ನವದೆಹಲಿ(ಸೆ. 19): ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಶಂಕೆಯ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ 9 ಮಂದಿಯನ್ನು ಇಂದು ಶನಿವಾರ ಬೆಳಗ್ಗೆ ಬಂಧಿಸಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮತ್ತು ಕೇರಳದ ಎರ್ನಾಕುಲಂನಲ್ಲಿ ಎನ್ಐಎ ತಂಡಗಳು ನಡೆಸಿದ ದಾಳಿಯಲ್ಲಿ ಸೆರೆಸಿಕ್ಕಿರುವ 9 ಮಂದಿ ಅಲ್-ಖೈದಾ ಆಪರೇಟಿವ್ಗಳೆಂದು ಶಂಕಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 6 ಮಂದಿ ಮತ್ತು ಕೇರಳದಲ್ಲಿ 3 ಮಂದಿ ಅರೆಸ್ಟ್ ಆಗಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಅಂತರರಾಜ್ಯ ಅಲ್-ಖೈದಾ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಮೇರೆಗೆ ಎರ್ನಾಕುಲಂ ಮತ್ತು ಮುರ್ಷಿದಾಬಾದ್ನ ಹಲವು ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಯಿತು. ದೇಶದ ಪ್ರಮುಖ ನೆಲೆಗಳ ಮೇಲೆ ಉಗ್ರ ದಾಳಿ ನಡೆಸಲು ಇವರು ಸಂಚು ರೂಪಿಸುತ್ತಿದ್ದರು ಎಂದು ಎನ್ಐಎ ವಕ್ತಾರರು ಮಾಹಿತಿ ನೀಡಿದ್ದಾರೆ.
ಕೇರಳದ ಎರ್ನಾಕುಲಂನಲ್ಲಿ ಬಂಧಿತರಾದವರನ್ನು ಮುರ್ಷಿದ್ ಹಸನ್, ಇಲಾಕುಕ್ ಬಿಸ್ವಾಸ್ ಮತ್ತು ಮುಸರಫ್ ಹುಸೇನ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಬಂಧಿತರಾದವರನ್ನು ನಜ್ಮುಸ್ ಸಾಕಿಬ್, ಅಬು ಸುಫಿಯಾನ್, ಮೈಮುಲ್ ಮೊಂಡಲ್, ಲ್ಯೂ ಯೀನ್ ಅಹ್ಮದ್, ಅಲ್ ಮಾಮುಮ್ ಕಮಲ್, ಅತೀತುರ್ ರೆಹ್ಮಾನ್ ಎಂದೆನ್ನಲಾಗಿದೆ.
“ಭಾರತದ ಪ್ರಮುಖ ನೆಲೆಗಳ ಮೇಲೆ ಭಯೋತ್ಪಾದಕ ದಾಳಿಗಳನ್ನ ನಡೆಸಲು ಈ ಗುಂಪು ಯೋಜಿಸಿತ್ತು. ಅಮಾಯನಕ ಜನರನ್ನು ಕೊಂದು ಜನರ ಮನಸಲ್ಲಿ ಭಯ ಹುಟ್ಟಿಸುವ ಗುರಿ ಹೊಂದಿತ್ತು” ಎಂದು ಎನ್ಐಎ ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ: ಶೋಪಿಯಾನ್ ಎನ್ಕೌಂಟರ್ ನಕಲಿ; ಎಎಫ್ಎಸ್ಪಿ ಕಾಯ್ದೆ ಉಲ್ಲಂಘನೆ; ಶಿಸ್ತಿನ ಕ್ರಮಕ್ಕೆ ಸೇನೆ ಮುಂದು
ರೇಡ್ ಮಾಡಿದ ಸ್ಥಳದಲ್ಲಿ ಮಾರಕ ಆಯುಧಗಳು, ನಾಡಬಂದೂಕುಗಳು, ಜಿಹಾದಿ ಪುಸ್ತಕಗಳು, ಡಿಜಿಟಲ್ ಸಾಧನಗಳು, ದೇಹ ರಕ್ಷಾ ಕವಚಗಳು, ಸ್ಫೋಟಕ ಸಾಧನಗಳು ಪತ್ತೆಯಾಗಿದ್ದು ವಶಪಡಿಸಿಕೊಳ್ಳಲಾಗಿದೆ.
“ಪಾಕ್ ಮೂಲದ ಅಲ್ ಖೈದಾ ಉಗ್ರರು ಈ ವ್ಯಕ್ತಿಗಳನ್ನ ಸೋಷಿಯಲ್ ಮೀಡಿಯಾ ಮುಖಾಂತರ ಸೆಳೆದುಕೊಂಡು ದೆಹಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿಗಳನ್ನ ನಡೆಸಲು ಪ್ರಚೋದನೆ ನೀಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಲ್ ಖೈದಾ ಟೆರರ್ ಮಾಡ್ಯೂಲ್ ಹಣ ಸಂಗ್ರಹಣೆಯಲ್ಲಿ ನಿರತವಾಗಿತ್ತು. ಈ ಗುಂಪಿನ ಕೆಲ ಸದಸ್ಯರು ದೆಹಲಿಗೆ ಹೋಗಿ ಮದ್ದು ಗುಂಡುಗಳನ್ನ ಪಡೆಯಲು ಯೋಜಿಸಿದ್ದರು.
ಈಗ ಬಂಧಿತ ಮಂದಿಯನ್ನು ಸ್ಥಳೀಯ ನ್ಯಾಯಾಲಯಗಳಲ್ಲಿ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಇನ್ನಷ್ಟು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ