ರಾಂಚಿ: ಜಾರ್ಖಂಡ್‌ನ (Jharkhand) ಗಿರಿದಿಹ್ ಜಿಲ್ಲೆಯಲ್ಲಿ ಜಾಮೀನು ರಹಿತ ವಾರೆಂಟ್ (Non Bailable Warrant) ಹೊರಡಿಸಲಾಗಿದ್ದ ಆರೋಪಿಯನ್ನು ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ 4 ದಿನದ ಮಗುವನ್ನು ಪೊಲೀಸ್ (Police) ಸಿಬ್ಬಂದಿಯೊಬ್ಬರು ಶೂ ಕಾಲಿನಿಂದ ತುಳಿದು ಕೊಂದಿದ್ದಾರೆಂಬ ಆರೋಪ ಕೇಳಿಬಂದಿದೆ. ಗಿರಿದಿಹ್ ಜಿಲ್ಲೆಯ ಕೊಶೋಡಿಂಘಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಗುವಿನ ಪೋಷಕರು (Parents) ಪೊಲೀಸರೇ ತಮ್ಮ ಮಗುವನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ (Hemant Soren) ಸೋರೆನ್ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ಮಗುವಿನ ಅಜ್ಜನನ್ನು ಬಂಧಿಸುವುದಕ್ಕೆ ಬಂದಿದ್ದ ಪೊಲೀಸ್
ಅಪರಾಧ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಮಗುವಿನ ಅಜ್ಜ ಭೂಷಣ್ ಪಾಂಡೆ ಎಂಬುವವರನ್ನು ಬಂಧಿಸುವ ಸಲುವಾಗಿ ಪೊಲೀಸರು ಆತನ ಮನೆಗೆ ತೆರಳಿದ್ದರು. ಆತನ ಮೇಲೆ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಪೊಲೀಸರನ್ನು ನೋಡಿದ ಮನೆಯವರು ಮಲಗಿದ್ದ ಮಗುವನ್ನು ಬಿಟ್ಟು ಓಡಿ ಹೋಗಿದ್ದಾರೆ. ಆದರೆ ಪೊಲೀಸರೆಲ್ಲಾ ಹೊರ ಹೋದ ಮೇಲೆ ಮನೆಯವರು ಬಂದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದೆ.
ಪೊಲೀಸ್ ಕಾಲ್ತುಳಿತಕ್ಕೆ ಮಗು ಸಾವು?
ಆರೋಪಿಯನ್ನು ಹುಡುಕುವ ಬರದಲ್ಲಿ ಪೊಲೀಸರು ಮನೆಯ ಎಲ್ಲಾಕಡೆ ಹುಡುಕಿದ್ದಾರೆ. ಈ ವೇಳೆ ಮಗು ಮಲಗಿದ್ದ ಕೋಣೆಗೂ ಪೊಲೀಸರು ನುಗ್ಗಿದ್ದಾರೆ. ಹುಡುಕಾಟದ ಸಂದರ್ಭದಲ್ಲಿ ತಿಳಿದೋ ಅಥವಾ ತಿಳಿಯದೋ ಮಗುವನ್ನು ತುಳಿದಿದ್ದಾರೆ. ಮಗುವಿನ ತಾಯಿ ಹಾಗೂ ಇತರ ಸದಸ್ಯರು ಮನೆಗೆ ಹಿಂತಿರುಗಿದಾಗ ಮಗು ಉಸಿರಾಟ ನಿಂತಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪೊಲೀಸರ ವಿರುದ್ಧ ಆರೋಪ
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ನೋಡಿದ ಮನೆಯವರು ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಮಗು ಪರೀಕ್ಷಿಸಿದ ವೈದ್ಯರು ಮಗು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಪೊಲೀಸರ ತಂಡ ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿರುವಾಗ ಅವರ ಬೂಟು ಕಾಲಿನಿಂದ ತುಳಿದ ಕಾರಣ ಮಗು ಸಾವನ್ನಪ್ಪಿದೆ ಎಂದು ಮಗುವಿನ ತಾಯಿ ನೇಹಾ ದೇವಿ ಆರೋಪಿಸಿದ್ದಾರೆ.
ಪೊಲೀಸರು ಮನೆಯಿಂದ ಹೊರಬಂದಾಗ, ನಾವು ನಮ್ಮ ಮಗು ಮಲಗಿದ್ದ ಕೋಣೆಗೆ ಹೋದೆವು. ನಾನು ಮಗುವನ್ನು ನೋಡಿದಾಗ, ಅವನ ದೇಹದಲ್ಲಿ ಯಾವುದೇ ಚಲನೆ ಇರಲಿಲ್ಲ ಎಂದು ಮಗುವಿನ ತಂದೆ ರಮೇಶ್ ಪಾಂಡೆ ತಿಳಿಸಿದ್ದು, ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ತನಿಖೆಗೆ ಆದೇಶ
ಮಗುವನ್ನು ಪೊಲೀಸರೇ ಕೊಂದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿ, ದೂರು ದಾಖಲಿಸಿದ್ದಾರೆ. ಈ ಘಟನೆ ರಾಜ್ಯಾದ್ಯಂತ ಸುದ್ದಿಯಾಗಿದ್ದು, ಎಚ್ಚೆತ್ತುಕೊಂಡ ಉಪ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ರಾಣಾ ತನಿಖೆಗೆ ಆದೇಶಿಸಿದ್ದಾರೆ. ತನಿಖೆಗಾಗಿ ತಂಡವನ್ನು ರಚಿಸಲಾಗಿದೆ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯ ಆರೋಗ್ಯ ಸಚಿವ ಬನ್ನಾ ಗುಪ್ತಾ ಘಟನೆಯನ್ನು ಖಂಡಿಸಿದ್ದು, " ಇಂತಹ ಘಟನೆಯನ್ನು ಸಹಿಸುವುದಿಲ್ಲ, ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ದೇಶವು ಸಂವಿಧಾನದ ಪ್ರಕಾರ ನಡೆಯುತ್ತದೆ, ಆದ್ದರಿಂದ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಹೇಳಿದರು.
ಬಿಜೆಪಿ ನಾಯಕ ಕಿಡಿ
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. " ಈ ಘಟನೆ ಆಘಾತಕಾರಿಯಾಗಿದೆ. ಜಾರ್ಖಂಡ್ ಪೊಲೀಸರು ಮಾತ್ರವಲ್ಲ, ಇದು ನಿರಂಕುಶ ಮತ್ತು ರಾಕ್ಷಸ ಸರ್ಕಾರದ ಕಾರ್ಯಶೈಲಿಗೆ ಹಿಡಿದ ಕೈಗನ್ನಡಿ " ಎಂದು ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ