Maha Kumbha Mela - ಮುಂದಿನ ವರ್ಷ ಸಿಂಧೂ ನದಿ ದಡದ ಮೇಲೆ ಮಹಾ ಕುಂಭಮೇಳ

ಭಾರತದಲ್ಲಿ ಲೇಹ್, ಲಡಾಖ್ ಮೂಲಕ ಸಾಗಿ ಹೋಗುವ ಸಿಂಧೂ ನದಿಯಲ್ಲಿ ಮುಂದಿನ ವರ್ಷದ ಮಹಾ ಕುಂಭಮೇಳ ನಡೆಸಲಾಗುತ್ತಿದೆ. ಗಡಿಭಾಗದ ಜನರಿಗೆ ಧೈರ್ಯ ತುಂಬಲು ಅಲ್ಲಿ ಈ ಮೇಳ ಆಯೋಜಿಸಿದ್ದೇವೆ ಎಂದು ಸಿಂಧೂ ದರ್ಶನ ಉತ್ಸವ ಸಮಿತಿ ತಿಳಿಸಿದೆ.

ಸಿಂಧೂ ಯಾತ್ರಾರ್ಥಿಗಳು

ಸಿಂಧೂ ಯಾತ್ರಾರ್ಥಿಗಳು

  • Share this:
ನವದೆಹಲಿ: ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಲೇಹ್ ಹಾಗೂ ಲಡಾಕ್ ಹಾದಿಯಾಗಿ ಸಾಗುವ ಸಿಂಧೂ ನದಿ ದಡದ ಮೇಲೆ ಮುಂದಿನ ವರ್ಷ ಸಿಂಧೂ ಮಹಾ ಕುಂಭಮೇಳ ನಡೆಯಲಿದೆ. ಸಿಂಧೂ ದರ್ಶನ ಉತ್ಸವ ಸಮಿತಿಯ ಹಾಗೂ ಹಿಮಾಲಯ ಪರಿವಾರವು ಈ ಮಹಾ ಕುಂಭಮೇಳವನ್ನು ಆಯೋಜಿಸುತ್ತಿದೆ. ಗಡಿ ಭಾಗದ, ಅದರಲ್ಲೂ ಲೇಹ್-ಲಡಾಕ್ ಜನರಿಗೆ ಧೈರ್ಯ ತುಂಬಲು, ಇಡೀ ದೇಶ ನಿಮ್ಮೊಂದಿಗಿದೆ ಎಂಬ ವಿಶ್ವಾಸ ತುಂಬಲು ಹಾಗೂ ಒಂದೊಮ್ಮೆ ಚೀನಾ ದೇಶ ಗಡಿಯಲ್ಲಿ ಯುದ್ಧ ಸಾರಿದರೆ ಆಗಲೂ ಧೃತಿಗೆಡುವ ಅವಶ್ಯಕತೆ ಇಲ್ಲ ಎಂದು ಸ್ಥೈರ್ಯ ತುಂಬಲು ಈ ಮಹಾ ಕುಂಭಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಸಿಂಧೂ ದರ್ಶನ ಉತ್ಸವ ಸಮಿತಿಯ ಹಾಗೂ ಹಿಮಾಲಯ ಪರಿವಾರ ಸಂಘಟನೆಯ ಕರ್ನಾಟಕದ ರಾಜ್ಯಾಧ್ಯಕ್ಷರಾದ ಡಾ. ವೆಂಕಟೇಶ ಮೌರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದು ಶಾಂತಿ ಮತ್ತು ಭಾರತದ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಕಾರ್‍ಯಕ್ರಮವಾಗಿದೆ. ಈ ಸಿಂಧೂ ಮಹಾ ಕುಂಭಮೇಳಕ್ಕೆ ದೇಶಾದ್ಯಂತ ಇರುವ ಸಾಧು ಸಂತರು, ಸ್ವಾಮೀಜಿಗಳು, ವಿವಿಧ ಧರ್ಮದ ಧಾರ್ಮಿಕ ಗುರುಗಳು ಸಮಾಜದ ವಿವಿಧ ಕ್ಷೇತ್ರದ ಪ್ರತಿನಿಧಿಗಳು, ಸಮಾಜವನ್ನು ಜಾಗೃತಗೊಳಿಸಲು ಶ್ರಮಿಸುತ್ತಿರುವ ಎಲ್ಲಾ ಪ್ರಮುಖ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕರ್ನಾಟಕದಿಂದ ಮುರುಘಾ ಶರಣರು, ಸಿದ್ಧಗಂಗಾ ಶ್ರೀಗಳು, ನಿರ್ಮಲಾನಂದ ಶ್ರೀಗಳು, ಡಾ‌. ವೀರೇಂದ್ರ ಹೆಗ್ಗಡೆ, ರವಿಶಂಕರ ಗುರೂಜಿ ಸೇರಿದಂತೆ ಎಲ್ಲಾ ಸ್ವಾಮಿಜಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಒಂದು ಸೇರಿ ದೇಶದ ಈ 24 ವಿಶ್ವವಿದ್ಯಾಲಯಗಳು ನಕಲಿ: ಪಟ್ಟಿ ಹಾಕಿದ ಯುಜಿಸಿ

ಸಿಂಧೂ ನದಿ ಎಂದಾಕ್ಷಣ ನೆನಪಾಗುವುದು ಭಾರತದ ಇತಿಹಾಸ ಮತ್ತು ನಾಗರೀಕತೆಯ ಉಗಮದ ಪ್ರತೀಕ ಎಂದು. ಭಾರತದಲ್ಲಿ ಉಗಮವಾಗುವ ಸಿಂಧೂ ನದಿಯನ್ನು ಪಾಕಿಸ್ತಾನ ಮತ್ತು ಚೀನಾ ದೇಶಗಳು ಆಕ್ರಮಿಸಿಕೊಂಡಿವೆ. ಸಿಂಧೂ ನದಿ ಭಾರತದಲ್ಲಿ ಹರಿಯುವುದು ಕೇವಲ 45 ಕಿಲೋ ಮೀಟರ್ ಮಾತ್ರ. ಅದೂ ಲೇಹ್-ಲಡಾಕಿನಲ್ಲಿ. ಹಾಗಾಗಿ ಈ ನದಿಯನ್ನು ಭಾರತದ ಸರ್ಕಾರವು ನದಿ ಜೋಡಣೆ ಮುಖಾಂತರ ಭಾರತಕ್ಕೆ ಉಪಯೋಗವಾಗುವಂತೆ ಮಾಡಬೇಕೆಂದು ಸಿಂಧೂ ನದಿ ದರ್ಶನ ಯಾತ್ರಾ ಸಮಿತಿ ಒತ್ತಾಯಿಸಲಿದೆ ಎಂದು ಡಾ. ವೆಂಕಟೇಶ ಮೌರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದ ಇತಿಹಾಸ ನಾಗರೀಕತೆ ಸಾರುವ ಸಿಂಧೂ ನದಿಯ ಇತಿಹಾಸವನ್ನು ಇಂದಿನ ಯುವಜನತೆ ಮರೆಯುತ್ತಿರುವ ಕಾರಣ ಜಮ್ಮು-ಕಾಶ್ಮೀರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 70ರ ದಶಕದ ಪ್ರಾಂತ ಪ್ರಚಾರಕರಾಗಿದ್ದ ಇಂದಿರೇಶ ಕುಮಾರ್, 1989ರಿಂದ 1995ರವರೆಗೆ ಬಹಳಷ್ಟು ಬಾರಿ ಲೇಹ್-ಲಡಾಕಿಗೆ ಭೇಟಿ ಕೊಟ್ಟಿದ್ದಾರೆ. 1996ರಲ್ಲಿ ಬಿಜೆಪಿಯ ಹಿರಿಯ ನಾಯಕ ಲಾಲಕೃಷ್ಣ ಆಡ್ವಾಣಿ ಹಾಗೂ ಪತ್ರಕರ್ತ ತರುಣ್ ವಿಜಯ್ ಅವರನ್ನು ಲೇಹ್-ಲಡಾಕಿಗೆ ಆಹ್ವಾನಿಸಿ ಪ್ರತಿ ವರ್ಷ ಜೂನ್ ತಿಂಗಳಲ್ಲಿ ಸಿಂಧೂ ದರ್ಶನ ಉತ್ಸವ ನಡೆಸಲು ನಿರ್ಧರಿಸಿದರು ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: 2017ರಿಂದ ಈವರೆಗಿನ ಎಲ್ಲ ದಾಖಲೆಗಳನ್ನು ವೆಬ್​ಸೈಟ್​ನಿಂದ ಡಿಲೀಟ್​ ಮಾಡಿದ ರಕ್ಷಣಾ ಇಲಾಖೆ

1996ರಲ್ಲಿ ಲೇಹ್-ಲಡಾಕಿನ ಸಿಂಧೂ ನದಿಯ ದಡದ ಮೇಲೆ ಸಿಂಧೂ ಯಾತ್ರೆಯನ್ನು ಆರಂಭಿಸಲಾಯಿತು. ಅಂದಿನಿಂದ ಇಂದಿನವರೆಗೆ 24 ಉತ್ಸವಗಳು ನಡೆದಿದ್ದು, ಕರ್ನಾಟಕದಿಂದಲೂ ಪ್ರತಿವರ್ಷ ನೂರಾರು ಯಾತ್ರಾರ್ಥಿಗಳು ಭಾಗವಹಿಸುತ್ತಿದ್ದಾರೆ. ಮುಂದಿನ ವರ್ಷ 25ನೇ ಸಿಂಧೂ ದರ್ಶನ ಉತ್ಸವ ನಡೆಯಲಿದೆ. ಈ ವಿಶೇಷ ಯಾತ್ರೆಯನ್ನು ಸಿಂಧೂ ಮಹಾ ಕುಂಭ ಯಾತ್ರೆಯನ್ನಾಗಿ ಮಾಡಲು ಸಿಂಧೂ ದರ್ಶನ ಉತ್ಸವ ಸಮಿತಿ ನಿರ್ಧರಿಸಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಗುಜರಾತಿನಿಂದ ಅಸ್ಸಾಂ -ಮೇಘಾಲಯದವರೆಗೆ ಭಾರತದ ಸಂಸ್ಕೃತಿ, ಇತಿಹಾಸ ಮತ್ತು ಐಕ್ಯತೆ ಸಾರುವ ಸಾಂಸ್ಕೃತಿಕ ತಂಡಗಳು ಈ ಮಹಾ ಕುಂಭಮೇಳದಲ್ಲಿ ಪ್ರದರ್ಶನ ನೀಡಲಿವೆ ಎಂದು ವಿವರಿಸಿದ್ದಾರೆ.

7 ವರ್ಷಗಳಿಂದ ಸಿಂಧೂ ದರ್ಶನ ಉತ್ಸವ ಸಮಿತಿಯ ಹಾಗೂ ಹಿಮಾಲಯ ಪರಿವಾರ ಸಂಘಟನೆಯ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ವೆಂಕಟೇಶ ಮೌರ್ಯ ಹಾಗೂ ಅವರ ತಂಡ 7 ವರ್ಷಗಳಿಂದ ಸತತವಾಗಿ ಪ್ರತಿ ವರ್ಷ ನೂರಾರು ಜನರನ್ನು ಈ ಸಿಂಧೂ ಯಾತ್ರೆಯಲ್ಲಿ ಜೋಡಿಸುತ್ತಿದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ತುಂಗಾ ಸ್ನಾನ, ಗಂಗಾ ಪಾನ ಹಾಗೂ ಸಿಂಧೂ ದರ್ಶನ ಮಾಡಬೇಕೆನ್ನುವವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಸಿಂಧೂ ಮಹಾ ಕುಂಭದಲ್ಲಿ ಕರ್ನಾಟಕದಿಂದ ಕನಿಷ್ಠ 1,000 ಯಾತ್ರಾರ್ಥಿಗಳು ಭಾಗವಹಿಸುವಂತೆ ತಯಾರಿ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 1ರಿಂದ 5ರವರೆಗೆ ಲೇಹ್-ಲಡಾಕಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಧ ಹಿರಿಯ ಪ್ರಚಾರಕರಾದ ಇಂದಿರೇಶ ಕುಮಾರ್ ಮಾರ್ಗದರ್ಶನದಲ್ಲಿ  ನಡೆದ ಸಿಂಧೂ ಮಹಾ ಕುಂಭ ಸಿದ್ಧತಾ ಸಭೆಯಲ್ಲಿ ಡಾ. ವೆಂಕಟೇಶ ಮೌರ್ಯ ಭಾಗವಹಿಸಿದ್ದರು.

ವರದಿ: ಧರಣೀಶ್ ಬೂಕನಕೆರೆ
Published by:Vijayasarthy SN
First published: