ಡ್ರೈವಿಂಗ್ ಲೈಸೆನ್ಸ್​, ಆರ್​ಸಿ, ಇನ್ಶುರೆನ್ಸ್​ ಮರೆತರೂ ನೋ ಟೆನ್ಷನ್!; ನಾಳೆಯಿಂದ ಹೊಸ ನಿಯಮ ಜಾರಿ

New Motor Vehicle Rules: ಅ. 1ರಿಂದ ಹೊಸದಾಗಿ ಬರುವ ಡಿಎಲ್‌ ಮತ್ತು ಆರ್‌ಸಿಗಳು ಸ್ಮಾರ್ಟ್‌ ತಂತ್ರಜ್ಞಾನವನ್ನು ಹೊಂದಿರಲಿವೆ. ಇನ್ನುಮುಂದೆ ನೀವು ನಿಮ್ಮ ವಾಹನದಲ್ಲಿ ಆರ್​ಸಿ ಬುಕ್, ಇನ್ಶುರೆನ್ಸ್​, ಲೈಸೆನ್ಸ್​ ಇಟ್ಟುಕೊಂಡು ಓಡಾಡಬೇಕಾಗಿಲ್ಲ.

Sushma Chakre | news18-kannada
Updated:September 30, 2020, 4:32 PM IST
ಡ್ರೈವಿಂಗ್ ಲೈಸೆನ್ಸ್​, ಆರ್​ಸಿ, ಇನ್ಶುರೆನ್ಸ್​ ಮರೆತರೂ ನೋ ಟೆನ್ಷನ್!; ನಾಳೆಯಿಂದ ಹೊಸ ನಿಯಮ ಜಾರಿ
ಸಾಂದರ್ಭಿಕ ಚಿತ್ರ
  • Share this:
ಕೇಂದ್ರ ಸರ್ಕಾರ ಟ್ರಾಫಿಕ್ ನಿಯಮಗಳನ್ನು ಬಿಗಿಗೊಳಿಸಿ, ಹೆಲ್ಮೆಟ್, ಸೀಟ್​ಬೆಲ್ಟ್​ ಕಡ್ಡಾಯಗೊಳಿಸಿದ ಬಳಿಕ ವಾಹನ ಸವಾರರು ರಸ್ತೆಗೆ ಇಳಿಯಲು ಯೋಚಿಸುವಂತಾಗಿತ್ತು. ವೇಗದ ಚಾಲನೆ, ಹೆಲ್ಮೆಟ್ ಧರಿಸದಿರುವುದು, ಕಾರಿನಲ್ಲಿ ಸೀಟ್ ಬೆಲ್ಟ್​ ಹಾಕಿಕೊಳ್ಳದೆ ಇರುವುದು ಹೀಗೆ ಪ್ರತಿಯೊಂದು ನಿಯಮ ಉಲ್ಲಂಘನೆಗೂ ದುಬಾರಿ ಶುಲ್ಕ ವಿಧಿಸಲಾಗುತ್ತಿತ್ತು. ಇದೀಗ ಕೇಂದ್ರ ಸರ್ಕಾರ ನೂತನ ಮೋಟಾರು ವಾಹನ ನಿಯಮಾವಳಿ- 1989ಕ್ಕೆ ತಿದ್ದುಪಡಿ ತಂದಿದ್ದು, ವಾಹನ ಸವಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದಾಖಲೆಗಳ ಡಿಜಿಟಲೀಕರಣಕ್ಕೆ ಆದ್ಯತೆ ನೀಡಿದೆ. ಇದರಿಂದಾಗಿ ಇನ್ನುಮುಂದೆ ನೀವು ನಿಮ್ಮ ವಾಹನದಲ್ಲಿ ಆರ್​ಸಿ ಬುಕ್, ಇನ್ಶುರೆನ್ಸ್​, ಲೈಸೆನ್ಸ್​ ಇಟ್ಟುಕೊಂಡು ಓಡಾಡಬೇಕಾಗಿಲ್ಲ. ನೀವು ಆ ಎಲ್ಲ ದಾಖಲೆಗಳನ್ನು ಮನೆಯಲ್ಲೇ ಮರೆತು ಬಂದರೂ ಟ್ರಾಫಿಕ್ ಪೊಲೀಸರು ಶುಲ್ಕ ವಿಧಿಸುವಂತಿಲ್ಲ. ಏಕೆಂದರೆ, ಈ ಎಲ್ಲ ದಾಖಲೆಗಳನ್ನು ನಿಮ್ಮ ಮೊಬೈಲ್​ನಲ್ಲಿಟ್ಟುಕೊಂಡಿದ್ದರೆ ಸಾಕು!

ನಾಳೆಯಿಂದಲೇ ಈ ಹೊಸ ನಿಮಾವಳಿಗಳು ಕಾರ್ಯರೂಪಕ್ಕೆ ಬರಲಿವೆ. ಅಕ್ಟೋಬರ್‌ 1ರಿಂದ ದೇಶಾದ್ಯಂತ ಈ ಹೊಸ ಟ್ರಾಫಿಕ್‌ ನಿಯಮಗಳು ಜಾರಿಗೊಳ್ಳಲಿವೆ. ನಾಳೆಯಿಂದ ದೇಶಾದ್ಯಂತ ಏಕರೂಪದ ಆರ್​ಸಿ, ಡ್ರೈವಿಂಗ್ ಲೈಸೆನ್ಸ್​ ನೀಡುವ ವಿಧಾನ ಜಾರಿಗೆ ಬರಲಿದೆ. ಇನ್ನುಮುಂದೆ ಆರ್​ಸಿ ಬುಕ್​ಗಳನ್ನು ಕೂಡ ಎಲೆಕ್ಟ್ರಾನಿಕ್ ಕಾರ್ಡ್​ ರೂಪದಲ್ಲಿ ನೀಡಲಾಗುವುದು. ಡ್ರೈವಿಂಗ್ ಲೈಸೆನ್ಸ್​ ಕಾರ್ಡ್​ ಕೂಡ ಡಿಜಿಟಲೀಕರಣಗೊಳ್ಳಲಿದ್ದು, ಇದರಲ್ಲಿ ಮೈಕ್ರೋ ಚಿಪ್ ಇರಲಿದೆ. ವಾಹನ ಸವಾರರು ಚಾಲನಾ ಪರವಾನಿಗೆ ಹಾಗೂ ಆರ್‌ಸಿಗಳನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಸಾಮೂಹಿಕ ಅತ್ಯಾಚಾರ ಕೇಸ್; ಎಸ್​ಐಟಿ ತನಿಖೆಗೆ ಆದೇಶಿಸಿದ ಯೋಗಿ ಸರ್ಕಾರ

ಹೀಗಾಗಿ, ಇನ್ನುಮುಂದೆ ಈ ದಾಖಲೆಗಳನ್ನು ವಾಹನದಲ್ಲಿ ಇಟ್ಟುಕೊಂಡು ಓಡಾಡಬೇಕಾಗಿಲ್ಲ. ಡಿಜಿಟಲೀಕರಣಗೊಂಡ ದಾಖಲೆಗಳನ್ನು ನಿಮ್ಮ ಮೊಬೈಲ್​ನಲ್ಲಿ ಸೇವ್ ಮಾಡಿಟ್ಟುಕೊಂಡರೆ ಸಾಕಾಗುತ್ತದೆ. ವಾಹನಗಳಿಗೆ ಸಂಬಂಧಪಟ್ಟ ದಾಖಲೆ ಪ್ರತಿಗಳನ್ನು ಕೇಂದ್ರ ಸರಕಾರದ ಆನ್‌ಲೈನ್‌ ಪೋರ್ಟಲ್‌ ಆದ ಎಂ-ಪರಿವಾಹನ್‌ ಅಥವಾ ಡಿಜಿಲಾಕರ್‌ ಆ್ಯಪ್‌ ಗಳಿಗೆ ಅಪ್‌ಲೋಡ್‌ ಮಾಡಬಹುದು. ಅಗತ್ಯ ಸಂದರ್ಭದಲ್ಲಿ ಇವುಗಳನ್ನು ದಾಖಲೆಯಾಗಿ ಬಳಸಿಕೊಳ್ಳಬಹುದು.

ಅ. 1ರಿಂದ ಹೊಸದಾಗಿ ಬರುವ ಡಿಎಲ್‌ ಮತ್ತು ಆರ್‌ಸಿಗಳು ಸ್ಮಾರ್ಟ್‌ ತಂತ್ರಜ್ಞಾನವನ್ನು ಹೊಂದಿರಲಿವೆ. ಹೊಸ ಕಾರ್ಡ್‌ನಲ್ಲಿ ಅತ್ಯಾಧುನಿಕ ಮೈಕ್ರೋ ಚಿಪ್‌ ಇರಲಿದ್ದು, ಕ್ಯೂಆರ್‌ ಕೋಡ್‌  ಇರಲಿದೆ. ಈ ಕಾರ್ಡ್‌ ಗಳು ಎಟಿಎಂ ಕಾರ್ಡ್‌ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ, ಡ್ರೈವಿಂಗ್ ಲೈಸೆನ್ಸ್​ನ ಕಾರ್ಡ್​ನಲ್ಲಿರುವ ಚಿಪ್​ನಿಂದಾಗಿ ವಾಹನ ಸವಾರರ ಎಲ್ಲ ಮಾಹಿತಿಗಳನ್ನೂ ಸುಲಭವಾಗಿ ಕಂಡುಹಿಡಿಯಬಹುದು. ಈ ಎಲೆಕ್ಟ್ರಾನಿಕ್ ಕಾರ್ಡ್​ ಮೂಲಕ ವಾಹನ ಸವಾರರ 10 ವರ್ಷದೊಳಗಿನ ವಾಹನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಪಡೆಯಬಹುದು.
Published by: Sushma Chakre
First published: September 30, 2020, 3:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading