ನವದೆಹಲಿ(ಮಾ. 07): ಕೆಲ ಎನ್ಜಿಒಗಳಿಗೆ ಬರುತ್ತಿರುವ ವಿದೇಶೀ ದೇಣಿಗೆಯ ಮೇಲೆ ನಿರ್ಬಂಧ ಹೇರುತ್ತಿರುವ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮೂಗುದಾರ ಹಾಕಿದೆ. ಕಾನೂನುಬದ್ಧ ಮಾರ್ಗದಲ್ಲಿ ಪ್ರತಿಭಟನೆ ನಡೆಸುವ ಒಂದು ವರ್ಗದ ನಾಗರಿಕರಿಗೆ ಬೆಂಬಲವಾಗಿ ನಿಂತಿರುವ ಸಂಘ ಸಂಸ್ಥೆಗಳಿಗೆ ವಿದೇಶೀ ದೇಣಿಗೆ ನಿರಾಕರಿಸಲು ಆಗುವುದಿಲ್ಲ ಎಂದು ಸರ್ವೊಚ್ಚ ನ್ಯಾಯಾಲಯ ತಿಳಿಸಿದೆ.
ರಾಜಕೀಯ ಗುರಿ ಅಥವಾ ಉದ್ದೇಶ ಇಲ್ಲದೇ ಕಾನೂನು ಪ್ರಕಾರ ಪ್ರತಿಭಟನೆ, ಮುಷ್ಕರ ನಡೆಸುವ ನಾಗಕರಿಗೆ ಬೆಂಬಲವಾಗಿ ನಿಲ್ಲುವ ಸಂಸ್ಥೆಗಳಿಗೆ ನಿರ್ಬಂಧ ಹಾಕುವಂತಿಲ್ಲ ನ್ಯಾ| ಎಲ್. ನಾಗೇಶ್ವರ್ ರಾವ್ ನೇತೃತ್ವದ ಸುಪ್ರೀಂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
“ಬಂದ್, ಮುಷ್ಕರ ಇತ್ಯಾದಿ ಕಾನೂನುಬದ್ಧ ಮಾರ್ಗಗಳ ಮೂಲಕ ನಡೆಸಲಾಗುವ ಸಾರ್ವಜನಿಕ ಹೋರಾಟಗಳಿಗೆ ಬೆಂಬಲ ನೀಡುವ ಸಂಸ್ಥೆಗೆ ವಿದೇಶೀ ದೇಣಿಗೆ ಪಡೆಯುವ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ… ಸಕ್ರಿಯ ರಾಜಕಾರಣದಲ್ಲಿ ಪಾತ್ರ ಇರುವ ಅಥವಾ ಪಕ್ಷ ರಾಜಕಾರಣದ ಭಾಗವಾಗಿರುವ ಸಂಸ್ಥೆಗಳಿಗೆ ಮಾತ್ರ ನೀವು ವಿದೇಶೀ ದೇಣಿಗೆ ನಿರಾಕರಿಸಬಹುದು” ಎಂದು ನ್ಯಾಯಪೀಠ ತಿಳಿಸಿದೆ.
ಇದನ್ನೂ ಓದಿ: YES Bank Crisis: ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ನಿವಾಸದ ಮೇಲೆ ಇಡಿ ದಾಳಿ
2010ರ ವಿದೇಶೀ ದೇಣಿಗೆ ನಿಯಂತ್ರಣ ಕಾಯ್ದೆಯಲ್ಲಿರುವ ಎರಡು ನಿಯಮವನ್ನಿಟ್ಟುಕೊಂಡು ಕೇಂದ್ರ ಸರ್ಕಾರವು ಕೆಲ ಎನ್ಜಿಒಗಳ ಮೇಲೆ ಕಡಿವಾಣ ಹಾಕುತ್ತಿದೆ ಎಂಬ ಆರೋಪ ಇದೆ. ಈ ಕಾಯ್ದೆಯ 3(V) ನಿಯಮದ ಪ್ರಕಾರ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಮೊದಲಾದವರ ಸಂಸ್ಥೆಗಳು ಯಾವುದೇ ರಾಜಕೀಯ ಪಕ್ಷದೊಂದಿಗೆ ಜೋಡಿತವಾಗಿಲ್ಲದಿದ್ದರೂ ರಾಜಕೀಯ ಹಿತಾಸಕ್ತಿ ದೃಷ್ಟಿಯಿಂದ ಚಟುವಟಿಕೆ ನಡೆಸುತ್ತಿರುವುದು ಕಂಡುಬಂದರೆ ಅಂಥ ಸಂಸ್ಥೆಗಳಿಗೆ ವಿದೇಶೀ ದೇಣಿಗೆ ನಿರಾಕರಿಸಬಹುದು ಎಂದಿದೆ.
3(vi) ನಿಯಮದ ಪ್ರಕಾರ, ಬಂದ್, ಮುಷ್ಕರ, ರಸ್ತೆ ತಡೆ, ರೈಲು ತಡೆ, ಜೈಲ್ ಭರೋ ಇತ್ಯಾದಿ ಚಟುವಟಿಕೆ ನಡೆಸುವ ಸಂಸ್ಥೆಯನ್ನು ರಾಜಕೀಯ ಸಂಬಂಧಿತ ಎಂದು ಘೋಷಿಸಬಹುದು. ಆಗ ಈ ಸಂಸ್ಥೆಗಳಿಗೆ ವಿದೇಶದಿಂದ ಹಣ ಬರುವುದಕ್ಕೆ ತಡೆಯೊಡ್ಡಬಹುದು.
ಇವೆರಡು ನಿಯಮಗಳನ್ನ ಇಟ್ಟುಕೊಂಡು ಕೇಂದ್ರ ಸರ್ಕಾರವು ಅನೇಕ ಎನ್ಜಿಒಗಳಿಗೆ ವಿದೇಶೀ ದೇಣಿಗೆ ಹಕ್ಕನ್ನು ನಿರಾಕರಿಸುತ್ತಿದೆ. ಈ ಎರಡು ಕಾನೂನುಗಳ ಸಿಂಧುತ್ವವನ್ನು ಪ್ರಶ್ನಿಸಿ ಇಂಡಿಯನ್ ಸೋಷಿಯಲ್ ಆ್ಯಕ್ಷನ್ ಫೋರಮ್ ಎಂಬ ಎನ್ಜಿಒ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ತಮ್ಮ ಅರ್ಜಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್ ತೀರ್ಪನ್ನೂ ಈ ಎನ್ಜಿಓ ಪ್ರಶ್ನಿಸಿತ್ತು. ಸಾರ್ವಜನಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಚಟುವಟಿಕೆಗೆ ಯಾವುದೇ ರೀತಿಯ ದೇಣಿಗೆ ಸಿಗದಂತೆ ಮಾಡುವಂತಿಲ್ಲ ಎಂಬುದು ಇಂಡಿಯನ್ ಸೋಷಿಯಲ್ ಆ್ಯಕ್ಷನ್ ಫೋರಂ ವಾದವಾಗಿದೆ.
ಇದನ್ನೂ ಓದಿ: ಕಾಬೂಲ್ನಲ್ಲಿ ಶಿಯಾ ಪಂಗಡದ ಮೇಲೆ ಗುಂಡಿನ ದಾಳಿ; 32 ಮಂದಿ ಸಾವು, 58 ಜನರಿಗೆ ಗಾಯ
ಎನ್ಜಿಒ ವಾದಕ್ಕೆ ಮನ್ನಣೆ ನೀಡಿರುವ ಸುಪ್ರೀಂ ಕೋರ್ಟ್ ವಿದೇಶೀ ದೇಣಿಗೆ ಕಾಯ್ದೆಯ 3(v) ನಿಯಮದ ಬಗ್ಗೆ ಚಕಾರ ಎತ್ತಿತು. ಈ ನಿಯಮವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚು ಎಂದಿತು.
“ಸಮಾಜದ ಸಾಮಾಜಿಕ ಮತ್ತು ಆರ್ಥಿಕ ಒಳಿತಿಗೆ ಕೆಲಸ ಮಾಡುವ ಸಂಸ್ಥೆಗಳನ್ನು ರಾಜಕೀಯ ಹಿತಾಸಕ್ತಿ ನೆಪದಲ್ಲಿ ಕಾಯ್ದೆಯ ವ್ಯಾಪ್ತಿಗೆ ತರುವಂತಿಲ್ಲ. ರಾಜಕೀಯ ಹಿತಾಸಕ್ತಿ ಎಂಬುದು ಸಕ್ರಿಯ ರಾಜಕಾರಣ ಅಥವಾ ಪಕ್ಷ ರಾಜಕಾರಣಕ್ಕೆ ಸಂಬಂಧಿಸಿದ್ದಾಗಿರಬೇಕು” ಎಂದು ಸುಪ್ರೀಂ ನ್ಯಾಯಪೀಠ ಹೇಳಿತು.
ಹಾಗೆಯೇ, ರೂಲ್ 3(vi) ಬಗ್ಗೆ ಮಾತನಾಡಿದ ನ್ಯಾಯಮೂರ್ತಿಗಳು, ಮುಷ್ಕರದಂತಹ ಸಾರ್ವಜನಿಕರ ಪ್ರತಿಭಟನೆಗಳಿಗೆ ಬೆಂಬಲ ನೀಡುವ ಸಂಸ್ಥೆಗಳಿಗೆ ವಿದೇಶೀ ದೇಣಿಗೆಯ ಹಕ್ಕು ನಿರಾಕರಿಸುವುದು ಸಮಂಜಸವಲ್ಲ ಎಂದೂ ತೀರ್ಪು ನೀಡಿದರು.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ