ಪುಲ್ವಾಮ ದಾಳಿಗೆ ಮಸೂದ್ ಅಜರ್ ಮಾಸ್ಟರ್​ಮೈಂಡ್: ಎನ್ಐಎಯಿಂದ 13000 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ

ಜಮ್ಮುವಿನ ಎನ್ಐಎ ಕೋರ್ಟ್​ಗೆ ಸಲ್ಲಿಸಲಾದ 13 ಸಾವಿರ ಪುಟಗಳ ಚಾರ್ಜ್ ಶೀಟ್​ನಲ್ಲಿ ಮಸೂದ್ ಅಜರ್ ಮತ್ತವನ ಸೋದರರಾದ ರೌಫ್ ಅಜ್ಗರ್, ಮೊಹಮ್ಮದ್ ಅಮ್ಮರ್ ಹಾಗೂ ಉಮರ್ ಫಾರೂಕ್, ಇಸ್ಮಾಯಿಲ್ ಸೇರಿದಂತೆ 19 ಮಂದಿಯನ್ನ ಆರೋಪಿಗಳೆಂದು ಹೆಸರಿಸಲಾಗಿದೆ.

ಮೌಲಾನ ಮಸೂದ್ ಅಜರ್

ಮೌಲಾನ ಮಸೂದ್ ಅಜರ್

 • Share this:
  ಜಮ್ಮು(ಆ. 25): ಒಂದೂವರೆ ವರ್ಷದ ಹಿಂದೆ ಪುಲ್ವಾಮದಲ್ಲಿ ನಡೆದ ಉಗ್ರ ದಾಳಿ ಘಟನೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್​ಐಎ ಇಂದು 13 ಸಾವಿರ ಪುಟಗಳ ಆರೋಪ ಪಟ್ಟಿಯನ್ನು ಇಲ್ಲಿನ ಎನ್​ಐಎ ಕೋರ್ಟ್​ಗೆ ಸಲ್ಲಿಸಿದೆ. ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮೌಲಾನ ಮಸೂದ್ ಅಜರ್ ಮತ್ತವರ ಕುಟುಂಬದ ಕೆಲ ಸದಸ್ಯರು ಸೇರಿದಂತೆ 19 ಮಂದಿಯನ್ನು ಆರೋಪಿಗಳೆಂದು ಈ ಚಾರ್ಜ್​ಶೀಟ್​ನಲ್ಲಿ ಹೆಸರಿಸಲಾಗಿದೆ.

  2019, ಫೆಬ್ರವರಿಯಲ್ಲಿ ನಡೆದ ಪುಲ್ವಾಮ ದಾಳಿಯಲ್ಲಿ ಮೌಲಾನ ಮಸೂದ್ ಅಜರ್ ಮಾಸ್ಟರ್ ಮೈಂಡ್ ಆಗಿದ್ದಾರೆ. ಅವರ ಇಬ್ಬರು ಸಹೋದರರಾದ ರೌಫ್ ಅಜ್ಗರ್ ಮತ್ತು ಮೌಲಾನ ಮೊಹಮ್ಮದ್ ಅಮ್ಮರ್ ಕೂಡ ಮಾಸ್ಟರ್ ಮೈಂಡ್ ಆಗಿದ್ದಾರೆ. ಮೊಹಮ್ಮದ್ ಉಮರ್ ಫಾರೂಕ್ ಈ ಪ್ರಕರಣದಲ್ಲಿ ಪ್ರಮುಖ ಸಂಚುಕೋರ ಎಂದು ಚಾರ್ಜ್​ಶೀಟ್​ನಲ್ಲಿ ತಿಳಿಸಲಾಗಿದೆ. ಆರ್​ಡಿಎಕ್ಸ್ ಸ್ಫೋಟಕಗಳನ್ನ ಪಾಕಿಸ್ತಾನದ ಗಡಿಯಿಂದ ಕಾಶ್ಮೀರಕ್ಕೆ ತಂದಿದ್ದು ಈ ಉಮರ್ ಫಾರೂಕ್​ನೇ. ಮಸೂದ್ ಅಜರ್ ಈತನ ಸೋದರ ಮಾವ. ಐಸಿ-814 ವಿಮಾನದ ಹೈಜಾಕ್ ಮಾಡಿದ್ದ ಇಬ್ರಾಹಿಂ ಅಜರ್ ಈತನ ತಂದೆ. ದಾಳಿಗೆ ಬೇಕಾಗಿದ್ದ ಐಇಡಿ ಬಾಂಬ್​ಗಳನ್ನ ಸ್ಥಳೀಯವಾಗಿ ತಯಾರಿಸಲು ಈತನ ಪಾತ್ರ ಇದೆ ಎನ್ನಲಾಗಿದೆ.

  ಇದನ್ನೂ ಓದಿ: ನ್ಯಾಯಾಂಗ ನಿಂದನೆ ಪ್ರಕರಣ: ಪ್ರಶಾಂತ್ ಭೂಷಣ್​ರನ್ನು ಕ್ಷಮಿಸಿ ಬಿಟ್ಟುಬಿಡಿ ಎಂದು ಎಜಿ ಕೋರಿಕೆ

  ಸಿಆರ್​ಪಿಎಫ್ ಪಹರೆ ವಾಹನದ ಮೇಲೆ ದಾಳಿ ಮಾಡುವ ಮುಂಚೆಯಿಂದ ಹಿಡಿದು ದಾಳಿಯ ನಂತರದವರೆಗೂ ಈ ಫಾರೂಕ್ ಪಾಕಿಸ್ತಾನದಲ್ಲಿರುವ ಜೈಷ್ ನಾಯಕರ ಜೊತೆ ಸಂಪರ್ಕದಲ್ಲಿದ್ದುದಕ್ಕೆ ಅವಶ್ಯ ಸಾಕ್ಷ್ಯ ಇದೆ ಎಂದು ಎನ್​ಐಎ ತನ್ನ ಚಾರ್ಜ್​ಶೀಟ್​ನಲ್ಲಿ ತಿಳಿಸಿದೆ.

  ಪುಲ್ವಾಮದ ಹೆದ್ದಾರಿಯಲ್ಲಿ ಪಹರೆ ಹೋಗುತ್ತಿದ್ದ ಸಿಆರ್​ಪಿಎಫ್ ವಾಹನಗಳ ಪೈಕಿ ಹೆಚ್ಚು ಸೈನಿಕರಿರುವ ವಾಹನವನ್ನು ಗುರಿ ಮಾಡಿ ಸ್ಫೋಟಕಗಳಿದ್ದ ಕಾರನ್ನು ಗುದ್ದಿಸಲಾಗಿತ್ತು. ಸ್ಥಳೀಯ ಕಾಶ್ಮೀರೀ ಉಗ್ರ ಅದಿಲ್ ಅಹ್ಮದ್ ದರ್ ಎಂಬಾತ ಆತ್ಮಹತ್ಯಾ ದಾಳಿ ಮಾಡಿದ್ದ.

  ಚಾರ್ಜ್ ಶೀಟ್ ಪ್ರಕಾರ, ಸಿಆರ್​ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆದ ಕಾರಿನಲ್ಲಿ 35 ಕಿಲೋ ಆರ್​ಡಿಎಕ್ಸ್ ಸೇರಿ ಒಟ್ಟು 200 ಕಿಲೋನಷ್ಟು ಸ್ಫೋಟಕಗಳಿದ್ದವು. ಆರ್​​ಡಿಎಕ್ಸ್ ಅನ್ನು ಪಾಕಿಸ್ತಾನದಿಂದ ತರಲಾಗಿತ್ತು. ಮಿಕ್ಕ ಸ್ಫೋಟಕಗಳನ್ನ ಸ್ಥಳೀಯವಾಗಿಯೇ ಅಸೆಂಬಲ್ ಮಾಡಲಾಗಿತ್ತೆನ್ನಲಾಗಿದೆ.

  ಇದನ್ನೂ ಓದಿ: COVID-19 ಲಸಿಕೆ; ಇಂದಿನಿಂದ ಪುಣೆಯಲ್ಲಿ ಆರಂಭವಾಗಲಿದೆ ಮಾನವನ ಮೇಲಿನ ಕ್ಲಿನಿಕಲ್‌ ಪ್ರಯೋಗ

  ಫಾರೂಕ್ ಪಾಕಿಸ್ತಾನದಿಂದ ಆರ್​​ಡಿಎಕ್ಸ್ ಸ್ಫೋಟಕ ಮತ್ತಿತರ ವಸ್ತುಗಳನ್ನ ಹೊತ್ತು ಗಡಿ ಮೂಲಕ ಭಾರತ ಪ್ರವೇಶಿಸಿದ್ದ. ದಾಳಿಯ ಮತ್ತೊಬ್ಬ ಸಂಚುಕೋರ ಇಸ್ಮಾಯಿಲ್ ಸೈಫುಲ್ಲಾಹಂ ಎಂಬಾತ ಕೆಲ ದಿನಗಳ ಬಳಿಕ ಪಾಕಿಸ್ತಾನದ ಗಡಿ ದಾಟಿ ಬಂದಿದ್ದ. ಇವರೆಲ್ಲರೂ ಸೇರಿ ಪುಲ್ವಾಮ ದಾಳಿಯನ್ನು ಸಂಯೋಜಿಸಿದ್ದರು. 2020, ಮಾರ್ಚ್ 29ರಂದು ಮೊಹಮ್ಮದ್ ಉಮರ್ ಫಾರೂಕ್ ಹಾಗೂ ಐಇಡಿ ತಜ್ಞ ಕಮ್ರಾನ್ ಇಬ್ಬರನ್ನೂ ಭದ್ರತಾ ಪಡೆಗಳು ಎನ್​ಕೌಂಟರ್​ನಲ್ಲಿ ಹತ್ಯೆಗೈದಿದ್ದವು. ಈ ಎನ್​ಕೌಂಟರ್ ನಡೆಯುವಾಗ ಇಸ್ಮಾಯಿಲ್ ಕೂಡ ಸ್ಥಳದಲ್ಲಿದ್ದನಾದರೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು. ಈತ ಈಗಲೂ ಕಣ್ಣಿಗೆ ಬಿದ್ದಿಲ್ಲ. ಎನ್​ಕೌಂಟರ್ ಸ್ಥಳದಲ್ಲಿ ಉಮರ್ ಫಾರೂಕ್​ನ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಆತನ ಮೊಬೈಲ್​ನ ಕಾಲ್ ಡೀಟೇಲ್ಸ್, ವಾಟ್ಸಾಪ್ ಮೆಸೇಜ್, ಫೋಟೋ, ವಿಡಿಯೋ ಇತ್ಯಾದಿಗಳನ್ನ ಸಂಗ್ರಹಿಸಲಾಗಿದೆ. ಇದರಲ್ಲಿ ಆತ ಜೈಷ್ ನಾಯಕರ ಜೊತೆ ನಡೆಸಿದ ಸಂಭಾಷಣೆ, ಗಡಿ ದಾಟುವ ವಿಡಿಯೋ, ಫೋಟೋ ಇತ್ಯಾದಿ ವಿವರಗಳಿವೆ. ಇವು ಕೂಡ ಸಾಕ್ಷ್ಯಗಳಾಗಿವೆ.

  ಇನ್ನು, ಪುಲ್ವಾಮ ದಾಳಿ ಬಳಿಕ ಮತ್ತೊಂದು ಅಂಥದ್ದೇ ದೊಡ್ಡ ದಾಳಿ ಸಂಯೋಜಿಸಲು ಉಗ್ರಗಾಮಿಳು ಅಣಿಗೊಂಡಿದ್ದರು. ಆದರೆ, ಭಾರತದ ಸೇನೆಯು ಪಾಕಿಸ್ತಾನದ ಬಾಲಾಕೋಟ್ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ ಉಗ್ರರು ತಮ್ಮ ಯೋಜನೆ ಕೈಬಿಟ್ಟರೆಂಬ ವಿಚಾರ ಎನ್​ಐಎ ಗಮನಕ್ಕೆ ಬಂದಿದೆ.
  Published by:Vijayasarthy SN
  First published: