ಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಬೆಂಗಳೂರಿನಲ್ಲಿ ಇಬ್ಬರು ಆರೋಪಿಗಳು ಎನ್ಐಎ ವಶಕ್ಕೆ

ಈ ಪ್ರಕರಣದಲ್ಲಿ ಸ್ವಪ್ನ ಸುರೇಶ್, ಸರಿತ್, ಫಾಜಿಲ್ ಫರೀದ್ ಮತ್ತು ಸಂದೀಪ್ ನಾಯರ್ ಅವರನ್ನ ಆರೋಪಿಗಳೆಂದು ಗುರುತಿಸಲಾಗಿದೆ. ಸರಿತ್ ಅವರನ್ನ ಈಗಾಗಲೇ ಬಂಧಿಸಲಾಗಿದೆ. ಈಗ ಇನ್ನಿಬ್ಬರು ಸಿಕ್ಕಿಬಿದ್ದಿರುವುದು ಪ್ರಕರಣವನ್ನು ಭೇದಿಸಲು ಎನ್ಐಎಗೆ ಸಹಕಾರಿಯಾಗಲಿದೆ.

ಸ್ವಪ್ನ ಸುರೇಶ್

ಸ್ವಪ್ನ ಸುರೇಶ್

 • News18
 • Last Updated :
 • Share this:
  ಬೆಂಗಳೂರು(ಜುಲೈ 11): ಕೇರಳದ ಚಿನ್ನಕಳ್ಳಸಾಗಾಣಿಕೆ ದಂಧೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್​ಐಎನ ತಂಡವೊಂದು ಇವತ್ತು ಬೆಂಗಳೂರಿನಲ್ಲಿ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದೆ. ಇಲ್ಲಿಯ ಹೋಟೆಲ್​ವೊಂದರಲ್ಲಿ ಅಡಗಿದ್ದ ಸ್ವಪ್ನ ಸುರೇಶ್ ಮತ್ತು ಸಂದೀಪ್ ನಾಯರ್ ಅವರನ್ನ ತನಿಖಾ ಸಂಸ್ಥೆ ಅಧಿಕಾರಿಗಳು ಡೀಟೈನ್ ಮಾಡಿದ್ದಾರೆ. ನಿನ್ನೆಯಷ್ಟೇ ಕೇರಳದ ಗೋಲ್ಡ್ ಸ್ಮಗ್ಲಿಂಗ್ ಪ್ರಕರನದ ತನಿಖೆಯನ್ನ ಎನ್​ಐಎಗೆ ವಹಿಸಲಾಗಿತ್ತು. ಒಂದೇ ದಿನದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸ್ವಪ್ನ ಸುರೇಶ್ ಅವರು ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.

  ಸ್ವಪ್ನ ಸುರೇಶ್ ಹಾಗೂ ಸುರೇಶ್ ನಾಯರ್ ಅವರಿಬ್ಬರನ್ನ ಕೇರಳದ ಕೊಚ್ಚಿ ನಗರಕ್ಕೆ ಕರೆದೊಯ್ದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನಂತರ ಎನ್​ಐಎ ಕಚೇರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಅಲ್ಲಿ ವಿಚಾರಣೆ ನಡೆಸಿ ಆ ಬಳಿಕ ಅವರನ್ನ ಬಂಧಿಸಬಹುದೆನ್ನಲಾಗಿದೆ.

  1967ರ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆಯ 16, 17 ಮತ್ತು 18ನೇ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಸ್ವಪ್ನ ಸುರೇಶ್, ಸರಿತ್, ಫಾಜಿಲ್ ಫರೀದ್ ಮತ್ತು ಸಂದೀಪ್ ನಾಯರ್ ಅವರನ್ನ ಆರೋಪಿಗಳೆಂದು ಗುರುತಿಸಲಾಗಿದೆ. ಸರಿತ್ ಅವರನ್ನ ಈಗಾಗಲೇ ಬಂಧಿಸಲಾಗಿದೆ. ಈಗ ಇನ್ನಿಬ್ಬರು ಸಿಕ್ಕಿಬಿದ್ದಿರುವುದು ಪ್ರಕರಣವನ್ನು ಭೇದಿಸಲು ಎನ್​ಐಎಗೆ ಸಹಕಾರಿಯಾಗಲಿದೆ.

  ಇದನ್ನೂ ಓದಿ: Coronavirus Updates: ದೇಶದಲ್ಲಿ 8 ಲಕ್ಷ ದಾಟಿದ ಕೊರೋನಾ ಪೀಡಿತರ ಸಂಖ್ಯೆ; ಕಳೆದ ನಾಲ್ಕು ದಿನದಲ್ಲಿ 1 ಲಕ್ಷ ಕೇಸ್​​ ಪತ್ತೆ

  ಏನಿದು ಪ್ರಕರಣ?

  ತಿರುವನಂತರಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜುಲೈ 5ರಂದು ಕಸ್ಟಮ್ಸ್ ಅಧಿಕಾರಿಗಳು 14.82 ಕೋಟಿ ರೂ ಮೌಲ್ಯದ 30 ಕಿಲೋ ಅಪ್ಪಟ ಬಂಗಾರದ ಗಟ್ಟಿಗಳನ್ನ ವಶಪಡಿಸಿಕೊಂಡಿದ್ದರು. ತಿರುವನಂತಪುರಂನಲ್ಲಿರುವ ಯುಎಇ ಕಾನ್ಸುಲೇಟ್ ಕಚೇರಿಯ ವಿಳಾಸ ಹೊಂದಿದ್ದ ಆ ಪಾರ್ಸಲ್ ಅನ್ನು ಯುಎಇ ದೇಶದಿಂದ ರಾಜತಾಂತ್ರಿಕ ಮಾರ್ಗದ ಮೂಲಕ ಕಳುಹಿಸಲಾಗಿತ್ತು. ಸರಿತ್ ಅವರು ಈ ಪ್ಯಾಕೇಜ್ ಅನ್ನು ಸ್ವೀಕರಿಸಬೇಕಿತ್ತು. ಕೇರಳ ಪೊಲೀಸರು ಸರಿತ್ ಕುಮಾರ್ ಅವರನ್ನ ಬಂಧಿಸಿದರು. ಯುಎಇ ರಾಜತಾಂತ್ರಿಕ ಕಚೇರಿಯ ಮಾಜಿ ಪಿಆರ್​ಒ ಆಗಿರುವ ಸರಿತ್ ಈ ಹಿಂದೆ ಹಲವು ಬಾರಿ ಇಂಥ ಪಾರ್ಸಲ್​ಗಳನ್ನ ಪಡೆದಿರುವ ವಿಚಾರ ಆತನ ವಿಚಾರಣೆಯಿಂದ ಬೆಳಕಿಗೆ ಬಂದಿತ್ತು.

  ಸ್ವಪ್ನ ಸುರೇಶ್ ಕೂಡ ಯುಎಇ ಕಾನ್ಸುಲೇಟ್ ಜನರಲ್ ಕಚೇರಿಯ ಮಾಜಿ ಎಕ್ಸಿಕ್ಯೂಟಿವ್ ಸೆಕ್ರೆಟರಿ ಆಗಿದ್ಧಾರೆ. ರಾಜತಾಂತ್ರಿಕ ಕಚೇರಿಯ ನಕಲಿ ದಾಖಲೆಗಳನ್ನ ಸೃಷ್ಟಿಸಿ ಗಲ್ಫ್ ರಾಷ್ಟ್ರಗಳಿಂದ ರಾಜತಾಂತ್ರಿಕ ಮಾರ್ಗದಲ್ಲಿ ಚಿನ್ನವನ್ನ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು.

  ಈ ಸ್ಮಗ್ಲಿಂಗ್ ಪ್ರಕರಣ ದೊಡ್ಡ ಸ್ವರೂಪ ಪಡೆದುಕೊಳ್ಳಲು ಕಾರಣವಾಗಿದ್ದು ಸ್ವಪ್ನ ಸುರೇಶ್ ಅವರಿಗೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯೊಂದಿರುವ ಸಂಬಂಧ. ಎಂ ಶಿವಶಂಕರ್ ಅವರೊಂದಿಗೆ ಸ್ವಪ್ನ ಸುರೇಶ್ ನಂಟು ಹೊಂದಿರುವ ವಿಚಾರ ಗೊತ್ತಾಗುತ್ತಲೇ ಕೇರಳದಲ್ಲಿ ರಾಜಕೀಯ ಬಿರುಗಾಳಿ ಎದ್ದಿದೆ. ಮುಖ್ಯಮಂತ್ರಿ ಪಿಣಾರಯಿ ವಿಜಯನ್ ಅವರು ಕೂಡಲೇ ಶಿವಶಂಕರ್ ಅವರನ್ನ ಆ ಹುದ್ದೆಯಿಂದ ಕೆಳಗಿಳಿಸಿದರು.

  ಇದನ್ನೂ ಓದಿ: Kerala Gold Smuggling: ಕೇರಳ ಚಿನ್ನದ ಸ್ಮಗ್ಲಿಂಗ್ ಪ್ರಕರಣ; ಎನ್​ಐಎ ತನಿಖೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ

  ಸ್ವಪ್ನ ಸುರೇಶ್ ಅವರು ಯುಎಇ ಕಾನ್ಸುಲೇಟ್​ನಲ್ಲಿ ಕೆಲಸ ಮಾಡುವಾಗ ಕೇರಳ ಸಿಎಂ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಆಕೆ ಕೇರಳ ರಾಜ್ಯ ಐಟಿ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕೇರಳ ಸಿಎಂ ಜೊತೆ ಇವರು ಹೊಂದಿರುವ ಸಂಬಂಧವು ಸಿಎಂ ಪಾಲಿಗೆ ಮಗ್ಗುಲಮುಳ್ಳಾಗುವ ಸಾಧ್ಯತೆ ಇದೆ. ಸಿಎಂ ರಾಜೀನಾಮೆ ನೀಡಬೇಕೆಂದು ಅಲ್ಲಿಯ ವಿಪಕ್ಷಗಳು ಬಲವಾಗಿ ಒತ್ತಾಯಿಸುತ್ತಿವೆ.  ನಿನ್ನೆ ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತಿರುವ ಎನ್​ಐಎ ಈಗ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಸ್ಮಗ್ಲಿಂಗ್ ಆದ ಚಿನ್ನವನ್ನ ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು? ಭಯೋತ್ಪಾದಕ ಚಟುವಟಿಕೆಗಳಿಗೆ ಇದು ಬಳಕೆಯಾಗುತ್ತಿತ್ತಾ? ಇತ್ಯಾದಿ ಪ್ರಶ್ನೆಗಳನ್ನ ಮುಂದಿಟ್ಟುಕೊಂಡು ಎನ್​ಐಎ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆ ಇದೆ.

  ಈ ಪ್ರಕರಣದಲ್ಲಿ ಮೊದಲು ಬಂಧಿತನಾಗಿರುವ ಸರಿತ್ ಕುಮಾರ್ ಅವರನ್ನು ಜುಲೈ 15ರಂದು ಎನ್​ಐಎ ಕೋರ್ಟ್​ಗೆ ಹಾಜರುಪಡಿಸುವ ನಿರೀಕ್ಷೆ ಇದೆ.
  Published by:Vijayasarthy SN
  First published: