ನವದೆಹಲಿ (ನ. 9): ಭಾರತದ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವುದರಿಂದ ನವೆಂಬರ್ 30ರವರೆಗೆ ಪಟಾಕಿ ನಿಷೇಧ ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್ಜಿಟಿ) ಆದೇಶ ನೀಡಿದೆ. ಇಂದು ಮಧ್ಯರಾತ್ರಿಯಿಂದಲೇ ಈ ಆದೇಶ ಜಾರಿಯಾಗಲಿದ್ದು, ಇನ್ನು 20 ದಿನಗಳ ಕಾಲ ಪಟಾಕಿ ಮಾರಾಟ, ಬಳಕೆಯನ್ನು ನಿಷೇಧಿಸಲಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ವರ್ಷ ದೆಹಲಿಯಲ್ಲಿ ವಾಯು ಗುಣಮಟ್ಟ ತೀರಾ ಹದಗೆಟ್ಟಿದೆ. ಇದೀಗ ದೀಪಾವಳಿಯೂ ಸಮೀಪಿಸಿರುವುದರಿಂದ ಪಟಾಕಿಯಿಂದ ವಾಯುಮಾಲಿನ್ಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ, ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ.
ಎನ್ಜಿಟಿ ಚೇರ್ಮನ್ ನ್ಯಾ. ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ದೆಹಲಿ- ಎನ್ಸಿಆರ್ ವ್ಯಾಪ್ತಿಯನ್ನು ಎಲ್ಲ ರೀತಿಯ ಪಟಾಕಿಯನ್ನೂ ನಿಷೇಧಿಸಲಾಗಿದೆ. ಇಂದು ಮುಂಜಾನೆಯಿಂದ ದೆಹಲಿಯಲ್ಲಿ ಹೊಗೆ ಆವರಿಸಿದ್ದರಿಂದ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವುದು ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.
ಕೇವಲ ದೆಹಲಿ ಮಾತ್ರವಲ್ಲದೆ ಯಾವ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುತ್ತದೋ ಆ ಎಲ್ಲ ನಗರಗಳಲ್ಲೂ ಪಟಾಕಿ ನಿಷೇಧ ಅನ್ವಯವಾಗಲಿದೆ ಎಂದು ಎನ್ಜಿಟಿ ಆದೇಶಿಸಿದೆ. ಕರ್ನಾಟಕ ಸೇರಿ ವಾಯುಮಾಲಿನ್ಯ ಹೆಚ್ಚಾಗಿ ಇರದ ಭಾಗಗಳಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಲಾಗುವುದು ಎಂದು ಕೂಡ ತನ್ನ ಆದೇಶದಲ್ಲಿ ತಿಳಿಸಿದೆ. ಕರ್ನಾಟಕದಲ್ಲಿ ಈಗಾಗಲೇ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶ ನೀಡುವುದಾಗಿ ಘೋಷಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ