HOME » NEWS » National-international » NEW PARLIAMENT BUILDING PRIME MINISTER NARENDRA MODI LAYS FOUNDATION OF NEW PARLIAMENT BUILDING IN DELHI SCT

New Parliament Building: ನೂತನ ಸಂಸತ್ ಭವನದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ

New Parliament Building: ನೂತನ ಸಂಸತ್ ಭವನದ ಕಟ್ಟಡ ನಿರ್ಮಾಣಕ್ಕೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡಿ, ಶಿಲಾನ್ಯಾಸ ನೆರವೇರಿಸಿದ್ದಾರೆ.

Sushma Chakre | news18-kannada
Updated:December 10, 2020, 2:08 PM IST
New Parliament Building: ನೂತನ ಸಂಸತ್ ಭವನದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
ಭೂಮಿ ಪೂಜೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
  • Share this:
ನವದೆಹಲಿ (ಡಿ. 10): ದೆಹಲಿಯಲ್ಲಿ 971 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನದ ಕಟ್ಟಡಕ್ಕೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡಿ, ಶಿಲಾನ್ಯಾಸ ನೆರವೇರಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ನಾನಾ ರಾಜಕೀಯ ಪಕ್ಷಗಳ ನಾಯಕರು, ಸಚಿವರು, ವಿವಿಧ ದೇಶಗಳ ರಾಯಭಾರಿಗಳು, ರತನ್ ಟಾಟಾ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು. ಇಂದು ಮಧ್ಯಾಹ್ನ 12.55ಕ್ಕೆ ಸಂಸತ್ ಭವನದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ ಪ್ರಧಾನಿ ಮೋದಿ ಬಳಿಕ ಶಿಲಾನ್ಯಾಸ ನೆರವೇರಿಸಿದರು. ಕರ್ನಾಟಕದ ಶೃಂಗೇರಿ ಮಠದ ಪುರೋಹಿತರ ನೇತೃತ್ವದಲ್ಲಿ ಸಂಸತ್ ಭವನದ ಭೂಮಿ ಪೂಜೆ ನೆರವೇರಿಸಲಾಯಿತು. 

ಶಿಲಾನ್ಯಾಸದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಯ ಒಂದು ಭಾಗವಾಗಿದೆ ಎಂದರು. ಈ ಸಮಾರಂಭದಲ್ಲಿ ನಾನಾ ಧರ್ಮಗಳ ಧರ್ಮಗುರುಗಳು ಕೂಡ ಭಾಗಿಯಾಗಿ, ಸರ್ವ ಧರ್ಮ ಪ್ರಾರ್ಥನೆಯನ್ನು ನೆರವೇರಿಸಿದ್ದು ವಿಶೇಷವಾಗಿತ್ತು.
ಈ ಸಮಾರಂಭಕ್ಕೆ ಕೆಲವೇ ಗಣ್ಯರನ್ನು ಮಾತ್ರ ಆಹ್ವಾನಿಸಲಾಗಿತ್ತು. ಒಟ್ಟು 64,500 ಚ.ಮೀ. ವಿಸ್ತೀರ್ಣದಲ್ಲಿ ನೂತನ ಸಂಸತ್ ಭವನದ ಕಟ್ಟಡ ನಿರ್ಮಾಣವಾಗಲಿದೆ. ಈ ಕಟ್ಟಡ ಭೂಕಂಪವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಈ ನೂತನ ಸಂಸತ್ ಭವನದಲ್ಲಿ ಏಕಕಾಲಕ್ಕೆ 1,224 ಸಂಸದರು ಕುಳಿತುಕೊಳ್ಳಬಹುದಾಗಿದೆ. ಮುಂದೆ ಸಂಸದರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಭವಿಷ್ಯದ 100 ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಸಂಸತ್ ಭವನವನ್ನು ನಿರ್ಮಿಸಲಾಗುತ್ತಿದೆ.


ನೂತನ ಸಂಸತ್ ಭವನದ ಕಟ್ಟಡವನ್ನು ನಿರ್ಮಿಸುವ ಸೆಂಟ್ರಲ್‍ ವಿಸ್ಟಾ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಕೆಲವು ದಿನಗಳ ಹಿಂದಷ್ಟೇ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ನ್ಯಾಯಮೂರ್ತಿ ಎ.ಎಂ. ಕಾನ್ವಿಲ್‍ಕರ್ ನೇತೃತ್ವದ ಪೀಠದ ಮುಂದೆ ಹಾಜರಾದ ಸಾಲಿಸಿಟರ್ ಜನರಲ್ ಸುಶಾಂತ್ ಮೆಹ್ತಾ ಅವರು ನ್ಯಾಯಾಲಯದ ವಿಚಾರಣೆ ಪೂರ್ಣಗೊಳ್ಳುವವರೆಗೂ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಭವನ ಶಂಕುಸ್ಥಾಪನೆಗೆ ಸಮ್ಮತಿ ಸೂಚಿಸಿತ್ತು.

971 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೂತನ ಸಂಸತ್ ಭವನವನ್ನು ನಿರ್ಮಿಸಲಾಗುವುದು. ಕಳೆದ ಸೆಪ್ಟೆಂಬರ್​ನಲ್ಲಿ ಟಾಟಾ ಪ್ರಾಜೆಕ್ಟ್​ ಲಿಮಿಟೆಡ್ ಹರಾಜು ಪ್ರಕ್ರಿಯೆಯಲ್ಲಿ ಈ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಪ್ರಸ್ತುತ ಈಗಿರುವ ಸಂಸತ್ ಭವನಕ್ಕೆ 1921ರಲ್ಲಿ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಆ ವೇಳೆ 83 ಲಕ್ಷ ರೂ. ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು. 1927ರ ಜನವರಿ 18ರಂದು ಈಗಿರುವ ಸಂಸತ್ ಭವನದ ಕಟ್ಟಡವನ್ನು ಉದ್ಘಾಟಿಸಲಾಗಿತ್ತು.
Published by: Sushma Chakre
First published: December 10, 2020, 2:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories