ಲಖನೌ: ಉತ್ತರ ಪ್ರದೇಶದ ( Uttar Pradesh) ಬುದೌನ್ ಜಿಲ್ಲೆಯ ಬಸೌನಿ ಗ್ರಾಮದಲ್ಲಿ 20 ಅಡಿ ಆಳದ ನೀರಿಲ್ಲದ ಬಾವಿಯಲ್ಲಿ ಎಸೆಯಲ್ಪಟ್ಟ ಒಂದು ದಿನದ ಗಂಡು ಮಗುವನ್ನು ಜೀವಂತವಾಗಿ ರಕ್ಷಿಸಲಾಗಿತ್ತು. ಇದೀಗ ಒಂದು ವಾರದ ನಂತರ, ಎರಡು ದಿನದ ನವಜಾತ ಶಿಶುವನ್ನು (Infant) ಬರೇಲಿಯ ಜಿಲ್ಲೆಯ (Bareilly District) ಖಟೌವಾ ಗ್ರಾಮದ ಕೊಳವೊಂದರಲ್ಲಿ ಜೀವಂತವಾಗಿ ರಕ್ಷಿಸಲಾಗಿದೆ. ಕೊಳದ ದಡದಿಂದ 15 ಅಡಿ ದೂರದಲ್ಲಿ ಕತ್ತು ಮುಳುಗುವಷ್ಟು ಆಳದ ನೀರಿನಲ್ಲಿ ಶಿಶು ಪತ್ತೆಯಾಗಿದ್ದು, ತಕ್ಷಣ ವ್ಯಕ್ತಿಯೊಬ್ಬ ನೀರಿಗಿಳಿದು ಶಿಶುವನ್ನು ರಕ್ಷಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಗು ನೀರಿನ ಹಯಸಿಂತ್ ಹೂ ಮೇಲೆ (Hyacinth Flower)ತೇಲುತ್ತಿದ್ದು, ಹೆಚ್ಚು ತೂಕವಿರದ ಕಾರಣ ಹಯಾಸಿಂತ್ ಹೂ ಮಗು ನೀರಿನಲ್ಲಿ ಮುಳುಗದಂತೆ ರಕ್ಷಿಸಿದೆ. ನಂತರ ಆ ವ್ಯಕ್ತಿ ಮಗುವನ್ನು ರಕ್ಷಿಸಿದ್ದಾರೆ. ಅಲ್ಲಿಗೆ ಧಾವಿಸಿದ ಪೊಲೀಸರು ಶಿಶುವನ್ನು ನವಾಬ್‌ಗಂಜ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ.
ಪವಾಡ ಸದೃಶವಾಗಿ ಬದುಕಿದ ಮಗು
ಗುರುವಾರ ಮಗು ಪತ್ತೆಯಾಗಿದ್ದು, ಖಟೌವಾ ಗ್ರಾಮದ ಮಾಜಿ ಮುಖ್ಯಸ್ಥನಾಗಿರುವ ವಕೀಲ್ ಅಹ್ಮದ್ ತನ್ನ ಹೊಲಕ್ಕೆ ಹೋಗುತ್ತಿದ್ದಾಗ, ಊರಿನ ಕೊಳದಲ್ಲಿ ಮಗು ಪತ್ತೆಯಾಗಿದೆ. ತಕ್ಷಣವೆ ನವಜಾತ ಶಿಶುವನ್ನು ರಕ್ಷಿಸಿ, ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ಸುದ್ದಿ ಹರಡುತ್ತಿದ್ದಂತೆ, ನೀರಿಗೆ ಎಸೆದರು ಮುಳುಗದೇ ಪವಾಡ ಸದೃಶವಾಗಿ ಬದುಕಿದ ಮಗುವನ್ನು ವೀಕ್ಷಿಸಲು ಸ್ಥಳೀಯ ಜನರು ಸ್ಥಳಕ್ಕೆ ಜಮಾಯಿಸಿದ್ದಾರೆ. ಹಯಸಿಂತ್ ಮೇಲಿದ್ದ ಶಿಶುವನ್ನು ಹೊರತೆಗೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಂಗಾ ಎಂದು ನಾಮಕರಣ
ಅದೃಷ್ಟವಶಾತ್ ಮಗು ನೀರಿನ ಹಯಸಿಂತ್‌ನಲ್ಲಿ ಸಿಲುಕಿಕೊಂಡಿದೆ, ಅದು ಅವಳನ್ನು ಮುಳುಗದಂತೆ ರಕ್ಷಿಸಿದೆ. ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದ್ದು, ಬರೇಲಿ ನಗರದಲ್ಲಿನ ಫಾಸ್ಟರ್ ಹೋಮ್‌ಗೆ ಸ್ಥಳಾಂತರಿಸಲಾಗಿದೆ. 72 ಗಂಟೆಗಳಲ್ಲಿ ಆಕೆಯ ಪೋಷಕರು ಬರುವವರೆಗೆ ನಾವು ಕಾಯುತ್ತೇವೆ ಮತ್ತು ಯಾರೂ ಬಾರದಿದ್ದಲ್ಲಿ ನಿಯಮಾನುಸಾರ ದೂರು ದಾಖಲಿಸಿಕೊಳ್ಳುತ್ತೇವೆ ಎಂದು ಹೆಚ್ಚುವರಿ ಎಸ್ಪಿ (ಗ್ರಾಮೀಣ) ರಾಜ್‌ಕುಮಾರ್ ಅಗರ್‌ವಾಲ್ ತಿಳಿಸಿದ್ದಾರೆ.
ಪವಾಡ ಸದೃಶವಾಗಿ ಬದುಕುಳಿದ ಈ ಹೆಣ್ಣು ಮಗುವಿಗೆ ಗಂಗಾ ಎಂದು ಹೆಸರಿಡಲಾಗಿದೆ ಎಂದು ಸಿಡಬ್ಲ್ಯುಸಿ ಅಧ್ಯಕ್ಷ ದಿನೇಶ್ ಚಂದ್ರ ತಿಳಿಸಿದ್ದಾರೆ.
ಕಸದ ರಾಶಿಯಲ್ಲಿ ಬಿದ್ದಿದ್ದ ಶಿಶು ವಾಹನ ಹರಿದು ಸಾವು
ಅತ್ತ ಉತ್ತರ ಪ್ರದೇಶದಲ್ಲಿ ನೀರಿನಲ್ಲಿ ಬಿದ್ದಿದ್ದ ಮಗು ಪವಾಡ ಸದೃಶವಾಗಿ ಜೀವ ಉಳಿಸಿಕೊಂಡರೆ, ಬೆಂಗಳೂರಿನಲ್ಲಿ ಕಸದ ರಾಶಿಯಲ್ಲಿ ಬಿಸಾಡಲಾಗಿದ್ದ ನಾಲ್ಕೈದು ತಿಂಗಳ ಹಸುಗೂಸಿನ ಮೇಲೆ ವಾಹನಗಳು ಹರಿದು ಸಾವನ್ನಪ್ಪಿದೆ. ಕವರ್ನಲ್ಲಿ ಸುತ್ತಿ ಮಗುವನ್ನು ಕಸದ ರಾಶಿಯಲ್ಲಿ ಬಿಸಾಡಲಾಗಿದೆ. ಕಸವನ್ನು ತುಂಬಿಕೊಂಡು ಬಿಬಿಎಂಪಿ ಲಾರಿಗೆ ಸಾಗುತ್ತಿದ್ದಾಗ ಆ ಕವರ್ ರಸ್ತೆಗೆ ಬಿದ್ದಿದ್ದು, ಈ ವೇಳೆ ವೇಗವಾಗಿ ಬಂದ ವಾಹನಗಳು ಕವರ್ ಮೇಲೆ ಹರಿದ ಪರಿಣಾಮ ಒಳಗಿದ್ದ ಶಿಶು ನಜ್ಜು ಗುಜ್ಜಾಗಿ ಸಾವನ್ನಪ್ಪಿದೆ.
ಫೆಬ್ರವರಿ 28 ರಂದು ಘಟನೆ
ಅಮೃತಹಳ್ಳಿ ಬಳಿಯ ಪಂಪಾ ಲೇಔಟ್‌ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಬಿದ್ದ ಕವರ್ನಲ್ಲಿ ಶಿಶು ಇದೆ ಎಂಬುವುದನ್ನು ಗಮನಿಸಲು ಸಾಧ್ಯವಾಗದ ವಾಹನ ಸವಾರರು ಅದರ ಮೇಲೆ ಹರಿಸಿಕೊಂಡು ಹೋಗಿದ್ದು, ಮಗು ಸಾವನ್ನಪ್ಪಿದೆ. ಈ ವಿಚಾರವನ್ನು ದಾರಿಹೋಕರು ಪೊಲೀಸರಿಗೆ ತಿಳಿಸಿದ್ದಾರೆ. ಈ ಘಟನೆ ಫೆಬ್ರವರಿ 28 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾರ್ವಜನಿಕರು ನೀಡಿದ ಮಾಹಿತಿಯನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವಿನ ಮೇಲೆ ವಾಹನ ಹರಿದಿರುವ ಪರಿಣಾಮ ಮಗು ಗಂಡೋ-ಹೆಣ್ಣೋ ಎಂಬುದು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ