ಪಾಣಿಪಟ್ (ಆಗಸ್ಟ್ 18); ಟೋಕಿಯೊ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತಕ್ಕಾಗಿ ಮೊದಲ ಚಿನ್ನದ ಪದಕವನ್ನು ಜಯಯಿಸಿದ್ದ ಒಲಿಂಪಿಕ್ ವಿಜೇತ ನೀರಜ್ ಚೋಪ್ರಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ತೀವ್ರ ಜ್ವರ ಕಾರಣಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ಆದರೆ, ಈ ಸ್ಫರ್ಧೆಯಲ್ಲಿ ಗೆಲುವು ಸಾಧಿಸಬೇಕು ಎಂಬ ಕಾರಣಕ್ಕೆ ಅವರ ನಿರಂತರ ಪರಿಶ್ರಮ ಇದೀಗ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಅಸಲಿಗೆ ನೀರಜ್ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಪಾಣಿಪಟ್ ಗೆ ಆಗಮಿಸುತ್ತಿದ್ದರು. ಅವರ ಸ್ವಾಗತಕ್ಕೆ ಎಲ್ಲಾ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ, ಜ್ವರದ ಕಾರಣದಿಂದಾಗಿ ಈ ಕಾರ್ಯಕ್ರಮವನ್ನೇ ಇದೀಗ ರದ್ದು ಮಾಡಲಾಗಿದೆ.
ಕೆಲ ದಿನಗಳ ಹಿಂದೆಯೂ ನೀರಜ್‌ಗೆ ಜ್ವರ ಬಂದಿತ್ತು. ಆದರೆ, ಆ ಸಮಯದಲ್ಲಿ ಕೊರೋನಾ ವೈರಸ್‌ಗೆ ನೆಗೆಟಿವ್ ವರದಿ ಬಂದಿತ್ತು. ಅಲ್ಲದೆ, ಅವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ಸಲುವಾಗಿ ಶೀಘ್ರದಲ್ಲಿ ಚೇತರಿಸಿಕೊಂಡಿದ್ದರು. ಆದರೆ, ಮಂಗಳವಾರ ಮತ್ತೆ ಅವರಿಗೆ ಜ್ವರ ಕಾಣಿಸಿಕೊಂಡಿದ್ದು ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನೀರಜ್ ಚೋಪ್ರ ಒಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ. ದೇಶದಿಂದ ಒಲಿಂಪಿಕ್ಸ್‌ನಲ್ಲಿ ಎರಡನೇ ವೈಯಕ್ತಿಕ ಚಿನ್ನದ ಪದಕ ವಿಜೇತ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಟೋಕಿಯೊದಲ್ಲಿ ಚಿನ್ನದ ಪದಕ ಗೆಲ್ಲಲು ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಅದ್ಭುತ ಪ್ರದರ್ಶನದ ಮೂಲಕ 87.58 ಮೀಟರ್ ಎಸೆದು ಹೊಸ ಸಾಧನೆ ಮಾಡಿದ್ದರು.
ಟೈಮ್ಸ್ ನೌ ಪ್ರಕಾರ, ನೀರಜ್ ನ ಸ್ನೇಹಿತರು ಮತ್ತು ಕುಟುಂಬದವರು ಸಮಾರಂಭದಲ್ಲಿ ಭಾಗವಹಿಸುವ ಮುನ್ನವೇ ಚಿನ್ನದ ಹುಡುಗ ನೀರಜ್ ಚೋಪ್ರಾ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ದೃಢಪಡಿಸಿದ್ದರು. ಇದೇ ಕಾರಣಕ್ಕೆ ಪಾಣಿಪಟ್ನಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಇದನ್ನೂ ಮುನ್ನ ದೆಹಲಿಯಿಂದ ಪಾಣಿಪಟ್ ವರೆಗೆ ಕಾರ್ ರ್ಯಾಲಿಯನ್ನು ಆಯೋಜನೆ ಮಾಡಲಾಗಿತ್ತು. ಈ ರ್ಯಾಲಿ ಗಂಟೆಗಳ ಕಾಲ ನಡೆದಿದೆ. ಇದು ಸಾಮಾನ್ಯ ಸಮಯಕ್ಕಿಂತ ದುಪ್ಪಟ್ಟಾಗಿದ್ದು, ನೀರಜ್ ಚೋಪ್ರಾ ಆರೋಗ್ಯ ಹದಗೆಡಲು ಇದೂ ಒಂದು ಕಾರಣ ಎನ್ನಲಾಗಿದೆ.
ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್ಐ ಜೊತೆಗೆ ಮಾತನಾಡಿರುವ ನೀರಜ್ ಚೋಪ್ರಾ ತಾಯಿ ಸರೋಜ್ ದೇವಿ, "ನೀರಜ್ ಚೋಪ್ರಾ ಶೀಘ್ರದಲ್ಲೇ ಗುಣಮುಖನಾಗಿ ಹಿಂದಿರುಗಲಿದ್ದಾನೆ. ಆತನಿಗೆ ಇದಕ್ಕಿಂತ ಭವ್ಯವಾದ ಸ್ವಾಗತ ಮತ್ತೆ ಸಿಗಲಿದೆ. ದೇವರ ಆಶೀರ್ವಾದ ದಿಂದಾಗಿ ಆತ ಈ ಎತ್ತರವನ್ನು ತಲುಪಿದ್ದಾನೆ. ಹೀಗಾಗಿ ನಾವು ಆತನ ಚಿನ್ನದ ಪದಕವನ್ನು ದೇವಸ್ಥಾನದಲ್ಲಿ ಇರಿಸುತ್ತೇವೆ. ಇದೀಗ ನಾನು ಸೇರಿದಂತೆ ಇಡೀ ಕುಟುಂಬ ನೀರಜ್ ಚೋಪ್ರಾ ಆಗಮನವನ್ನು ಎದುರು ನೋಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ