ನಿರ್ಭಯಾ ಪ್ರಕರಣ: ಮಾನಸಿಕ ಅಸ್ವಸ್ಥ ಎಂಬ ಅಪರಾಧಿ ವಿನಯ್ ಶರ್ಮಾ ಮನವಿಯನ್ನು ತಿರಸ್ಕರಿಸಿದ ದೆಹಲಿ ಕೋರ್ಟ್

ಜೈಲಿನ ಪರವಾಗಿ ಹಾಜರಾದ ಮನಶ್ಶಾಸ್ತ್ರಜ್ಞ, ನಾಲ್ವರು ಅಪರಾಧಿಗಳ ವೈದ್ಯಕೀಯ ತಪಾಸಣೆಯನ್ನು ಪ್ರತಿದಿನವೂ ಮಾಡಲಾಗುತ್ತಿದ್ದು, ಎಲ್ಲರೂ ಉತ್ತಮವಾಗಿ ಆರೋಗ್ಯವಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ಧಾರೆ. ಹೀಗಾಗಿ ಅಪರಾಧಿಗಳನ್ನು ಮಾರ್ಚ್​.3 ರಂದು ಗಲ್ಲಿಗೇರಿಸುವುದು ಬಹುತೇಕ ಖಚಿತವಾಗಿದೆ.

ನಿರ್ಭಯಾ ಅತ್ಯಾಚಾರಿ ವಿನಯ್ ಶರ್ಮಾ.

ನಿರ್ಭಯಾ ಅತ್ಯಾಚಾರಿ ವಿನಯ್ ಶರ್ಮಾ.

  • Share this:
ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಪೈಕಿ ವಿನಯ್ ಶರ್ಮಾ ಮಾನಸಿಕ ಅಸ್ವಸ್ಥತೆ ಹೊಂದಿದ್ದಾರೆ ಹೀಗಾಗಿ ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.

ತಿಹಾರ್ ಜೈಲಿನಲ್ಲಿರುವ ಅಪರಾಧಿ ವಿನಯ್ ಶರ್ಮ ಕಳೆದ ಸೋಮವಾರ ಬೆಳಗ್ಗೆ ತನ್ನ ಸೆಲ್​ನಲ್ಲಿ ಗೋಡೆಗೆ ತಲೆ ಚಚ್ಚಿಕೊಂಡಿದ್ದ. ಆತನ ತಲೆಗೆ ಸಣ್ಣ ಗಾಯವಾಗಿತ್ತು. ಆತನ ತಾಯಿ ಆತನನ್ನು ನೋಡಲು ಬಂದಾಗಲೇ ವಿನಯ್ ಆಕೆಯನ್ನು ಗುರುತು ಹಿಡಿದಿರಲಿಲ್ಲ. ಹೀಗಾಗಿ, ವಿನಯ್ ಶರ್ಮ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈತನನ್ನು ಗಲ್ಲಿಗೆ ಏರಿಸಬಾರದು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು.

ಆದರೆ, ಅಪರಾಧಿಗಳ ಪರ ವಕೀಲ ವಿನಯ್ ಕುಮಾರ್ ಶರ್ಮಾ ಅವರ ಮನವಿಯನ್ನು ಹೆಚ್ಚುವರಿ ಸೆಷನ್ ನ್ಯಾಯಾಧೀಶ ಧರ್ಮೇಂದರ್ ರಾಣಾ ತಿರಸ್ಕರಿಸಿದ್ದಾರೆ.

ಈ ವೇಳೆ ಮಾತನಾಡಿರುವ ನ್ಯಾಯಾಧೀಶರು, “ತಿಹಾರ್ ಜೈಲಿನ ಸಿಸಿಟಿವಿ ವಿಡಿಯೋಗಳು ಅಪರಾಧಿ ಬೇಕೆಂದೆ ತನ್ನ ಮೇಲೆ ಮೇಲ್ನೋಟಕ್ಕೆ ಗಾಯ ಮಾಡಿಕೊಂಡಿದ್ದು, ಆತ ಯಾವುದೇ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿವೆ ಹೀಗಾಗಿ ಆತನ ಗಲ್ಲು ಶಿಕ್ಷೆಗೆ ತಡೆ ನೀಡಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಜೈಲಿನಲ್ಲಿ ನಿರ್ಭಯಾ ಅತ್ಯಾಚಾರಿಯ ಹೈಡ್ರಾಮ; ಗೋಡೆಗೆ ತಲೆ ಚಚ್ಚಿಕೊಂಡ ಅಪರಾಧಿ

ಇದಲ್ಲದೆ, ಜೈಲಿನ ಪರವಾಗಿ ಹಾಜರಾದ ಮನಶ್ಶಾಸ್ತ್ರಜ್ಞ, ನಾಲ್ವರು ಅಪರಾಧಿಗಳ ವೈದ್ಯಕೀಯ ತಪಾಸಣೆಯನ್ನು ಪ್ರತಿದಿನವೂ ಮಾಡಲಾಗುತ್ತಿದ್ದು, ಎಲ್ಲರೂ ಉತ್ತಮವಾಗಿ ಆರೋಗ್ಯವಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ಧಾರೆ. ಹೀಗಾಗಿ ಅಪರಾಧಿಗಳನ್ನು ಮಾರ್ಚ್​.3 ರಂದು ಗಲ್ಲಿಗೇರಿಸುವುದು ಬಹುತೇಕ ಖಚಿತವಾಗಿದೆ.

ಶರ್ಮಾ ಅವರ ಮನವಿಗೆ ಪ್ರತಿಕ್ರಿಯಿಸಿದ ಸಂತ್ರಸ್ತೆಯ ತಾಯಿ ಆಶಾ ದೇವಿ, "ಇದು ಮರಣದಂಡನೆಯನ್ನು ವಿಳಂಬಗೊಳಿಸುವ ತಂತ್ರವಾಗಿದ್ದು, ಅಪರಾಧಿಗಳು ನ್ಯಾಯಾಲಯಗಳನ್ನು ದಾರಿತಪ್ಪಿಸುತ್ತಿದ್ದಾರೆ. ದಂಡನೆಯಿಂದ ತಪ್ಪಿಸಿಕೊಳ್ಳಲು ಎಲ್ಲಾ ರೀತಿಯ ಕಾನೂನು ಸಹಾಯವನ್ನೂ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಮಾರ್ಚ್ 3 ರಂದು ಅವರನ್ನು ಗಲ್ಲಿಗೇರಿಸಲಾಗುವುದು ಎಂದು ನಾನು ನಂಬುತ್ತೇನೆ" ಎಂದು ತಿಳಿಸಿದ್ದಾರೆ.

ವಿನಯ್ ಶರ್ಮನ ಮಾನಸಿಕ ಸ್ಥಿತಿ ಸ್ಥಿಮಿತದಲ್ಲಿಲ್ಲ. ಆತ ಅನ್ನ, ನೀರು ಬಿಟ್ಟು ಉಪವಾಸ ಕುಳಿತಿದ್ದಾನೆ. ಇತ್ತೀಚೆಗೆ ವಿಚಿತ್ರವಾಗಿ ವರ್ತಿಸತೊಡಗಿದ್ದಾನೆ ಎಂದು ವಿನಯ್ ಪರ ವಕೀಲರು ಕಳೆದ ವಾರ ನ್ಯಾಯಾಲಯದ ಮುಂದೆ ಹೇಳಿದ್ದರು. ಗಲ್ಲುಶಿಕ್ಷೆಯಿಂದ ಬಚಾವಾಗಲು ನಾನಾ ರೀತಿಯ ಪ್ರಯತ್ನ ಪಟ್ಟಿದ್ದ ನಾಲ್ವರು ಅಪರಾಧಿಗಳಿಗೆ ಇದುವರೆಗೂ 4 ಬಾರಿ ಡೆತ್ ವಾರೆಂಟ್ ಹೊರಡಿಸಲಾಗಿದೆ. ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದ ವಿನಯ್ ಶರ್ಮನ ಕ್ಷಮಾಪಣಾ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಪಟಿಯಾಲ ನ್ಯಾಯಾಲಯ ಹೊಸ ಡೆತ್ ವಾರೆಂಟ್ ಹೊರಡಿಸಿತ್ತು.

2012ರಲ್ಲಿ ದೆಹಲಿಯಲ್ಲಿ ಆರು ಜನರು ಸೇರಿ ನಿರ್ಭಯಾ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಕೆಲ ದಿನಗಳ ಬಳಿಕ ಆಕೆ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಇವರು ತಪ್ಪೆಸಗಿದ್ದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಒಬ್ಬಾತ ಅಪ್ರಾಪ್ತನಾಗಿದ್ದರಿಂದ ಬಾಲಾಪರಾಧ ನ್ಯಾಯಾಲಯದಲ್ಲಿ ಆತನ ವಿಚಾರಣೆ ನಡೆದು 3 ವರ್ಷ ಆತನನ್ನು ಪರಿವರ್ತನಾ ಗೃಹದಲ್ಲಿರಿಸಿ ಬಿಡುಗಡೆಗೊಳಿಸಲಾಗಿದೆ.

ರಾಮ್ ಸಿಂಗ್ ಎಂಬಾತ ತಿಹಾರ್ ಜೈಲಿನಲ್ಲಿ ನೇಣಿಗೆ ಶರಣಾಗಿದ್ದ. ಉಳಿದ ದೋಷಿಗಳಾದ ಮುಖೇಶ್ ಸಿಂಗ್, ವಿನಯ್ ಶರ್ಮಾ, ಅಕ್ಷಯ್ ಕುಮಾರ್ ಸಿಂಗ್ ಮತ್ತು ಪವನ್ ಗುಪ್ತಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇವರು ಸಲ್ಲಿಸಿದ್ದ ಮೇಲ್ಮನವಿಗಳೆಲ್ಲವೂ ತಿರಸ್ಕೃತಗೊಂಡಿವೆ.

ಇದನ್ನೂ ಓದಿ : ನಿರ್ಭಯಾ ಪ್ರಕರಣ: ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಚುನಾವಣಾ ಆಯೋಗದ ಮೊರೆಹೋದ ಅಪರಾಧಿ
First published: