ಭೀಮಾ ಕೋರೆಗಾಂವ್ ಪ್ರಕರಣ: ಸ್ಟಾನ್ ಸ್ವಾಮಿ ಸೇರಿ ಎಂಟು ಮಂದಿ ವಿರುದ್ಧ ಎನ್ಐಎ ಚಾರ್ಜ್​ಶೀಟ್

2018 ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ವೇಳೆ ದೇಶವಿರೋಧಿ ಸಂಚು ರೂಪಿಸಿದ್ದು ಸೇರಿದಂತೆ ಇತರ ಆರೋಪಗಳೊಂದಿಗೆ ಎಂಟು ಮಂದಿ ವಿರುದ್ಧ ಎನ್ಐಎ 10 ಸಾವಿರ ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದೆ.

ಆನಂದ್ ತೇಲ್ತುಂಬೆ

ಆನಂದ್ ತೇಲ್ತುಂಬೆ

  • News18
  • Last Updated :
  • Share this:
ಮುಂಬೈ(ಅ. 09): ಎರಡು ವರ್ಷಗಳ ಹಿಂದಿನ ಎಲ್ಗಾರ್ ಪರಿಷದ್ - ಭೀಮಾ ಕೋರೆಗಾಂವ್ ಪ್ರಕರಣ ಸಂಬಂಧ ಸಾಮಾಜಿಕ ಕಾರ್ಯಕರ್ತರಾದ ಗೌತಮ್ ನವಲಾಖ ಮತ್ತು ಸ್ಟಾನ್ ಸ್ವಾಮಿ ಸೇರಿದಂತೆ ಎಂಟು ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್​ಐಎ ಇಂದು ಶುಕ್ರವಾರ ಚಾರ್ಜ್​ಶೀಟ್ ಸಲ್ಲಿಸಿದೆ. ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಹನಿ ಬಾಬು, ಗೋವಾ ಇನ್ಸ್​ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್​ನ ಪ್ರೊಫೆಸರ್ ಆನಂದ್ ತೆಲ್ತುಂಬೆ, ಮಾವೋವಾದಿ ಮುಖಂಡ ಮಿಲಿಂದ್ ತೆಲ್ತುಂಬೆ ಹಾಗೂ ಕಬೀರ್ ಕಲಾ ಮಂಚ್​ನ ಸಾಗರ್ ಗೋರ್ಖೆ, ರಮೇಶ್ ಗಾಯ್ಚೋರ್ ಮತ್ತು ಜ್ಯೋತಿ ಜಗತಪ್ ಅವರು ಚಾರ್ಜ್​ಶೀಟ್​ನಲ್ಲಿರುವ ಇತರ ಆರೋಪಿಗಳಾಗಿದ್ದಾರೆ. ಸುಮಾರು 10 ಸಾವಿರ ಪುಟಗಳ ಆರೋಪಪಟ್ಟಿಯಲ್ಲಿ ಈ ಪ್ರಕರಣದ ಇತರ ಆರೋಪಿಗಳ ಜೊತೆ ಈ ಎಂಟು ಮಂದಿ ಶಾಮೀಲಾಗಿ ದೇಶವಿರೋಧಿ ಸಂಚು ರೂಪಿಸಿದ್ದು, ಮಾವೋವಾದಿ ಉಗ್ರವಾದಕ್ಕೆ ಕುಮ್ಮಕ್ಕು ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರ ವಿವರ ನೀಡಲಾಗಿದೆ. ಅಪರಾಧ ಸಂಚು, ದೇಶವಿರೋಧಿ ಚಟುವಟಿಕೆಗಳ ಐಪಿಸಿ ಸೆಕ್ಷನ್​ಗಳು ಹಾಗೂ ಕಾನೂನು ವಿರೋಧಿ ಚಟುವಟಿಕೆ ಕಾಯ್ದೆ ಅಡಿಯ ವಿವಿಧ ಸೆಕ್ಷನ್ ಅಡಿಯಲ್ಲಿ ಈ ಎಂಟು ಮಂದಿ ಮೇಲೆ ಆರೋಪ ದಾಖಲಾಗಿದೆ.

“ಭಾರತದ ಒಳಗೆ ಮತ್ತು ಹೊರಗೆ ನಿಷೇಧಿತವಾಗಿರುವ ಮಾವೋವಾದಿ ಮತ್ತಿತರ ಸಂಘಟನೆಗಳ ಜೊತೆ ಸಂಪರ್ಕ ಇದ್ದು ಮದ್ದುಗುಂಡು, ಶಸ್ತ್ರಾಸ್ತ್ರಗಳ ಸರಬರಾಜು ಮಾಡುತ್ತಿದ್ದ ಮಾವೋವಾದಿಗಳ ವ್ಯವಸ್ಥಿತ ಜಾಲ ಇರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ತಮ್ಮ ಮುನ್ನೆಲೆಯ ಸಂಘಟನೆಗಳ ನೆರವಿನಿಂದ ನಗರ ಕ್ರಾಂತಿ ಮಾಡಲು ಮಾವೋವಾದಿಗಳು ಅಳವಡಿಸಿಕೊಂಡಿರುವ ರಣತಂತ್ರವೂ ಬೆಳಕಿಗೆ ಬಂದಿದೆ. ಇದರ ಜೊತೆಗೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಾವೋವಾದಿ ಚಟುವಟಿಕೆಗಳನ್ನ ನಡೆಸಲು ಮಾವೋವಾದಿ ಕಾರ್ಯಕರ್ತರ ಪಡೆ ಹಾಗೂ ಬೆಂಬಲಿಗರ ಮಧ್ಯೆ ಇರುವ ಹಣಕಾಸು ವ್ಯವಸ್ಥೆ ಕೂಡ ಅನಾವರಣಗೊಂಡಿದೆ” ಎಂದು ತನ್ನ ಚಾರ್ಜ್​ಶೀಟ್​ನಲ್ಲಿ ಎನ್​ಐಎ ಆರೋಪಿಸಿದೆ.

ಇದನ್ನೂ ಓದಿ: ಪಾಕಿಸ್ತಾನದ ಐಎಸ್ಐಗೆ ರಹಸ್ಯ ಮಾಹಿತಿ ರವಾನೆ; ಹೆಚ್ಎಎಲ್ ಉದ್ಯೋಗಿ ಬಂಧನ

2017, ಡಿಸೆಂಬರ್ 31ರಂದು ಎಲ್ಗರ್ ಪರಿಷದ್ ಆಯೋಜಿಸಿದ್ದ “ಭೀಮಾ ಕೋರೆಗಾಂವ್ ಶೌರ್ಯ ದಿನ್ ಪ್ರೇರಣಾ ಅಭಿಯಾನ್” ಕಾರ್ಯಕ್ರಮಕ್ಕೆ ಆನಂದ್ ತೆಲ್ತುಂಬೆ ಸಂಚಾಲಕರಾಗಿದ್ದರು. ಭಾರತ ಸರ್ಕಾರದ ಶಕ್ತಿಗಳನ್ನ ಎಲ್ಲಾ ರೀತಿಯಲ್ಲಿ ಸೋಲಿಸುವ ಸಲುವಾಗಿ ಬುದ್ಧಿಜೀವಿಗಳನ್ನ ಒಗ್ಗೂಡಿಸುವ ಜವಾಬ್ದಾರಿಯನ್ನು ಗೌತಮ್ ನವಲಾಖಗೆ ವಹಿಸಲಾಗಿತ್ತು. ಹಾಗೆಯೇ, ಮಾವೋವಾದಿ ಕಮ್ಯೂನಿಸ್ಟ್ ಸಂಘಟನೆಗೆ ನೇಮಕಾತಿಗಳನ್ನ ಮಾಡುವ ಕಾರ್ಯವನ್ನೂ ಇವರು ಮಾಡುತ್ತಿದ್ದರು ಎಂದು ಎನ್​ಐಎ ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ಗೌತಮ್ ನವಲಾಖ ಮೇಲೆ ಇನ್ನೂ ಗಂಭೀರ ಆರೋಪ ಎಂದರೆ ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ಜೊತೆ ಸಂಪರ್ಕದಲ್ಲಿದ್ದರೆನ್ನಲಾಗಿದೆ. ಇನ್ನು, ದೆಹಲಿ ಯೂನಿವರ್ಸಿಟಿಯ ಅಸೋಸಿಯೇಟ್ ಪ್ರೊಫೆಸರ್ ಹನಿ ಬಾಬು ಅವರಿಗೆ ಮಾವೋವಾದಿ ಪ್ರದೇಶಗಳಿಗೆ ವಿದೇಶೀ ಪತ್ರಕರ್ತರನ್ನ ಕರೆ ತರುವ ಕೆಲಸ ವಹಿಸಲಾಗಿತ್ತು. ಈಶಾನ್ಯ ಭಾರತದಲ್ಲಿ ನಿಷೇಧಿತವಾಗಿರುವ ಉಗ್ರ ಸಂಘಟನೆಗಳ ಜೊತೆಯೂ ಹನಿ ಬಾಬು ಅವರಿಗೆ ಸಂಪರ್ಕ ಇತ್ತು. ಮಾವೋವಾದಿ ಕಮ್ಯೂನಿಸ್ಟ್ ಸಂಘಟನೆಯ ನಂಟಿರುವ ಆರೋಪದ ಮೇಲೆ ಬಂಧಿತವಾಗಿರುವ ದೆಹಲಿ ಯೂನಿವರ್ಸಿಟಿಯ ಇಂಗ್ಲೀಷ್ ಪ್ರೊಫೆಸರ್ ಜಿಎನ್ ಸಾಯಿಬಾಬಾ ಅವರ ಬಿಡುಗಡೆಗಾಗಿ ಹನಿ ಬಾಬು ಬಹಳ ಪ್ರಯತ್ನಿಸುತ್ತಿದ್ದರು. ಇದನ್ನೂ ಕೂಡ ಅವರ ವಿರುದ್ಧ ಸಾಕ್ಷ್ಮಾಧಾರವಾಗಿ ಎನ್​ಐಎ ಪರಿಗಣಿಸಿದೆ.

ಇದನ್ನೂ ಓದಿ: Nobel Peace Prize - ವಿಶ್ವಸಂಸ್ಥೆಯ ಆಹಾರ ವಿಭಾಗಕ್ಕೆ ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ

ಕಬೀರ್ ಕಲಾ ಮಂಚ್​ನ ಸಾಗರ್ ಗೋರ್ಖೆ, ರಮೇಶ್ ಗಾಯ್​ಚೋರ್ ಮತ್ತು ಜ್ಯೋತಿ ಜಗತಾಪ್ ಅವರು ಮಹಾರಾಷ್ಟ್ರಾದ್ಯಂತ ಮಾವೋವಾದಿ ವಿಚಾರಧಾರೆ ಹರಡಲು ಹಾಗೂ ಸಂಚು ರೂಪಿಸುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೆನ್ನಲಾಗಿದೆ. ಎನ್​ಐಎ ಪ್ರಕಾರ, ಮಾವೋವಾದಿಗಳಿಗೆ ಇರುವ ಮುನ್ನೆಲೆ ಸಂಘಟನೆಗಳಲ್ಲಿ ಕಬೀರ್ ಕಲಾ ಮಂಚ್ ಕೂಡ ಒಂದು.

ಈ ಆರೋಪ ಪಟ್ಟಿಯಲ್ಲಿರುವ ಎಲ್ಲಾ ಎಂಟು ಮಂದಿ ಕೂಡ ನಗರ ಪ್ರದೇಶಗಳಲ್ಲಿ ಮಾವೋವಾದಿಗಳಿಗೆ ಹಣಕಾಸು ವ್ಯವಸ್ಥೆ, ನಾಯಕತ್ವ ಹಾಗೂ ಬೌದ್ಧಿಕ ನೆರವು ಒದಗಿಸುತ್ತಿದ್ದರು ಎಂದು ಎನ್​ಐಎ ಹೇಳಿದೆ. ಅಲ್ಲದೆ, ಹುರಿಯತ್ ಫಂಡಿಂಗ್ ಪ್ರಕರಣಕ್ಕೆ ಇದು ಸಾಮೀಪ್ಯವಿದೆ. ನಗರ ಕೇಂದ್ರಗಳಲ್ಲಿ ಮಾವೋವಾದಿ ಆಂದೋಲನಕ್ಕೆ ಯಾರು ನೆರವು ನೀಡುತ್ತಿದ್ದಾರೆ ಎಂಬುದು ನಮ್ಮ ತನಿಖೆಯಿಂದ ಗೊತ್ತಾಗಿದೆ ಎಂದು ಎನ್​ಐಎಯ ಹಿರಿಯ ಅಧಿಕಾರಿಯೊಬ್ಬರು ನ್ಯೂಸ್18ಗೆ ಹೇಳಿದ್ಧಾರೆ.
Published by:Vijayasarthy SN
First published: