ಮೀರತ್: ಉತ್ತರಪ್ರದೇಶದ (Uttar Pradesh) ಮೀರತ್ (Meerut) ನಗರದಲ್ಲಿ ಆಘಾತಕಾರಿ ಘಟನೆಯಲ್ಲಿ ನವವಧುವೊಬ್ಬರು ದುರಂತ ಅಂತ್ಯ ಕಂಡಿದ್ದಾರೆ. ವಿವಾಹವಾಗಿ ಗಂಡನ ಮನೆಗೆ ಸೇರಿದ ಮಾರನೆಯ ದಿನವೇ ಮಹಿಳೆ ಗ್ಯಾಸ್ ಗೀಸರ್ (Gas Geyser) ಸೋರಿಕೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ ಸ್ನಾನಕ್ಕೆಂದು ಹೋಗಿದ್ದ ಮಹಿಳೆ ಸಾಕಷ್ಟು ಸಮಯವಾದರೂ ಹೊರ ಬರದಿದ್ದರಿಂದ ಅನುಮಾನಗೊಂಡು ಮನೆಯವರು ಬಾಗಿಲು ತಟ್ಟಿದ್ದಾರೆ. ಸ್ನಾನದ ಕೋಣೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರಿಂದ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಆಕೆ ಪಜ್ಞೆ ತಪ್ಪಿ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ವೈದ್ಯರು ಮಹಿಳೆ ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಸಾವಿಗೆ ಇದೇ ಕಾರಣ
ಗ್ಯಾಸ್ ಗೀಜರ್‌ಗಳನ್ನು ಆನ್ ಮಾಡಿದಾಗ ನೀರನ್ನು ಬಿಸಿ ಮಾಡುವುದಕ್ಕೆ ಅದು ಸಂಪೂರ್ಣ ಆಮ್ಲಜನಕವನ್ನು ಬಳಸಿಕೊಂಡು ಕಾರ್ಮೋನ್ ಮೊನಾಕ್ಸೈಡ್(Carbon Monoxide) ಅನ್ನು ಬಿಡುಗಡೆ ಮಾಡುತ್ತದೆ. ಈ ವೇಳೆ ಲೀಕ್ ಆದ ಸಂದರ್ಭದಲ್ಲಿ ಒಳಗಿರುವ ವ್ಯಕ್ತಿಗಳು ಕೆಲವೇ ನಿಮಿಷಗಳಲ್ಲಿ ಉಸಿರುಗಟ್ಟಿ ಸಾವನ್ನಪ್ಪುತ್ತಾರೆ. ಈ ಗ್ಯಾಸ್ ತುಂಬಾ ಅಪಾಯಕಾರಿ. ಈ ಗ್ಯಾಸ್ ಉಸಿರನ್ನು ತೆಗೆದುಕೊಂಡ ಮರುಕ್ಷಣವೇ ಪ್ರಜ್ಞೆ ತಪ್ಪಿ ಬೀಳುತ್ತಾರೆ. ತಕ್ಷಣ ಗುರುತಿಸಿ ವೈದ್ಯರಿಗೆ ತೋರಿಸಿದರೆ ಜೀವ ಉಳಿಸುವ ಸಾಧ್ಯತೆ ಇರುತ್ತದೆ. ಮೈಮರೆತರೆ ಈ ಮಹಿಳೆಯಂತೆ ಜೀವ ಕಳೆದುಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ: Bride Death: ಮದುಮಗಳ ಜೀವ ತೆಗೆದ ಗ್ಯಾಸ್ ಗೀಸರ್
ಗಾಳಿ ಬರುವ ಸ್ನಾನಗೃಹದಲ್ಲಿ ಬಳಸಬೇಕು
ಹಿಂದೆ, ಗ್ಯಾಸ್ ಗೀಸರ್‌ಗಳ(Gas geysers) ಬಳಕೆಯು ಮೂರ್ಚೆ ರೋಗಕ್ಕೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವೊಮ್ಮೆ ಉಸಿರುಗಟ್ಟುವಿಕೆಯಿಂದ ಸಾವಿಗೂ ಕಾರಣವಾಗಬಹುದು ಎಂದು ಹೇಳುತ್ತಾರೆ. ಅದಕ್ಕಾಗಿಯೇ ವೈದ್ಯರು ಚೆನ್ನಾಗಿ ಗಾಲಿ ಬರಲು ಕಿಟಕಿಯಿರುವ ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್ ಅನ್ನು ಅಳವಡಿಸಲು ಶಿಫಾರಸು ಮಾಡುತ್ತಾರೆ.
ಗ್ಯಾಸ್ ಗೀಸರ್ ಬಳಕೆಯಿಂದಾಗುವ ಅಪಾಯ
ಗ್ಯಾಸ್ ಗೀಸರ್ ಲೀಕ್ನಿಂದ ಕೆಲವು ಸಂದರ್ಭಗಳಲ್ಲಿ ಶಾಶ್ವತವಾಗಿ ಮೆದುಳಿಗೆ ಅಪಾಯ ಉಂಟಾಗುವ ಸಂಭವವಿದೆ ಎಂದು ತಜ್ಞರು ಹೇಳಿದ್ದಾರೆ. ಆದಾಗ್ಯೂ, ಕೆಲವು ತಿಂಗಳುಗಳವರೆಗೆ ಬಳಸುವ ಆಂಟಿ-ಸೀಜರ್ ಔಷಧಿಗಳೊಂದಿಗೆ ಚಿಕಿತ್ಸೆ ನೀಡಬಹುದು. ಐದು ನಿಮಿಷಗಳವರೆಗೆ ಶ್ವಾಸ ಮಾಡುವುದರಿಂದ ಮೊದಲು ತಲೆತಿರುಗಬಹುದು. ಹೆಚ್ಚು ಸಮಯ ಗ್ಯಾಸ್ ಫೀಲ್ ಮಾಡಿ ಮೊದಲು ಪ್ರಜ್ಞೆ ಕಳೆದುಕೊಳ್ಳುತ್ತಾರೆ. ಆ ನಂತರ ಉಸಿರಾಡಲು ಸಾಧ್ಯವಾಗದೇ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ.
ಕಾರ್ಬನ್ ಮಾನಾಕ್ಸೈಡ್ ಏಕೆ ಅಪಾಯಕಾರಿ?
ಗ್ಯಾಸ್ ಗೀಸರ್ನಿಂದ ಹೊರಬರುವ ಅನಿಲವು ವ್ಯಕ್ತಿಯನ್ನು ಪ್ರಜ್ಞಾಹೀನರನ್ನಾಗಿ ಮಾಡುತ್ತದೆ ಮತ್ತು ಕೋಮಾದಂತಹ ಸ್ಥಿತಿಗೆ ತಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಅನಿಲವು ದೇಹಕ್ಕೆ ಆಮ್ಲಜನಕವನ್ನು ಪೂರೈಸುವ ಕೆಂಪು ರಕ್ತ ಕಣಗಳ ಮೇಲೆ ದಾಳಿ ಮಾಡುತ್ತದೆ. ನಾವು ಉಸಿರಾಡುವಾಗ, ಹಿಮೋಗ್ಲೋಬಿನ್ ಆಮ್ಲಜನಕದೊಂದಿಗೆ ಬೆರೆಯುತ್ತದೆ. ಇದರ ಸಹಾಯದಿಂದ, ಆಮ್ಲಜನಕವು ಶ್ವಾಸಕೋಶದ ಮೂಲಕ ದೇಹದ ಉಳಿದ ಭಾಗಗಳಿಗೆ ಹಾದುಹೋಗುತ್ತದೆ. ಆಮ್ಲಜನಕ ಪೂರೈಕೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದಾಗ, ಹೃದಯ ಬಡಿತದಲ್ಲಿ ಹೆಚ್ಚಳ, ಕಡಿಮೆ ದೇಹದ ಉಷ್ಣತೆ, ವಾಂತಿ, ಕಡಿಮೆ ರಕ್ತದೊತ್ತಡ, ವಾಕರಿಕೆ, ಹೆದರಿಕೆ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಉಂಟಾಗುತ್ತದೆ.
ಮುನ್ನೆಚ್ಚರಿಕೆ ಕ್ರಮಗಳು
ಒಂದು ವೇಳೆ ನೀವು ನಿಮ್ಮ ಮನೆಯಲ್ಲಿ ಗ್ಯಾಸ್ ಗೀಸರ್ ಬಳಸುತ್ತಿದ್ದರೆ ಈ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ. ಗ್ಯಾಸ್ ಗೀಸರ್ ಅಳವಡಿಸಿದ್ದರೆ, ಗೀಸರ್ ಮತ್ತು ಗ್ಯಾಸ್ ಸಿಲಿಂಡರ್ ಅನ್ನು ಸ್ನಾನದ ಮನೆಯ ಹೊರಗೆ ಇರಿಸಿ. ಸ್ನಾನದ ಮನೆಯ ಬಾಗಿಲು ಹಾಕುವ ಮುನ್ನ ಬಕೆಟ್ ಅನ್ನು ಬಿಸಿ ನೀರಿನಿಂದ ತುಂಬಿಕೊಳ್ಳಿ. ಸ್ಮಾನಗೃಹದಲ್ಲಿ ಗಾಳಿ ಚೆನ್ನಾಗಿ ಬರುವಂತೆ ವ್ಯವಸ್ಥೆ ಮಾಡಿಕೊಳ್ಳಿ. ಸ್ನಾನ ಮಾಡಿದ ನಂತರ ಸ್ವಲ್ಪ ಸಮಯದವರೆಗೆ ಸ್ನಾನಗೃಹದ ಬಾಗಿಲನ್ನು ತೆರೆದಿಡುವುದನ್ನ ರೂಢಿಸಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ