Andhra Politics: ನಾಳೆ ಆಂಧ್ರದಲ್ಲಿ ಹೊಸ ಕ್ಯಾಬಿನೆಟ್ ರಚನೆ, ಚುನಾವಣೆ ದೃಷ್ಟಿಯಲ್ಲಿ SC, ST, BCಗಳಿಗೆ ಪ್ರಾಮುಖ್ಯತೆ

ಈ‌ ಮೂಲಕ ಜಗನ್ ಮೋಹನ್ ರೆಡ್ಡಿ ಉತ್ತಮ ಪರ್ಯಾಯಗಳನ್ನು ಕಂಡುಕೊಂಡಿದ್ದಾರೆ. ಹೆಚ್ಚು ಸಮಯ. ಪಕ್ಷ ಮತ್ತು ಸರ್ಕಾರವನ್ನು ಸಮತೋಲನದಲ್ಲಿಡಬೇಕು ಮತ್ತು 2024 ರಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು YSRP ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಜಗನ್ ಮೋಹನ ರೆಡ್ಡಿ

ಜಗನ್ ಮೋಹನ ರೆಡ್ಡಿ

  • Share this:
ನವದೆಹಲಿ, ಏ. 10: ಆಂಧ್ರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ (Andhra Pradesh Assembly Elections) ಬರಲು ಭರ್ತಿ ಎರಡು‌ ವರ್ಷ ಇದೆ. ಆದರೆ ಅಲ್ಲಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ( Jagan Mohan Reddy) ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಇತ್ತೀಚೆಗೆ ದಿಢೀರನೆ ತಮ್ಮ ಸಚಿವ ಸಂಪುಟದ ಸಹುದ್ಯೋಗಿಗಳೆಲ್ಲರಿಗೂ ರಾಜೀನಾಮೆ ನೀಡುವಂತೆ ಸೂಚಿಸಿದ್ದ ಅವರೀಗ ಮುಂದಿನ ಚುನಾವಣೆ ದೃಷ್ಟಿಯಲ್ಲಿ ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಒಳಗೊಂಡ ಹೊಸ ಕ್ಯಾಬಿನೆಟ್‌ (New Cabinet) ರೂಪಿಸಲು ಮುಂದಾಗಿದ್ದಾರೆ‌. ನಾಳೆ (ಎಪ್ರಿಲ್ 11) ನೂತನ ಸಚಿವರು ಪ್ರಮಾಣವಚನ (Oath Taking) ಸ್ವೀಕಾರ ಮಾಡಲಿದ್ದಾರೆ.

ಬದಲಾದ ಪ್ರಾತಿನಿಧ್ಯ

ಒಟ್ಟು 25 ಸಚಿವರು ನಾಳೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದು ಆ ಪೈಕಿ 17 ಮಂದಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಹಿಂದುಳಿದ ವರ್ಗಗಳು (BC) ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿಂದಿನ ಸಂಪುಟದಲ್ಲಿ ಈ‌ ಸಮುದಾಯಗಳ  ವತಿಯಿಂದ 14 ಜನರಿದ್ದರು. ಹಿಂದಿನ ಕ್ಯಾಬಿನೆಟ್‌ನಿಂದ 11 ಹಿರಿಯ ಸಚಿವರಿಗೆ ಮತ್ತೆ ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಸೋಮವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಈಗಾಗಲೇ ನೂತನ ಸಚಿವರ ಪಟ್ಟಿಯನ್ನು ಆಂಧ್ರಪ್ರದೇಶದ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರಿಗೆ ಹಸ್ತಾಂತರಿಸಲಾಗಿದೆ. ಹಿಂದಿನ ಸಂಪುಟದ ಎಲ್ಲಾ 24 ಸಚಿವರ ರಾಜೀನಾಮೆಯನ್ನು ಅವರು ಅಂಗೀಕರಿಸಿದ್ದು ನೂತನ‌ ಸಚಿವರಿಗೆ ನಾಳೆ ಪ್ರಮಾಣವಚನ ಬೋಧಿಸಲಿದ್ದಾರೆ.

ಸಂಭವನೀಯ‌ ಸಚಿವರು

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ‌ ರಾಜಭವನಕ್ಕೆ ಕಳುಹಿಸಿರುವ ಪಟ್ಟಿಯಲ್ಲಿ ಧರ್ಮಣ ಪ್ರಸಾದ ರಾವ್, ಸಿದಿರಿ ಅಪ್ಪಲರಾಜು, ಬೋತ್ಸ ಸತ್ಯನಾರಾಯಣ, ಪಿ.ರಾಜಣ್ಣ ದೊರ, ಗುಡಿವಾಡ ಅಮರನಾಥ್, ಬುಡ್ಡಿ ಮುತ್ಯಾಲ ನಾಯ್ಡು, ದಾಡಿಶೆಟ್ಟಿ ರಾಜಾ, ಪಿನಿಪೆ ವಿಶ್ವರೂಪಂ ಮತ್ತು ಚೆಲುಬೋಯಿನ ವೇಣುಗೋಪಾಲಕೃಷ್ಣ, ತಾನೇಟಿ ವನಿತಾ, ಕರುಮುರಿ ನಾಗೇಶ್ವರರಾವ್, ಕಿಟ್ಟು ಸತ್ಯನಾರಾಯಣ, ಜೋಗಿ ರಮೇಶ್, ಅಂಬಟಿ ರಾಂಬಾಬು, ಮೇರಗ ನಾಗಾರ್ಜುನ, ವಿಡದಾಳ ರಜಿನಿ, ಕಾಕಣಿ ಗೋವರ್ಧನರೆಡ್ಡಿ, ಅಮ್ಜದ್ ಬಾಷಾ, ಬುಗ್ಗನ ರಾಜೇಂದ್ರನಾಥ್, ಗುಮ್ಮನೂರು ಜಯರಾಂ, ಪೆದ್ದಿರೆಡ್ಡಿ ರಾಮಚಂದ್ರರೆಡ್ಡಿ, ನಾರಾಯಣಸ್ವಾಮಿ, ರೋಜಾ ಕೆ. ಸೆಲ್ವಮಣಿ, ಸುರೇಶ್, ಎ. ಇದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Explainer : ಆಂಧ್ರಪ್ರದೇಶದಲ್ಲಿ ಹೊಸದಾಗಿ ರಚನೆಗೊಂಡ 13 ಜಿಲ್ಲೆಗಳು ಯಾವುವು? ಹೊಸ ಜಿಲ್ಲೆಗಳ ರಚನೆಗೆ ಕಾರಣವೇನು?

ಮುಖ್ಯಮಂತ್ರಿಯಾಗಿ ಜಗನ್ ಮೋಹನ್ ರೆಡ್ಡಿ ಅವರು 2019ರ ಮೇ 30ರಂದು ಅಧಿಕಾರ ವಹಿಸಿಕೊಂಡ ಎರಡೂವರೆ ವರ್ಷಗಳ ನಂತರ ತಮ್ಮ ಸಂಪುಟವನ್ನು ಸಂಪೂರ್ಣ ಪುನರುಜ್ಜೀವನಗೊಳಿಸಿ ಹೊಸ ತಂಡವನ್ನು ಪಡೆಯುವುದಾಗಿ ಘೋಷಿಸಿದ್ದರು. ಈಗಿನ ಸಚಿವ ಸಂಪುಟವು 2019ರ ಜೂನ್ 8ರಂದು ಪ್ರಮಾಣವಚನ ಸ್ವೀಕರಿಸಿತು. ಈಗ 2024ರಲ್ಲಿ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಸಂಪುಟ ವಿಸ್ತರಣೆಗೆ ಸಾಕಷ್ಟು ಮುಂಜಾಗ್ರತೆ ವಹಿಸಿದ್ದಾರೆ.

ಇದು ಸೂಕ್ತವಾದ ಕ್ರಮ

ಜಗನ್ ಮೋಹನ್ ರೆಡ್ಡಿ ಅವರು ಜಾತಿ, ಧರ್ಮ ಮತ್ತು ಜಿಲ್ಲೆಗಳ ಆಧಾರದ ಮೇಲೆ ಕ್ಯಾಬಿನೆಟ್ ಸಚಿವರ ಹೊಸ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಸಚಿವ ಸಂಪುಟ ಪುನರ್ ರಚನೆಯ ಕಸರತ್ತು ಸೋಷಿಯಲ್ ಎಂಜಿನಿಯರಿಂಗ್ ಅನ್ನು ಕೇಂದ್ರೀಕರಿಸಲಾಗಿದೆ ” ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ನ್ಯೂಸ್ 18 ಗೆ ತಿಳಿಸಿದ್ದಾರೆ.

ಇದನ್ನೂ ಓದಿ: AP New Districts: ಆಂಧ್ರದಲ್ಲಿ ಜಿಲ್ಲೆಗಳ ಸಂಖ್ಯೆ ದ್ವಿಗುಣ: ಹೊಸದಾಗಿ 13 ಜಿಲ್ಲೆಗಳ ಘೋಷಣೆ.. ಪಟ್ಟಿ ಇಲ್ಲಿದೆ

ತೆಲುಗು ದೇಶಂ ಪಕ್ಷ, ಜನಸೇನೆ ಮತ್ತು ಭಾರತೀಯ ಜನತಾ ಪಕ್ಷ ವಿರುದ್ಧ ಹೋರಾಡಲು ಈ‌ ಮೂಲಕ ಜಗನ್ ಮೋಹನ್ ರೆಡ್ಡಿ ಉತ್ತಮ ಪರ್ಯಾಯಗಳನ್ನು ಕಂಡುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಹೆಚ್ಚು ಸಮಯ. ಪಕ್ಷ ಮತ್ತು ಸರ್ಕಾರವನ್ನು ಸಮತೋಲನದಲ್ಲಿಡಬೇಕು ಮತ್ತು 2024 ರಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಕೂಡ ತಿಳಿಸಿದ್ದಾರೆ.
Published by:Soumya KN
First published: