ಹಿಮಾಚಲ ಪ್ರದೇಶ: ಚುನಾವಣೆ ಗದ್ದಲದ ಬಳಿಕ, ಇದೀಗ ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯ ಬಿಸಿ ಏರಿದೆ. ರಾಜ್ಯ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥ ಸುಖವಿಂದರ್ ಸಿಂಗ್ ಸುಖು (Sukhwinder Singh Sukhu) ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. 68 ಅಸೆಂಬ್ಲಿ ಸ್ಥಾನಗಳಲ್ಲಿ 40 ಸ್ಥಾನಗಳನ್ನು ಗೆಲ್ಲುವ ಮೂಲಕ ಗ್ರ್ಯಾಂಡ್ ಓಲ್ಡ್ ಪಕ್ಷವಾದ (Grand Old Party) ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲಿದೆ. ಈ ನಡುವೆ ಮುಖ್ಯಮಂತ್ರಿ ಗಾದಿ ಏರಲು ಸುಖು ಮತ್ತು ರಾಜ್ಯ ಕಾಂಗ್ರೆಸ್ (Congress) ಮುಖ್ಯಸ್ಥೆ ಪ್ರತಿಭಾ ಸಿಂಗ್ ನಡುವೆ ಪೈಪೋಟಿ ನಡೆದಿತ್ತು. ಆದರೆ ಈಗ ಸುಖವಿಂದರ್ ಸಿಂಗ್ ಸುಖು ಅವರು ಮೇಲುಗೈ ಸಾಧಿಸಿದ್ದಾರೆ.
ನಿನ್ನೆ ಶಿಮ್ಲಾದಲ್ಲಿ ಸಭೆ ಸೇರಿದ ನೂತನ ಚುನಾಯಿತ ಕಾಂಗ್ರೆಸ್ ಶಾಸಕರು ಚರ್ಚೆ ನಡೆಸಿದ್ದರು. ಹಿಮಾಚಲ ಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಲಿರುವ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಅಧಿಕಾರ ನೀಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥ ಸುಖವಿಂದರ್ ಸಿಂಗ್ ಸುಖು
ಎರಡು ಗಂಟೆಗಳ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಹಿಮಾಚಲ ಪ್ರದೇಶದ ಎಐಸಿಸಿ ಉಸ್ತುವಾರಿ ರಾಜೀವ್ ಶುಕ್ಲಾ, ಒಂದು ಸಾಲಿನ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಪಕ್ಷವು ಪಕ್ಷದ ವಿಜೇತ ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದೆ ಮತ್ತು ಸರ್ಕಾರ ರಚಿಸಲು ಕಾದು ನಿಂತಿದೆ.
ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥ ಸುಖವಿಂದರ್ ಸಿಂಗ್ ಸುಖು ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆ ಪ್ರಕಾರ ಹಿಮಾಚಲ ಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಿ ಸುಖವಿಂದರ್ ಸಿಂಗ್ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಹೆಚ್ಚಿದೆ.
ಶಿಮ್ಲಾದಲ್ಲಿ ಜರುಗಿದ ಶಾಸಕರ ಸಭೆ
ಶಿಮ್ಲಾದಲ್ಲಿ ನೂತನವಾಗಿ ಆಯ್ಕೆಯಾದ ಪಕ್ಷದ ಶಾಸಕರ ಸಭೆಯಲ್ಲಿ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ನೂತನ ಮುಖ್ಯಮಂತ್ರಿ ಭಾನುವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Navy Day: ನೌಕಾ ದಿನಕ್ಕೆ ಪ್ರಸೂನ್ ಜೋಶಿ ಹೊಸ ಗೀತೆ, 'ಕಾಲ್ ಆಫ್ ದಿ ಬ್ಲೂ ವಾಟರ್ಸ್' ಹಾಡಲ್ಲಿ ಸೇನೆ ಗುಣಗಾನ
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ
ಇಂದು ಸಂಜೆ ವಿಧಾನಸಭೆ ಸಂಕೀರ್ಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಸುಖ್ವಿಂದರ್ ಸಿಂಗ್ ಸುಖು ಅವರನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ಸುಖ್ವಿಂದರ್ ಸಿಂಗ್ ಸುಖು ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗೆ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲ ಅವರು ನಾಳೆಯೇ ಪ್ರಮಾಣವಚನವನ್ನೂ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ಆಯ್ಕೆ ಮಾಡಿದ ನಾಯಕ
ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಮುಖೇಶ್ ಅಗ್ನಿಹೋತ್ರಿ ಮತ್ತು ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥ ಸುಖ್ವಿಂದರ್ ಸಿಂಗ್ ಸುಖು ಸೇರಿದಂತೆ ಹಲವು ನಾಯಕರು ಮುಖ್ಯಮಂತ್ರಿ ರೇಸ್ ನಲ್ಲಿದ್ದರು. ಇಂದು ನಡೆದ ಸಭೆಯಲ್ಲಿ ಅಂತಿಮವಾಗಿ ಸುಖ್ವಿಂದರ್ ಸಿಂಗ್ ಸುಖು ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ