ಜಮ್ಮು-ಕಾಶ್ಮೀರ; ಉಗ್ರಗಾಮಿಗಳಿಗೆ ಸಹಾಯ ಮಾಡಿರುವ ಭಯೋತ್ಪಾದಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಿಡಿಪಿ ಪಕ್ಷದ ಯುವ ವಿಭಾಗದ ಅಧ್ಯಕ್ಷ ಮತ್ತು ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿಯವರ ಆಪ್ತ ಸಹಾಯಕ ವಹೀದ್ ಪರ್ರಾ ಅವರನ್ನು ಇಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಬಂಧಿಸಿದೆ. ಆದರೆ, ಈ ಘಟನೆಯನ್ನು ಪಿಡಿಪಿ ಪಕ್ಷದ ಮುಖ್ಯಸ್ಥೆ ಹಾಗೂ ಮಾಜಿ ಸಿಎಂ ಮೆಹಬೂಬಾ ಮುಫ್ತಿ ತೀವ್ರವಾಗಿ ಖಂಡಿಸಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಜೊತೆ ಸಂಬಂಧ ಹೊಂದಿದ್ದಾರೆ ಹಾಗೂ ಬಂಧನಕ್ಕೊಳಗಾಗಿರುವ ಹಿಜ್ಬುಲ್ ಕಮಾಂಡರ್ ನವೀನ್ ಬಾಬು ಅವರ ಪ್ರಕರಣದಲ್ಲಿ ವಹೀದ್ ಪರ್ರಾ ಭಾಗಿಯಾಗಿದ್ದಾರೆ ಎಂದು ಎನ್ಐಎ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳ ಪ್ರಕಾರ, ಪರ್ರಾ ಅವರನ್ನು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕವಿದೆ ಎನ್ನುವ ಆರೋಪದಡಿ ಸೋಮವಾರವೇ ದೆಹಲಿಯಲ್ಲಿ ಬಂಧಿಸಲಾಗಿದ್ದು, ಎನ್ಐಎ ಕೇಂದ್ರ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಆದರೆ, ಈಗ ಅಧಿಕೃತವಾಗಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
"ಬಂಧಿತ ವಹೀದ್ ಪರ್ರಾ ಅವರ ವಿಚಾರಣೆಯ ಸಮಯದಲ್ಲಿ ನವೀದ್ ಬಾಬು ಅವರೊಂದಿಗೆ ಸಂಬಂಧ ಇರುವುದು ಖಚಿತವಾಗಿದೆ. ಅವರನ್ನು ದೆಹಲಿಯಲ್ಲಿ ವಿಚಾರಣೆಗೆ ಹಾಜರುಪಡಿಸಲಾಗುತ್ತದೆ. ನಂತರ ಜಮ್ಮುವಿಗೆ ಕರೆದೊಯ್ಯಲಾಗುತ್ತದೆ" ಎಂದು ಎನ್ಐಎ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿ ಪಿಡಿಪಿಯ ಸಂಘಟನೆಗೆ, ವಿಶೇಷವಾಗಿ ಉಗ್ರಗಾಮಿ-ಪೀಡಿತ ಪುಲ್ವಾಮಾದಲ್ಲಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಲ್ಲಿಂದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಚುನಾವಣೆಯ ಮೊದಲ ಹಂತವು ನವೆಂಬರ್ 28 ರಂದು ನಡೆಯಲಿದೆ.
ಇದನ್ನೂ ಓದಿ : Terror Attack: ಶ್ರೀನಗರ ಬಳಿ ಉಗ್ರರ ದಾಳಿಗೆ ಇಬ್ಬರು ಭಾರತೀಯ ಸೈನಿಕರು ಹುತಾತ್ಮ
ಆಪ್ತ ಸಹಾಯಕ ವಹೀದ್ ಪರ್ರಾ ಬಂಧನವನ್ನು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ತೀಕ್ಷ್ಣವಾದ ಟೀಕೆಗಳ ಮೂಲಕ ಟೀಕಿಸಿದ್ದಾರೆ. ಮುಫ್ತಿ, ಗೃಹ ಸಚಿವ ರಾಜನಾಥ್ ಸಿಂಗ್ ಅವರ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು, "ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಿದ್ದಕ್ಕಾಗಿ ಎನ್ಐಎ ಆಧಾರರಹಿತ ಆರೋಪದ ಮೇಲೆ ಇಂದು ವಹೀದ್ ಪರ್ರಾ ಅವರನ್ನು ಬಂಧಿಸಿದೆ. ವಹೀದ್ ಪರ್ರಾ ನವೆಂಬರ್ 20 ರಂದು ಡಿಡಿಸಿಗೆ ನಾಮಪತ್ರ ಸಲ್ಲಿಸಿದರು ಮತ್ತು ಮರುದಿನವೇ ಎನ್ಐಎ ಸಮನ್ಸ್ ಪಡೆದರು. ಇದು ಕಾಕತಾಳೀಯವಲ್ಲ" ಎಂದು ವ್ಯಂಗ್ಯವಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ