ಇದ್ದೇವೆ. ಹಾಗೆಯೇ ಕಾನೂನಿನ ಚೌಕಟ್ಟಿಗೂ ಒಳಪಟ್ಟಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ: ಭಾರತದಲ್ಲಿ ಗಲ್ಲು ಶಿಕ್ಷೆಯ ಇತಿಹಾಸ ಮತ್ತು ಜನಾಭಿಪ್ರಾಯವೇನು? ನೇಣಿಗೆ ಕೊರಳುಕೊಟ್ಟವರ ಸಂಖ್ಯೆ ಎಷ್ಟು? ಇಲ್ಲಿದೆ ಆಸಕ್ತಿಕರ ಮಾಹಿತಿಏನಿದು ರೇಪ್ ಕೇಸ್?

2012ರ ಡಿ. 16ರಂದು 23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಆರು ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಸ್ಸಿನೊಳಗೆ ಈ ಪೈಶಾಚಿಕ ಕೃತ್ಯ ಎಸಗಿ ಆಕೆಯನ್ನು ತೀರಾ ಗಂಭೀರವಾಗಿ ಗಾಯಗೊಳಿಸಿದ ಬಳಿಕ ಬಸ್ಸಿನಿಂದ ಹೊರ ಎಸೆದುಹೋಗಿದ್ದರು. ಬಹು ಅಂಗಾಂಗ ವೈಫಲ್ಯಗೊಂಡು ಈ ವಿದ್ಯಾರ್ಥಿನಿಯ ಕೆಲ ದಿನಗಳ ಬಳಿಕ ಅಸು ನೀಗಿದರು. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲಾ ಆರು ಮಂದಿಯನ್ನು ಪೊಲೀಸರು ಬಂಧಿಸಿದರು. ಅವರಲ್ಲಿ ಒಬ್ಬಾತ ಬಾಲಾಪರಾಧಿಯಾಗಿದ್ದಾನೆ. ರಾಮ್ ಸಿಂಗ್ ಎಂಬ ಮತ್ತೊಬ್ಬ ಆರೋಪಿ ತಿಹಾರ್ ಜೈಲಿನ ಕೋಣೆಯಲ್ಲೇ ನೇಣಿಗೆ ಶರಣಾಗುತ್ತಾನೆ. ಉಳಿದ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ