Booster Dose: ಬೂಸ್ಟರ್ ಡೋಸ್ ಹಾಕಿಸಿಕೊಂಡರೂ ವಕ್ಕರಿಸುತ್ತೆ ಒಮೈಕ್ರಾನ್

ಒಮೈಕ್ರಾನ್ ಸೋಂಕು ಈಗಲೂ ಜನಸಮುದಾಯದ ನಡುವೆ ಹಬ್ಬುತ್ತಿದ್ದು, ಈಗಾಗಲೇ ಸಾರ್ಕ್ ಕೋವ್-2 ವೈರಸ್ ಸೋಂಕಿನ ವಿರುದ್ಧ ಎರಡು ಡೋಸ್ ಲಸಿಕೆ ಪಡೆದಿರುವವರು ಅಥವಾ ಮೂರನೆಯ ಬೂಸ್ಟರ್ ಡೋಸ್ ಪಡೆದಿರುವವರಲ್ಲೂ ಸೋಂಕು ಕಂಡು ಬರುತ್ತಿದೆ  ಎಂದು ಹೇಳಿದೆ.

ಒಮೈಕ್ರಾನ್

ಒಮೈಕ್ರಾನ್

  • Share this:
ಒಮೈಕ್ರಾನ್ (Omicron) ರೂಪಾಂತರಿ ಕೊರೊನಾ ವೈರಸ್ (Coronavirus) ಜನಸಮುದಾಯದ ನಡುವೆ ಅತ್ಯಂತ ವೇಗವಾಗಿ ಸೋಂಕು ಹರಡಿತಾದರೂ, ಎರಡನೆ ಅಲೆಯಲ್ಲಿ ಡೆಲ್ಟಾ (Delta) ರೂಪಾಂತರಿ ವೈರಸ್‌ನಂತೆ ದೊಡ್ಡ ಮಟ್ಟದಲ್ಲಿ ಮಾರಣಾಂತಿಕವಾಗಲಿಲ್ಲ. ಹೀಗಿದ್ದೂ ಒಮೈಕ್ರಾನ್ ಸೋಂಕನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ ಎಂದು ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ (WHO) ಎಚ್ಚರಿಸಿತ್ತು. ಇದೀಗ ಒಮೈಕ್ರಾನ್ ಸೋಂಕಿನ ಕುರಿತು ನೂತನ ಅಧ್ಯಯನ ವರದಿಯೊಂದು ಹೊರಬಿದ್ದಿದ್ದು, ಒಮೈಕ್ರಾನ್ ಸೋಂಕು ಈಗಲೂ ಜನಸಮುದಾಯದ ನಡುವೆ ಹಬ್ಬುತ್ತಿದ್ದು, ಈಗಾಗಲೇ ಸಾರ್ಕ್ ಕೋವ್-2 ವೈರಸ್ ಸೋಂಕಿನ ವಿರುದ್ಧ ಎರಡು ಡೋಸ್ ಲಸಿಕೆ ಪಡೆದಿರುವವರು ಅಥವಾ ಮೂರನೆಯ ಬೂಸ್ಟರ್ ಡೋಸ್ (Booster Dose) ಪಡೆದಿರುವವರಲ್ಲೂ ಸೋಂಕು ಕಂಡು ಬರುತ್ತಿದೆ  ಎಂದು ಹೇಳಿದೆ.

ಈ ಕುರಿತು ಅಧ್ಯಯನ (Study) ನಡೆಸಿರುವ ಲ್ಯಾನ್ಸೆಟ್, "ಮೂರನೆಯ ಡೋಸ್ ಲಸಿಕೆ ಪಡೆಯುವುದರಿಂದ ಒಮೈಕ್ರಾನ್ ಸೋಂಕಿನ ವಿರುದ್ಧದ ರಕ್ಷಣೆಯನ್ನು ಹೆಚ್ಚಿಸಬಹುದು ಎಂದು ಭಾವಿಸಲಾಗಿತ್ತಾದರೂ, ಲಸಿಕೆಯ (Vaccine) ಪರಿಣಾಮವನ್ನು ಕಂಡು ಹಿಡಿಯಲು ವಿಸ್ತೃತ ಅಧ್ಯಯನ ನಡೆಸಲಾಗುತ್ತಿದೆ" ಎಂದು ಹೇಳಿದೆ.

ಲಸಿಕೆ ಫಲಿತಾಂಶಗಳ ವರದಿಗೆ ವೈಟಿಂಗ್

"ಸೋಂಕು ಹಾಗೂ ತೀವ್ರತರ ಪರಿಣಾಮಗಳ ನಡುವಿನ ನೈಸರ್ಗಿಕ ವಿಳಂಬವನ್ನು ಬದಿಗಿರಿಸಿ, ನಾವು ಲಸಿಕೆಯ ಪ್ರಮುಖ ಫಲಿತಾಂಶವಾದ ಒಮೈಕ್ರಾನ್ ಸೋಂಕಿನ ವಿರುದ್ಧ ಗಂಭೀರ ಕಾಯಿಲೆಯನ್ನು ತಡೆಯುವ ಲಸಿಕೆಯ ಸಾಮರ್ಥ್ಯದ ಬಗೆಗಿನ ದತ್ತಾಂಶಗಳಿಗಾಗಿ ಇನ್ನೂ ಕಾಯುತ್ತಿದ್ದೇವೆ" ಎಂದು ಲ್ಯಾನ್ಸೆಟ್ ತಿಳಿಸಿದೆ.

ಬೂಸ್ಟರ್ ಡೋಸ್ ಪಡೆದರೆ ಅಸ್ವಸ್ಥತೆ ಕಮ್ಮಿ

"ಇದೇ ವೇಳೆ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆಯು ಆಸ್ಪತ್ರೆಗೆ ದಾಖಲಾತಿಯಲ್ಲಿ ಒಮಿಕ್ರಾನ್ ಸೋಂಕಿನ ದರ ಹಾಗೂ ಸಾವುಗಳ ಪ್ರಮಾಣ ಇಳಿಮುಖವಾಗಿರುವ ಬಗ್ಗೆ ಪ್ರಾಥಮಿಕ ದತ್ತಾಂಶವನ್ನು ಒದಗಿಸಿದೆ. ಈ ದತ್ತಾಂಶಗಳು ಸೋಂಕಿನ ನಂತರ ಉಂಟಾಗುವ ನೈಸರ್ಗಿಕ ಪ್ರತಿರೋಧಕ ಸ್ಪಂದನೆ ಹಾಗೂ ಪ್ರಾಥಮಿಕ ಮತ್ತು ಬೂಸ್ಟರ್ ಡೋಸ್ ಲಸಿಕೆ ಪಡೆದ ನಂತರ ಅಸ್ವಸ್ಥತೆಯನ್ನು ತಗ್ಗಿಸುತ್ತದೆ ಎಂದು ಸೂಚಿಸುತ್ತಿವೆ" ಎಂದು ವಿವರಿಸಿದೆ.

ಒಮೈಕ್ರಾನ್ ವಿರುದ್ಧ ಭೀತಿ

ಸಾರ್ಕ್ ಕೋವ್-2ನ ರೂಪಾಂತರಿ ವೈರಸ್ ಒಮೈಕ್ರಾನ್ (B.1.1.529) ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಕಳವಳ ವ್ಯಕ್ತಪಡಿಸಿತ್ತು. ಕಾರಣ, ಅದರ ಪ್ರಸರಣ ವೇಗ, ಮರು ಸೋಂಕಿನ ಅಪಾಯ ಅಥವಾ ಲಸಿಕೆ ಭೇದಿಸಿ ಸೋಂಕು ಉಂಟುಮಾಡುವ ಅದರ ಸಾಮರ್ಥ್ಯವಾಗಿತ್ತು ಎಂದು ಲ್ಯಾನ್ಸೆಟ್ ತನ್ನ ಅಧ್ಯಯನದಲ್ಲಿ ಹೇಳಿದೆ.

ಯಾವ ರೀತಿ ಹಾನಿ?

"ಇವುಗಳಲ್ಲಿನ ಹಲವು ರೂಪಾಂತರಗಳು ಪ್ರೋಟೀನ್ (Protein) ಮುಳ್ಳಿಗೆ ಅಂಟಿಕೊಂಡಿರುವ ಜೀವಕೋಶ ಪ್ರದೇಶವಾದ ಎನ್-ಟರ್ಮಿನಲ್ ಪ್ರದೇಶಕ್ಕೆ ಹಾನಿ ಮಾಡುತ್ತವೆ. ಇದಕ್ಕೆ ವಿರುದ್ಧವಾಗಿ ಪ್ರತಿಕಾಯಗಳನ್ನು ಪತ್ತೆ ಮಾಡುವಾಗ ಎಸಿಇ-2 ಕಿಣ್ವಗಳು ಹೆಚ್ಚು ಅಂಟಿಕೊಳ್ಳುತ್ತವೆ" ಎಂದೂ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Omicron Covid- ಹೊಸ ಅಪಾಯಕಾರಿ ವೈರಸ್; ಬೆಂಗಳೂರು ಮತ್ತು ಕರ್ನಾಟಕದಲ್ಲಿ ಕಟ್ಟೆಚ್ಚರ

ಇದೇ ಸಂದರ್ಭದಲ್ಲಿ, ಈ ವಾರ ಮತ್ತೆ ಕೋವಿಡ್-19 ಸೋಂಕು ಇಳಿಮುಖದತ್ತ ಸಾಗಿದ್ದು, ಪ್ರಪಂಚದ ಹಲವಾರು ಪ್ರದೇಶಗಳಲ್ಲಿ ಸೋಂಕು ಇಳಿಕೆಯಾಗುತ್ತಿದ್ದು, ಕೆಲವು ಸಾವುಗಳು ಮತ್ತು ಹೊಸ ಪ್ರಕರಣಗಳು ಮಾತ್ರ ವರದಿಯಾಗಿವೆ.

ಸೋಂಕಿನ ಪ್ರಮಾಣ ಕಡಿಮೆ

ಮೂರನೆ ಅಲೆಯ ಸೋಂಕು ಕಳೆದ ಮೂರೂವರೆ ತಿಂಗಳಲ್ಲಿ ಉತ್ತುಂಗಕ್ಕೆ ತಲುಪಿತ್ತು. ಆದರೆ, ಜಾಗತಿಕ ಸರಾಸರಿ ದೈನಂದಿನ ಪ್ರಕರಣಗಳು ಸತತ ಮೂರನೆಯ ವಾರವೂ ಇಳಿಮುಖವಾಗಿದ್ದು, ಶೇ. 22ರಷ್ಟು ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಒಟ್ಟು ಸೋಂಕಿತರ ಪ್ರಮಾಣ 1.97 ಮಿಲಿಯನ್‌ಗೆ ತಲುಪಿದೆ ಎಂದು ಎಎಫ್‌ಪಿ ಬಿಡುಗಡೆ ಮಾಡಿರುವ ದತ್ತಾಂಶದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Omicron: ಕೊರೋನಾದ ಹೊಸ ರೂಪಾಂತರ ಓಮಿಕ್ರಾನ್​ ಲಕ್ಷಣಗಳೇನು? ಏನೆಲ್ಲಾ ಎಚ್ಚರಿಕೆ ವಹಿಸಬೇಕು? ವೈದ್ಯರು ನೀಡಿದ್ದಾರೆ ಫುಲ್ ಡೀಟೆಲ್ಸ್

ನೈಜ ಪ್ರಕರಣಗಳ ಪೈಕಿ ದೃಢಪಟ್ಟ ಪ್ರಕರಣಗಳು ಭಾಗಶಃ ಸೋಂಕಿನ ಪ್ರಮಾಣಗಳನ್ನು ಮಾತ್ರ ಸೂಚಿಸುತ್ತಿವೆ. ಕಾರಣ, ಲೆಕ್ಕದ ಅಭ್ಯಾಸದಲ್ಲಿನ ಭಿನ್ನತೆ ಮತ್ತು ವಿವಿಧ ದೇಶಗಳಲ್ಲಿನ ಪರೀಕ್ಷಾ ಪ್ರಮಾಣಗಳು.

ಸ್ವಲ್ಪ ಪರಿಸ್ಥಿತಿ ಸುಧಾರಿಸಿದೆ

ಕಳೆದ ಏಳು ದಿನಗಳಲ್ಲಿ ವಿಶ್ವದ ಬಹುತೇಕ ಪ್ರಾಂತ್ಯಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ. ಅಮೆರಿಕಾ/ಕೆನಡಾ ವಲಯದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಶೇ. 43ರಷ್ಟು ಕಡಿಮೆ ಆಗಿದೆ. ಮಧ್ಯಪ್ರಾಚ್ಯದಲ್ಲಿ ಶೇ 23ರಷ್ಟು, ಯೂರೋಪ್‌ನಲ್ಲಿ ಶೇ. 23ರಷ್ಟು, ಆಫ್ರಿಕಾದ ಲ್ಯಾಟಿನ್ ಅಮೆರಿಕಾ‌/ಕೆರಿಬಿಯನ್ ಪ್ರದೇಶದಲ್ಲಿ ಶೇ. 22ರಷ್ಟು ಕುಸಿತವಾಗಿದೆ. ಏಷ್ಯಾದಲ್ಲಿನ ಪರಿಸ್ಥಿತಿ ಸ್ಥಿರವಾಗಿದ್ದು, ಶೇ. ಒಂದರಷ್ಟು ಪ್ರಕರಣಗಳು ಕುಸಿತ ಕಂಡಿವೆ. ಓಷಿಯಾನಿಯಾ ಭಾಗದಲ್ಲಿ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿದೆ.
Published by:Divya D
First published: