news18-kannada Updated:April 6, 2021, 4:19 PM IST
ನೈಜೀರಿಯದಲ್ಲಿ ಜೈಲಿನ ಮೇಲೆ ಗನ್ಮ್ಯಾನ್ಗಳ ದಾಳಿ
ನವದೆಹಲಿ (ಏ. 6): ನೈಜೀರಿಯದಲ್ಲಿ ಗನ್ಗಳನ್ನು ಹಿಡಿದಿದ್ದ ಮುಸುಕುಧಾರಿ ಉಗ್ರರು ಜೈಲಿನ ಮೇಲೆ ದಾಳಿ ನಡೆಸಿದ್ದು, ಈ ಘಟನೆಯಲ್ಲಿ 1800 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಮಷಿನ್ ಗನ್ಗಳನ್ನು ಹಿಡಿದಿದ್ದ ಉಗ್ರರ ಗುಂಪು ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ಮನಸಿಗೆ ಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.
ಜೈಲಿನಲ್ಲಿ ಪೊಲೀಸರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದಂತೆ ಜೈಲಿನಲ್ಲಿದ್ದ 1800 ಕೈದಿಗಳು ಪರಾರಿಯಾಗಿದ್ದಾರೆ. ನೈಜೀರಿಯಾದ ಓವೇರಿ ಎಂಬಲ್ಲಿ ಈ ಘಟನೆ ನಡೆದಿದ್ದು, ಕೊಲೆ, ಡ್ರಗ್ ಕೇಸ್, ದರೋಡೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ. ಅವರನ್ನು ಪತ್ತೆಹಚ್ಚುವ ಕಾರ್ಯ ನಡೆಸಲಾಗುತ್ತಿದೆ.
ರಾತ್ರಿ ವೇಳೆ ನಡೆದ ಈ ಘಟನೆಯಲ್ಲಿ ಪೊಲೀಸರು ಹಾಗೂ ಉಗ್ರರಿಗೆ ಗಾಯಗಳಾಗಿದ್ದು, ಜೈಲಿನ ಕಟ್ಟಡ ಕೂಡ ಜಖಂ ಆಗಿದೆ. ಈ ಘಟನೆಯ ಹಿಂದೆ ಜೈಲಿನಲ್ಲಿದ್ದ ಕೈದಿಗಳದ್ದೇ ಕೆಲವರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ನಾಪತ್ತೆಯಾಗಿರುವ ಕೈದಿಗಳಿಗಾಗಿ ಮತ್ತು ಈ ಕೃತ್ಯ ಎಸಗಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಸೋಮವಾರ ರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. 2 ಗಂಟೆಗೂ ಹೆಚ್ಚು ಕಾಲ ಗುಂಡಿನ ಚಕಮಕಿ ನಡೆದಿದೆ. ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಜೈಲಿನ ಸಿಬ್ಬಂದಿಗಳದ್ದೇ ಸಹಕಾರದಿಂದ ಉಗ್ರರು ಜೈಲಿನೊಳಗೆ ನುಗ್ಗಿರುವ ಅನುಮಾನವೂ ವ್ಯಕ್ತವಾಗಿದೆ.
Published by:
Sushma Chakre
First published:
April 6, 2021, 4:19 PM IST