• Home
 • »
 • News
 • »
 • national-international
 • »
 • ನೂತನ ಕೃಷಿ ಕಾನೂನಿನಿಂದ ರೈತರಿಗೆ ಹೆಚ್ಚಿನ ಮಾರುಕಟ್ಟೆ ಸೃಷ್ಟಿ, ಕೃಷಿ ರಫ್ತಿಗೆ ಉತ್ತೇಜನ

ನೂತನ ಕೃಷಿ ಕಾನೂನಿನಿಂದ ರೈತರಿಗೆ ಹೆಚ್ಚಿನ ಮಾರುಕಟ್ಟೆ ಸೃಷ್ಟಿ, ಕೃಷಿ ರಫ್ತಿಗೆ ಉತ್ತೇಜನ

ರೈತ

ರೈತ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳಿಂದ ರೈತರಿಗೆ ಹೊಸ ಮಾರುಕಟ್ಟೆಗಳು ತೆರೆದುಕೊಳ್ಳುತ್ತಿವೆ. ಭಾರತೀಯ ರೈತರಿಗೆ ಹೊಸ ಮತ್ತು ಬೃಹತ್ ಮಾರುಕಟ್ಟೆ ಸೃಷ್ಟಿಯಾಗುವ ಸಾಧ್ಯತೆಗಳು ಇದೀಗ ಬಂದಿದೆ ಎಂದರೆ ತಪ್ಪಾಗಲಾರದು.

 • Share this:

  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗೆ ದೇಶಾದ್ಯಂತ ರೈತ ಸಮುದಾಯದಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಕೃಷಿ ಸೇರಿದಂತೆ ಬಹುತೇಕ ಎಲ್ಲ ಮಾರುಕಟ್ಟೆಗಳ ನಿಜವಾದ ಲಾಭ ಇರುವುದೇ ರಫ್ತಿನಲ್ಲಿ. ಭಾರತವು 202ರ ವೇಳೆಗೆ ಕೃಷಿ ರಫ್ತಿನಲ್ಲಿ 60 ಬಿಲಿಯನ್ ಡಾಲರ್ ಗಳಿಸುವ ಗುರಿಯನ್ನು ಹೊಂದಿದೆ. ಈ ಗುರಿಯನ್ನು ಸಾಧಿಸಲು ಹೊಸ ಕೃಷಿ ಕಾನೂನುಗಳು ಸಹಾಯ ಮಾಡುತ್ತವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳಿಂದ ರೈತರಿಗೆ ಹೊಸ ಮಾರುಕಟ್ಟೆಗಳು ತೆರೆದುಕೊಳ್ಳುತ್ತಿವೆ. ನಿಂಜಾಕಾರ್ಟ್​ ಮತ್ತು ವೇಕೂಲ್​ನಂತಹ ಕಂಪನಿಗಳು ಈಗಾಗಲೇ ಸಣ್ಣ ರೈತರಿಗೆ ಒಪ್ಪಂದದ ಮೇರೆಗೆ ಖಾಸಗಿ ಖರೀದಿದಾರರಿಗೆ ತಮ್ಮ ಬೆಳೆಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಸಹಾಯ ಮಾಡುತ್ತಿವೆ. ದೇಶದಲ್ಲಿ ಆಹಾರ ಭದ್ರತೆಯೊಂದು ಸಮಸ್ಯೆಯಾಗಿ ಉಳಿದಿದೆ. ಆದರೆ, ಆಹಾರ ಸ್ವಾವಲಂಬನೆಯ ವಿಚಾರದಲ್ಲಿ ಭಾರತ ಉಳಿದ ದೇಶಗಳಿಗಿಂತ ಮುನ್ನಡೆ ಸಾಧಿಸಿದೆ.


  ಪೆಟ್ರೋಲಿಯಂ ಉತ್ಪನ್ನಗಳ ಆಡಳಿತಾತ್ಮಕ ಬೆಲೆಗಳು ಭಾರತದಲ್ಲಿ ತೈಲ ಬಾಂಡ್‌ಗಳು ಹೆಚ್ಚಲು ಕಾರಣವಾಯಿತು. ಇದರಿಂದ ಜಾಗತಿಕ ಸಗಟು ಬೆಲೆಗಳೊಂದಿಗೆ ರೀಟೇಲ್ ಬೆಲೆಯನ್ನು ಸೇರಿಸಲು ಸಾಧ್ಯವಾಯಿತು. ಸಣ್ಣ ಉಳಿತಾಯ ಯೋಜನೆಗಳ ಆಡಳಿತಾತ್ಮಕ ದರಗಳು ಈಗ ವಾಸ್ತವಿಕತೆಯತ್ತ ಸಾಗುತ್ತಿವೆ. ಆದರೆ, ಇದರಿಂದ ಬಡ್ಡಿದರದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಇದರಿಂದ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಒತ್ತಡವೂ ಹೆಚ್ಚುತ್ತಿದೆ. ಆದ್ದರಿಂದ ಆಡಳಿತಾತ್ಮಕ ಬೆಲೆಗಳು ಹಲವು ಪ್ರದೇಶಗಳಲ್ಲಿ ಅನ್ವಯವಾಗದಿದ್ದ ಮೇಲೆ ಭಾರತೀಯ ಕೃಷಿ ಕ್ಷೇತ್ರದಲ್ಲಿ ಮಾತ್ರ ಏಕೆ ಅನ್ವಯವಾಗಬೇಕು? ಒಂದೇ ವಿಷಯವನ್ನು ಪದೇ ಪದೇ ಮಾಡಿ, ವಿಭಿನ್ನವಾದ ಫಲಿತಾಂಶಗಳನ್ನು ನಿರೀಕ್ಷಿಸುವುದು ಮೂರ್ಖತನ ಎಂದು ಆಲ್ಬರ್ಟ್ ಐನ್‌ಸ್ಟೈನ್ ಹೇಳಿದ್ದಾರೆ.


  ಕನಿಷ್ಠ ಬೆಂಬಲ ಬೆಲೆಗಳು (ಎಂಎಸ್​ಪಿ) ಹಸಿರು ಕ್ರಾಂತಿಯ ನಂತರದ ಅವಧಿಯ ಸಂಪ್ರದಾಯವಾಗಿದೆ. ಸ್ವಾಮಿನಾಥನ್ ಸಮಿತಿಯ ಮೂಲ ಶಿಫಾರಸು ಎಂಎಸ್​ಪಿಯನ್ನು ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಶೇಕಡಾ ಹೆಚ್ಚು ಹಣ ನೀಡಬೇಕು ಎನ್ನುತ್ತದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸಿನ ಆಧಾರದ ಮೇಲೆ ಸರ್ಕಾರವು 23 ಕೃಷಿ ಬೆಳೆಗಳ ಎಂಎಸ್‌ಪಿಯನ್ನು ನಿಗದಿಪಡಿಸುತ್ತದೆ.


  ಭಾರತೀಯ ಕೃಷಿಯ ಉತ್ಪಾದಕತೆ ಮತ್ತು ಉತ್ಪಾದನೆ ವೇಗವಾಗಿ ಹೆಚ್ಚಾಗುತ್ತಿದ್ದಂತೆ ಅಂದಿನ ಸರ್ಕಾರ ಆಹಾರ ಸುರಕ್ಷತೆಯ ಬಗ್ಗೆ ಹೆಚ್ಚು ಆದ್ಯತೆ ನೀಡಲು ಪ್ರಯತ್ನಿಸಿತ್ತು. ಇದರಿಂದಾಗಿ ಎಂಎಸ್‌ಪಿಯನ್ನು ಪರಿಚಯಿಸಲಾಯಿತು. ಎಂಎಸ್​ಪಿ ಅಡಿಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಎಲ್ಲಾ ಕೃಷಿ ಉತ್ಪನ್ನಗಳನ್ನು ಸರ್ಕಾರ ಸಂಗ್ರಹಿಸುತ್ತದೆ ಎಂಬ ಕಲ್ಪನೆ ಜನರಲ್ಲಿತ್ತು. ಆದರೆ, ಇದು ಪೂರ್ತಿ ಸತ್ಯವಲ್ಲ.


  ಸರ್ಕಾರದ ಈ ಹೊಸ ಯೋಜನೆ ಸ್ವಲ್ಪ ಕಾಲ ಚೆನ್ನಾಗಿಯೇ ಇತ್ತು. ಇಂದು ಕೇಂದ್ರ ಸರ್ಕಾರ 23 ಬೆಳೆಗಳನ್ನು ಕನಿಷ್ಟ ಬೆಂಬಲ ಬೆಲೆ (ಎಂಎಸ್​ಪಿ) ನೀಡಲು ಪರಿಗಣಿಸುತ್ತದೆ. ಆದರೆ, ಸರ್ಕಾರ ಈ ಎಲ್ಲ ಬೆಳೆಗಳನ್ನೂ ಸಂಪೂರ್ಣವಾಗಿ ಖರೀದಿ ಮಾಡುವುದಿಲ್ಲ. ಹಾಗೇ, ರಾಜ್ಯ ಸರ್ಕಾರಗಳಿಗೆ ಕೂಡ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡುವ ಅವಕಾಶವಿದೆ.


  ವಾಸ್ತವ ಪರಿಸ್ಥಿತಿಯಲ್ಲಿ ಯಾವ ರೈತರಿಗೆ ಕನಿಷ್ಟ ಬೆಂಬಲ ಬೆಲೆಯ ಅಗತ್ಯ ಇರುತ್ತದೋ ಅವರಿಗೆ ಸರ್ಕಾರದ ಬೆಳೆ ಸಂಗ್ರಹಣಾ ಸೌಲಭ್ಯ ಸಿಗುವುದಿಲ್ಲ. ಇದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗತೊಡಗಿತು. ಹೀಗಾಗಿ, ಸರ್ಕಾರ ರೈತರಿಗೆ ವಿಶಾಲವಾದ ಮಾರುಕಟ್ಟೆಯನ್ನು ಒದಗಿಸಿಕೊಡುವ ನಿರ್ಧಾರಕ್ಕೆ ಬಂದಿತು. ರೈತರೇ ಮುಂದೆ ನಿಂತು ತಮ್ಮ ಉತ್ಪನ್ನಗಳಿಗೆ ಖಾಸಗಿ ಹೂಡಿಕೆದಾರರನ್ನು ಪತ್ತೆಹಚ್ಚಿ, ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಹಾಗಾದರೆ ಗುಣಮಟ್ಟವೂ ಚೆನ್ನಾಗಿರುತ್ತದೆ, ಮಧ್ಯವರ್ತಿಯ ಕಾಟವೂ ಇರುವುದಿಲ್ಲ ಎಂಬುದು ಸರ್ಕಾರದ ಲೆಕ್ಕಾಚಾರವಾಗಿತ್ತು. ಇದೀಗ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ಈಗಾಗಲೇ ಈ ನಿಟ್ಟಿನಲ್ಲಿ ರೈತರ ಮೇಲೆ ಪರಿಣಾಮ ಬೀರಲು ಆರಂಭಿಸಿವೆ.


  ಭಾರತೀಯ ಕೃಷಿಗೆ ಆಹಾರ ಸಂಸ್ಕರಣೆ, ಫಾರ್ಮ್ ಗೇಟ್ ಮೂಲಸೌಕರ್ಯ, ಲಾಜಿಸ್ಟಿಕ್ಸ್ ಮತ್ತು ಸಾರಿಗೆ, ಕೋಲ್ಡ್ ಸ್ಟೋರೇಜ್ ಮತ್ತು ತಂತ್ರಜ್ಞಾನ ನೇತೃತ್ವದ ಮಾರುಕಟ್ಟೆ ತಯಾರಿಕೆಯಲ್ಲಿ ಹೆಚ್ಚಿನ ಹೂಡಿಕೆ ಅಗತ್ಯವಿದೆ. ಕನಿಷ್ಟ ಬೆಂಬಲ ಬೆಲೆಯಿಂದ (ಎಂಎಸ್​ಪಿ) ಈಗಾಗಲೇ ಭಾರತೀಯ ಕೃಷಿ ವ್ಯವಸ್ಥೆಗೆ ಹಾನಿಯಾಗುವ ಸ್ಥಿತಿ ತಲುಪಿದೆ. ಭಾರತೀಯ ರೈತರಿಗೆ ಹೊಸ ಮತ್ತು ಬೃಹತ್ ಮಾರುಕಟ್ಟೆ ಸೃಷ್ಟಿಯಾಗುವ ಸಾಧ್ಯತೆಗಳು ಇದೀಗ ಬಂದಿದೆ ಎಂದರೆ ತಪ್ಪಾಗಲಾರದು.


  (ಲೇಖನ: ಆಶಿಶ್ ಚಂದೋರ್ಖರ್- ಪುಣೆ ಮೂಲದ ಲೇಖಕ ಆಶಿಶ್ ಸ್ಮಾಹಿ ಫೌಂಡೇಷನ್ ನಿರ್ದೇಶಕರು)

  Published by:Sushma Chakre
  First published: