news18-kannada Updated:January 15, 2021, 5:30 PM IST
ಪ್ರತಿಭಟನೆ ನಡೆಸುತ್ತಿರುವ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ.
ನವ ದೆಹಲಿ (ಜನವರಿ 15); ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಕೃಷಿ ಮಸೂದೆಗಳಿಂದಾಗಿ ರೈತರಿಗೆ ಯಾವುದೇ ಪ್ರಯೋಜನ ಇಲ್ಲ. ಅಲ್ಲದೆ, ಈ ಕಾಯ್ದೆಗಳು ಜಾರಿಯಾದರೆ ದೇಶದಲ್ಲಿ ಕೃಷಿ ಮತ್ತು ರೈತರನ್ನು ಸಂಪೂರ್ಣವಾಗಿ ಮುಗಿಸಿಬಿಡುತ್ತವೇ. ಹೀಗಾಗಿ ನಾವು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆಯುವವರೆಗೆ ಹೋರಾಟವನ್ನು ಮುಂದುವರೆಸಬೇಕು. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪಟ್ಟನ್ನು ಸಡಿಲಿಸುವುದಿಲ್ಲ ಎಂದು ಕಾಂಗ್ರೆಸ್ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಅಲ್ಲದೆ, ಈ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಇಂದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರಾ ಇಬ್ಬರೂ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಅಧಿಕೃತ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
"ಸ್ಪೀಕ್ ಅಪ್ ಫಾರ್ ಕಿಸಾನ್ ಅಧಿಕಾರ" (Speak Up For Kisan Adhikar) ಎಂಬ ಅಭಿಯಾನದ ಭಾಗವಾಗಿ ರೈತ ಹೋರಾಟವನ್ನು ಬೆಂಬಲಿಸಿರುವ ಕಾಂಗ್ರೆಸ್ ಇಂದು ಎಲ್ಲಾ ರಾಜ್ಯದ ರಾಜಭನದ ಎದುರು ಕೇಂದ್ರ ಸರ್ಕಾರ ಮತ್ತು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸಲಿವೆ. ಅಲ್ಲದೆ, ಇದೇ ಅಭಿಯಾನದ ಭಾಗವಾಗಿಯೇ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರಾ ಇಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಅಧಿಕೃತ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿರುವ ರಾಹುಲ್ ಗಾಂಧಿ, "ನರೇಂದ್ರ ಮೋದಿ ಸರ್ಕಾರ ಈ ಹಿಂದೆ ರೈತರ ಭೂಮಿಯನ್ನು ಕಸಿದುಕೊಳ್ಳುವ ಸಲುವಾಗಿ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷದ ಸತತ ಹೋರಾಟದ ಫಲವಾಗಿ ಈ ಕಾಯ್ದೆಯನ್ನು ಸರ್ಕಾರ ಹಿಂಪಡೆದಿತ್ತು. ಈಗ ಬಿಜೆಪಿ ಸರ್ಕಾರ ಮತ್ತೆ ರೈತರನ್ನು ಶೋಷಿಸುವ ಸಲುವಾಗಿಯೇ ಮೂರು ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದೆ.
ಇದನ್ನೂ ಓದಿ: Budget 2021: ಮೂರನೇ ಕೇಂದ್ರ ಬಜೆಟ್ ಮಂಡಿಸಲಿರುವ ಸಚಿವೆ ನಿರ್ಮಲಾ ಸೀತಾರಾಮನ್; ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳು ಇಲ್ಲಿವೆ!
ಆದರೆ, ಈ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳುವವರೆಗೆ ಕಾಂಗ್ರೆಸ್ ಪಕ್ಷ ಹೋರಾಟವನ್ನು ಮುಂದುವರೆಸಲಿದೆ. ಹೋರಾಟವನ್ನು ನಿಲ್ಲಿಸುವ ಮಾತೇ ಇಲ್ಲ. ಏಕೆಂದರೆ ಈ ನೂತನ ಕೃಷಿ ಕಾಯ್ದೆಗಳ ಮೂಲಕ ರೈತರಿಗೆ ಯಾವ ಸಹಾಯವೂ ಆಗುವುದಿಲ್ಲ. ಬದಲಾಗಿ ರೈತರನ್ನು, ವ್ಯವಸಾಯವನ್ನು ಪೂರ್ತಿಯಾಗಿ ಮುಗಿಸಲೆಂದೇ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ" ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
"ಕಳೆದ ಹಲವು ವಾರಗಳಿಂದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮತ್ತು ರಾಜಸ್ಥಾನದ ಸಾವಿರಾರು ರೈತರು ದೆಹಲಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದು, ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಮೂರೂ ಕೃಷಿ ಕಾಯ್ದೆಗಳಿಂದಾಗಿ ತಮಗಾಗಲಿರುವ ಅನ್ಯಾಯದ ವಿರುದ್ಧ ಅವರು ಹೋರಾಟ ನಡೆಸುತ್ತಿದ್ದಾರೆ. ದೇಶದ ಅನ್ನದಾತರು ತಮ್ಮ ಹಕ್ಕುಗಳಿಗಾಗಿ ತಮ್ಮ ಸೊಕ್ಕಿನ ಮೋದಿ ಸರ್ಕಾರದ ವಿರುದ್ಧ ಸತ್ಯಾಗ್ರಹವನ್ನು ಮಾಡುತ್ತಿದ್ದಾರೆ.
ಇಂದು, ಇಡೀ ಭಾರತವು ರೈತರ ಮೇಲಿನ ದೌರ್ಜನ್ಯ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿರುದ್ಧ ಧ್ವನಿ ಎತ್ತುತ್ತಿದೆ. ಇಡೀ ದೇಶದ ಜನ ಇದರ ಭಾಗವಾಗಬೇಕು. Speak Up For Kisan Adhikar ಅಭಿಯಾನದ ಮೂಲಕ ರೈತರನ್ನು ಬೆಂಬಲಿಸಬೇಕು" ಎಂದು ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
Published by:
MAshok Kumar
First published:
January 15, 2021, 5:30 PM IST