ನವ ದೆಹಲಿ (ಸೆಪ್ಟೆಂಬರ್ 25); ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಮಸೂದೆಗಳಿಗೆ ಸಂಸತ್ನಲ್ಲಿ ಅಂಗೀಕಾರ ಸಿಕ್ಕಿದೆ. ಆದರೆ, ಈ ಮಸೂದೆಯನ್ನು ವಿರೋಧಿಸಿ ದೇಶದಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿದೆ. ಇನ್ನೂ ಪಂಜಾಬ್ ಹರಿಯಾಣ ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರಿದೆ. ಅಲ್ಲದೆ, ಸೆಪ್ಟೆಂಬರ್ 28 ರಂದು ಈ ಕಾಯ್ದೆಯನ್ನು ವಿರೋಧಿಸಿ ಭಾರತ್ ಬಂದ್ ಮಾಡಲು ಎಲ್ಲಾ ರೈತ ಸಂಘಟನೆಗಳು ನಿರ್ಧರಿಸಿವೆ. ಈ ಕುರಿತು ಇಂದು ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿರುವ ರಾಹುಲ್ ಗಾಂಧಿ, “ಕೇಂದ್ರ ಸರ್ಕಾರ ಕೃಷಿ ಕಾಯ್ದೆಯ ಮೂಲಕ ರೈತರನ್ನು ಗುಲಾಮರನ್ನಾಗಿಸಲು ಯತ್ನಿಸುತ್ತಿದೆ. ದೋಷ ಪೂರಿತ ಜಿಎಸ್ಟಿ ತೆರಿಗೆ ಪದ್ಧತಿಯನ್ನು ಜಾರಿಗೆ ತರುವ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಮುಗಿಸಿದ ಹಾಗೆ ಕೃಷಿ ಕಾಯ್ದೆ ಮೂಲಕ ರೈತರನ್ನು ಮುಗಿಸಲು ಸಂಚು ಹೂಡಿದೆ. ಹೀಗಾಗಿ ಈ ಕಾಯ್ದೆಯನ್ನು ವಿರೋಧಿಸಿ ರೈತರು ರಾಷ್ಟ್ರವ್ಯಾಪಿ ಕರೆ ನೀಡಿರುವ ಭಾರತ್ ಬಂದ್ಗೆ ನನ್ನ ಬೆಂಬಲ ಇದೆ” ಎಂದು ತಿಳಿಸಿದ್ದಾರೆ.
A flawed GST destroyed MSMEs.
The new agriculture laws will enslave our Farmers.#ISupportBharatBandh
— Rahul Gandhi (@RahulGandhi) September 25, 2020
ಈ ಕಾಯ್ದೆ ಸಂಬಂಧ ನ್ಯೂಸ್ 18 ಜೊತೆಗೆ ಮಾತನಾಡಿರುವ ಕಾಂಗ್ರೆಸ್ ಪಕ್ಷದ ವಕ್ತಾರ ಅಭಿಷೇಕ್ ಸಿಂಗ್ವಿ, “ಸಮಾನ ಮನಸ್ಕ ಪಕ್ಷಗಳು ಒಂದಾಗಿ ಈ ಮಸೂದೆಗೆ ಸಹಿ ಹಾಕದಂತೆ ರಾಷ್ಟ್ರಪತಿಗಳ ಬಳಿ ಮನವಿ ಮಾಡಿದ್ದೆವು. ಇದಕ್ಕೆ ಸಹಿ ಹಾಕುವ ಮೂಲಕ ಫೆಡರಲ್ ವ್ಯವಸ್ಥೆಗೆ ಹಾನಿಯಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೆವು. ಹೀಗಾಗಿ ಅವರು ಈ ಮಸೂದೆಗಳಿಗೆ ಸಹಿ ಮಾಡಲಾರರು ಎಂದು ನಾನು ಭಾವಿಸಿದ್ದೇನೆ. ಒಂದು ವೇಳೆ ಅವರು ಸಹಿ ಮಾಡಿದರೆ ಇದು ಕಂಡಿತವಾಗಿ ಫೆಡರಲ್ ವ್ಯವಸ್ಥೆಯನ್ನು ಭಾದಿಸಲಿದೆ” ಎಂದು ತಿಳಿಸಿದ್ದಾರೆ.
"ಈ ಕಾನೂನುಗಳನ್ನು ಹೈಕೋರ್ಟ್ನಿಂದ ಸುಪ್ರೀಂ ಕೋರ್ಟ್ವರೆಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಮತ್ತು ಅವುಗಳನ್ನು ರದ್ದುಗೊಳಿಸಲಾಗುವುದು ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಈ ಕಾನೂನುಗಳು ಅಸಂವಿಧಾನಿಕವಾದ್ದರಿಂದ ನ್ಯಾಯಾಲಯವು ಅದನ್ನು ನಿಲ್ಲಿಸಿ ರದ್ದುಪಡಿಸುತ್ತದೆ" ಎಂದು ಸಿಂಗ್ವಿ ಸುದ್ದಿಗಾರರಿಗೆ ತಿಳಿಸಿದ್ದಾರೆ . ರಾಜ್ಯಗಳ ವಿಶೇಷ ಹಕ್ಕುಗಳಾದ 7 ನೇ ವೇಳಾಪಟ್ಟಿಯ ಪಟ್ಟಿ 2 ರ ಅಡಿಯಲ್ಲಿ ಈ ಸಮಸ್ಯೆಗಳು ಬರುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : S P Balasubrahmanyam: 16 ಭಾಷೆಗಳಲ್ಲಿ ಹಾಡಿರುವ ಗಾನ ದಿಗ್ಗಜ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ
ಈ ವಾರದ ಆರಂಭದಲ್ಲಿ ಸಂಸತ್ತು ಅಂಗೀಕರಿಸಿದ ಕೃಷಿ ಮಸೂದೆಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳ ರೈತ ಸಂಘಟನೆಗಳು ಶುಕ್ರವಾರ ಭಾರತ್ ಬಂದ್ ಗೆ ಕರೆ ನೀಡಿವೆ. ಪಂಜಾಬ್ನ ರೈತರು ಈಗಾಗಲೇ ಬಿಲ್ಗಳ ವಿರುದ್ಧ ಮೂರು ದಿನಗಳ ಕಾಲ ರೈಲು ಓಡಾಡಕ್ಕೆ ತಡೆ ವಿಧಿಸಿದ್ದಾರೆ. ಅಲ್ಲದೆ ರೈಲ್ವೆ ನಿಲ್ದಾಣಗಳಲ್ಲಿ ಜಮಾಯಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಯನ್ನು ದಾಖಲಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ