HOME » NEWS » National-international » NEW PARLIAMENT BUILDING PM NARENDRA MODI TO LAY FOUNDATION OF NEW PARLIAMENT COMPLEX TODAY IN DELHI SCT

New Parliament Building: 971 ಕೋಟಿ ರೂ. ವೆಚ್ಚದ ನೂತನ ಸಂಸತ್ ಭವನಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ

New Parliament Building: ನೂತನ ಸಂಸತ್ ಭವನದ ಭೂಮಿ ಪೂಜೆ ಮತ್ತು ಶಂಕು ಸ್ಥಾಪನೆಗೆ ಕೇವಲ 200 ಗಣ್ಯರನ್ನು ಆಹ್ವಾನಿಸಲಾಗಿದೆ. 64,500 ಚ.ಮೀ. ವಿಸ್ತೀರ್ಣದಲ್ಲಿ, 971 ಕೋಟಿ ರೂ. ವೆಚ್ಚದಲ್ಲಿ ಸಂಸತ್ ಭವನದ ಕಟ್ಟಡ ನಿರ್ಮಾಣವಾಗಲಿದೆ.

Sushma Chakre | news18-kannada
Updated:December 10, 2020, 10:15 AM IST
New Parliament Building: 971 ಕೋಟಿ ರೂ. ವೆಚ್ಚದ ನೂತನ ಸಂಸತ್ ಭವನಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ
ನೂತನ ಸಂಸತ್ ಭವನದ ವಿನ್ಯಾಸ
  • Share this:
ನವದೆಹಲಿ (ಡಿ. 10): ದೆಹಲಿಯ ರಾಜಪಥದಲ್ಲಿ 971 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನದ ಕಟ್ಟಡಕ್ಕೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಸಮಾರಂಭದಲ್ಲಿ ಅನೇಕ ರಾಜಕೀಯ ಪಕ್ಷಗಳ ನಾಯಕರು, ಸಚಿವರು, ವಿವಿಧ ದೇಶಗಳು ರಾಯಭಾರಿಗಳು ಭಾಗವಹಿಸಲಿದ್ದಾರೆ. ಇಂದು ಮಧ್ಯಾಹ್ನ 12.55ಕ್ಕೆ ಭೂಮಿ ಪೂಜೆ, ಬಳಿಕ ಸಂಸತ್ ಭವನದ ಶಿಲಾನ್ಯಾಸ ನೆರವೇರಲಿದೆ.

ಇಂದು ಮಧ್ಯಾಹ್ನ ನಡೆಯುವ ನೂತನ ಸಂಸತ್ ಭವನದ ಭೂಮಿ ಪೂಜೆ ಮತ್ತು ಶಂಕು ಸ್ಥಾಪನೆಗೆ ಕೇವಲ 200 ಗಣ್ಯರನ್ನು ಆಹ್ವಾನಿಸಲಾಗಿದೆ. 64,500 ಚ.ಮೀ. ವಿಸ್ತೀರ್ಣದಲ್ಲಿ ನೂತನ ಸಂಸತ್ ಭವನದ ಕಟ್ಟಡ ನಿರ್ಮಾಣವಾಗಲಿದೆ. ಈ ಕಟ್ಟಡ ಭೂಕಂಪವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಈ ನೂತನ ಸಂಸತ್ ಭವನದಲ್ಲಿ ಏಕಕಾಲಕ್ಕೆ 1,224 ಸಂಸದರು ಕುಳಿತುಕೊಳ್ಳಲು ಅವಕಾಶವಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

ಮುಂದೆ ಸಂಸದರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಭವಿಷ್ಯದ 100 ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಸಂಸತ್ ಭವನವನ್ನು ನಿರ್ಮಿಸಲಾಗುತ್ತಿದೆ. ಹೊಸ ಸಂಸತ್ ಭವನದ ಆಸನಗಳು 60 ಸೆಂ.ಮೀ. ಅಗಲ ಮತ್ತು 40 ಸೆಂ.ಮೀ. ಎತ್ತರ ಇರಲಿದೆ. ಈ ಕಟ್ಟಡ ನಾಲ್ಕು ಮಹಡಿಗಳನ್ನು ಹೊಂದಿರಲಿದ್ದು, ಆರು ಪ್ರವೇಶದ್ವಾರಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಇದರಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳು ಬರಲು ಒಂದು ದ್ವಾರ, ಲೋಕಸಭೆಯ ಸ್ಪೀಕರ್, ರಾಜ್ಯಸಭಾಧ್ಯಕ್ಷರು ಮತ್ತು ಸಂಸದರು ಬರಲು ಒಂದು ದ್ವಾರ, ಸಂಸದರಿಗಾಗಿ ಮತ್ತೊಂದು ದ್ವಾರ, ಸಾಮಾನ್ಯ ದ್ವಾರ ಮತ್ತು ಸಾರ್ವಜನಿಕರಿಗಾಗಿ ಎರಡು ಪ್ರವೇಶ ದ್ವಾರಗಳು ಇರಲಿವೆ.  ಜಂಟಿ ಅಧಿವೇಶನ ನಡೆಯುವ ಸಮಯದಲ್ಲಿ ಹೊಸ ಲೋಕಸಭೆಯಲ್ಲಿ 1,224 ಸದಸ್ಯರಿಗೆ ಕೂರಲು ಅವಕಾಶ ಕಲ್ಪಿಸಬಹುದಾಗಿದೆ.


ನೂತನ ಸಂಸತ್ ಭವನದ ಕಟ್ಟಡವನ್ನು ನಿರ್ಮಿಸುವ ಸೆಂಟ್ರಲ್‍ ವಿಸ್ಟಾ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಕೆಲವು ದಿನಗಳ ಹಿಂದಷ್ಟೇ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ನ್ಯಾಯಮೂರ್ತಿ ಎ.ಎಂ. ಕಾನ್ವಿಲ್‍ಕರ್ ನೇತೃತ್ವದ ಪೀಠದ ಮುಂದೆ ಹಾಜರಾದ ಸಾಲಿಸಿಟರ್ ಜನರಲ್ ಸುಶಾಂತ್ ಮೆಹ್ತಾ ಅವರು ನ್ಯಾಯಾಲಯದ ಅರ್ಜಿ ವಿಚಾರಣೆ ಪೂರ್ಣಗೊಳ್ಳುವವರೆಗೂ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸುವುದಿಲ್ಲ, ಈಗಿರುವ ಕಟ್ಟಡವನ್ನು ತೆರವುಗೊಳಿಸುವುದಿಲ್ಲ ಎಂದು ಲಿಖಿತ ಭರವಸೆ ನೀಡಿದ ಬಳಿಕ ನ್ಯಾಯಾಲಯ ಸಂಸತ್ ಭವನದ ಶಂಕುಸ್ಥಾಪನೆಗೆ ಅನುಮತಿ ನೀಡಿತ್ತು.

971 ಕೋಟಿ ರೂ. ವೆಚ್ಚದಲ್ಲಿ ನೂತನ ಸಂಸತ್ ಭವನವನ್ನು ನಿರ್ಮಿಸಲಾಗುವುದು. ಕಳೆದ ಸೆಪ್ಟೆಂಬರ್​ನಲ್ಲಿ ಟಾಟಾ ಪ್ರಾಜೆಕ್ಟ್​ ಲಿಮಿಟೆಡ್ ಹರಾಜು ಪ್ರಕ್ರಿಯೆಯಲ್ಲಿ ಈ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಪ್ರಸ್ತುತ ಈಗಿರುವ ಸಂಸತ್ ಭವನಕ್ಕೆ 1921ರಲ್ಲಿ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಆ ವೇಳೆ 83 ಲಕ್ಷ ರೂ. ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು. 1927ರ ಜನವರಿ 18ರಂದು ಈಗಿರುವ ಸಂಸತ್ ಭವನದ ಕಟ್ಟಡವನ್ನು ಉದ್ಘಾಟಿಸಲಾಗಿತ್ತು.
Published by: Sushma Chakre
First published: December 10, 2020, 9:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories