NEET-JEE ಪರೀಕ್ಷೆಗಳ ಮುಂದೂಡಿಕೆ?; ನಾಳೆ 6 ರಾಜ್ಯಗಳ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಲಿರುವ ಸುಪ್ರೀಂ

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಸೆಪ್ಟೆಂಬರ್ 13 ರಂದು ನಡೆಯಲಿದ್ದರೆ, ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ-ಮೇನ್ ಅನ್ನು ಸೆಪ್ಟೆಂಬರ್ 1 ರಿಂದ 6 ರಿಂದ ಯೋಜಿಸಲಾಗಿದೆ.

ಸುಪ್ರೀಂಕೋರ್ಟ್​.

ಸುಪ್ರೀಂಕೋರ್ಟ್​.

  • Share this:
ನವ ದೆಹಲಿ (ಸೆಪ್ಟೆಂಬರ್‌ 03); ಕೊರೋನಾ ಸಾಂಕ್ರಾಮಿಕ ರೋಗ ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕಾರಣ ನೀಟ್‌ ಮತ್ತು ಜೆಇಇ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿ 6 ರಾಜ್ಯಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ. ಕೊರೋನಾ ಕಾರಣದಿಂದಾಗಿ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಗಮನದಲ್ಲಿಟ್ಟು ಸೆಪ್ಟೆಂಬರ್‌ ತಿಂಗಳಲ್ಲಿ ಆಯೋಜಿಸಿರುವ ಪರೀಕ್ಷೆಯನ್ನು ಮುಂದೂಡುವಂತೆ ಬಹುತೇಕ ರಾಜ್ಯಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು. ಆದರೆ, ಕೇಂದ್ರ ಸರ್ಕಾರ ಇದಕ್ಕೆ ಒಪ್ಪದ ಕಾರಣ ಸುಪ್ರೀಂ ಕೋರ್ಟ್‌‌ಗೂ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಈ ಮೊದಲು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಪರೀಕ್ಷೆಯನ್ನು ನಡೆಸಲು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿತ್ತು. ಆದರೆ, ಈ ಆದೇಶವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ರಾಜ್ಯಗಳು ಮತ್ತೆ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಾಳೆ ವಿಚಾರಣೆಗೆ ತೆಗೆದುಕೊಳ್ಳಲಿದೆ.

ಪರೀಕ್ಷೆ ಮುಂದೂಡುವ ಸಂಬಂಧ ಸುಪ್ರೀಂ ಕೋರ್ಟ್‌‌ಗೆ ಅರ್ಜಿ ಸಲ್ಲಿಸಿರುವ ರಾಜ್ಯ ಸರ್ಕಾರಗಳು, "ಪರೀಕ್ಷೆಗಳನ್ನು ಸುರಕ್ಷಿತವಾಗಿ ನಡೆಸುವಲ್ಲಿ ಕೇಂದ್ರ ಸರ್ಕಾರ ಸೋತಿದೆ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಗಳನ್ನು ಮುಂದೂಡುವುದು ಸೂಕ್ತ" ಎಂದು ಅಭಿಪ್ರಾಯಪಟ್ಟಿವೆ.

ಈ ನಡುವೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಸೆಪ್ಟೆಂಬರ್ 13 ರಂದು ನಡೆಯಲಿದ್ದರೆ, ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ-ಮೇನ್ ಅನ್ನು ಸೆಪ್ಟೆಂಬರ್ 1 ರಿಂದ 6 ರಿಂದ ಯೋಜಿಸಲಾಗಿದೆ. ದೇಶದಾದ್ಯಂತ ಜೆಇಇ ಪರೀಕ್ಷೆಗಳು ಈಗಾಗಲೇ ಆರಂಭವಾಗಿವೆ. ಆದರೆ ಸೆಪ್ಟೆಂಬರ್‌ 01 ರಂದು ಆರಂಭವಾದ ಜೆಇಇ ಪರೀಕ್ಷೆಯ ಮೊದಲ ದಿನ ಶೇ. 50ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.

ಬಿಹಾರ, ಅಸ್ಸಾಂ ಮತ್ತು ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ಕೊರೊನಾ ವೈರಸ್ ಮತ್ತು ಪ್ರವಾಹಕ್ಕೆ ಒಳಗಾಗಿರುವುದರಿಂದ, ಆ ರಾಜ್ಯಗಳ ವಿದ್ಯಾರ್ಥಿಗಳು ಮತ್ತಷ್ಟು ತೊಂದರೆಯಲ್ಲಿ ಸಿಲುಕಿದ್ದಾರೆ. ಹೀಗಾಗಿ ಪರೀಕ್ಷೆಗೆ ಆಗಮಿಸಲು ಸಾಧ್ಯವಾಗಲಿಲ್ಲ ಎನ್ನಲಾಗುತ್ತಿದೆ. ಇದಲ್ಲದೆ, ಎಲ್ಲೆಡೆ ಸರ್ಮಪಕ ಸಾರಿಗೆ ವ್ಯವಸ್ಥೆಯನ್ನು ಇನ್ನೂ ಆರಂಭಿಸದ ಕಾರಣ ದೇಶದ ಹಲವಾರು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ಸಾಧ್ಯವಾಗಿಲ್ಲ ಎಂದು ಹಲವು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.

ಎಂಜಿನಿಯರಿಂಗ್ ಮತ್ತು ಫಾರ್ಮಸಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಮಂಗಳವಾರ ರಾಷ್ಟ್ರವ್ಯಾಪಿ ಪ್ರಾರಂಭವಾದ ಜೆಇಇ ಪರೀಕ್ಷೆಯನ್ನು ಬರೆಯಲು ಗುಜರಾತ್‌ನ ಸುಮಾರು ಶೇ.45 ಅಭ್ಯರ್ಥಿಗಳು ಗೈರಾಗಿದ್ದಾರೆ. ಮೊದಲ ದಿನ, ನೋಂದಾಯಿತ 3,020 ವಿದ್ಯಾರ್ಥಿಗಳಲ್ಲಿ 1,664 (55%) ಮಾತ್ರ ಹಾಜರಿದ್ದರು. 1,356 (45%) ಮಂದಿ ಹಾಜರಾಗಲಿಲ್ಲ. "ಸಾಮಾನ್ಯವಾಗಿ ಪ್ರತಿವರ್ಷ 25-30% ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಗೈರಾಗುತ್ತಾರೆ. ಆದರೆ, ಈ ವರ್ಷ ಶೇ.45 ಅಭ್ಯರ್ಥಿಗಳು ಗೈರಾಗಿದ್ದಾರೆ” ಎಂದು ಗುಜರಾತ್‌ನ ಜೆಇಇ ಸಂಯೋಜಕ ವೀರೇಂದ್ರ ರಾವತ್ ಮಾಹಿತಿ ನೀಡಿದ್ದಾರೆ.

ಗುಜರಾತ್‌ನಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಸುಮಾರು ಶೇ.50ರಷ್ಟು ಅಭ್ಯರ್ಥಿಗಳು ಜೆಇಇ ಪರೀಕ್ಷೆಯನ್ನು ಬರೆದಿಲ್ಲ ಎಂದು ಈಗಾಗಲೇ ವರದಿಗಳು ಹೊರ ಬೀಳುತ್ತಿವೆ. ಅಲ್ಲದೆ, ಇದನ್ನು ವಿರೋಧಿಸಿ ಹಲವಾರು ವಿದ್ಯಾರ್ಥಿ ಸಂಘಟನೆಗಳೂ ಪ್ರತಿಭಟನೆಗೆ ಮುಂದಾಗಿವೆ. ಅಲ್ಲದೆ, ಸೆಪ್ಟೆಂಬರ್ 1 ರಿಂದ 6 ರವರೆಗೆ ನಡೆಯುತ್ತಿರುವ ಜೆಇಇ ಪರೀಕ್ಷೆಗೆ 8.58 ಲಕ್ಷ ಎಂಜಿನಿಯರಿಂಗ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 13 ರಂದು ನಡೆಸಲು ನಿರ್ಧರಿಸಲಾಗಿರುವ ನೀಟ್ ಪರೀಕ್ಷೆಗೆ 15.97 ಲಕ್ಷ ವೈದ್ಯಕೀಯ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ನೀಟ್‌ ಪರೀಕ್ಷೆಯನ್ನು ಮುಂದೂಡಿ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಜಿಎಸ್‌ಟಿ ಪಾಲಿಗೆ ಒತ್ತಾಯಿಸಿ ಮೋದಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ, ಸಾಲ ಪಡೆಯಲು ಸಿದ್ದರಾದ ಯಡಿಯೂರಪ್ಪ

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಅನುಮತಿ ಮರುಪರಿಶೀಲನೆಗೆ ಒತ್ತಾಯಿಸಿ ಸಲ್ಲಿಸಿರುವ ಅರ್ಜಿಯನ್ನು ನಾಳೆ ಸುಪ್ರೀಂ ಕೋರ್ಟ್‌ ವಿಚಾರಣೆಗೆ ತೆಗೆದುಕೊಳ್ಳುತ್ತಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ತೀರ್ಪು ನೀಡಲಿದೆ ಎನ್ನಲಾಗುತ್ತಿದೆ.

ಕೊರೋನಾ ಹಿನ್ನೆಲೆ ಈಗಾಲೇ ಎರಡು ಬಾರಿ ಜೆಇಇ ಮತ್ತು ನೀಟ್‌ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಹಿಂದೆ ಜೆಇಇ ಪ್ರವೇಶ ಪರೀಕ್ಷೆಯನ್ನು ಏಪ್ರಿಲ್ 7 ರಿಂದ 11ರೊಳಗೆ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಜುಲೈ 18 ರಿಂದ 23ಕ್ಕೆ ಮುಂದೂಡಲಾಯಿತು. ಆದರೂ ಪರೀಕ್ಷೆಗಳನ್ನು ನಡೆಸಲಾಗಿರಲಿಲ್ಲ. ಇನ್ನೂ ನೀಟ್-ಯುಜಿ ಪರೀಕ್ಷೆಯನ್ನು ಮೇ 3ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ನಂತರ ಜುಲೈ 26 ಕ್ಕೆ ಮುಂದೂಡಲಾಗಿತ್ತಾದರೂ ಪರೀಕ್ಷೆ ನಡೆದಿರಲಿಲ್ಲ.
Published by:MAshok Kumar
First published: