ನವದೆಹಲಿ(ಫೆ. 20): ದೇಶದಲ್ಲಿ ಸಹಕಾರ ಒಕ್ಕೂಟತ್ವವನ್ನು ಇನ್ನಷ್ಟು ಅರ್ಥಗರ್ಭಿತವಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಕೆಲಸ ಮಾಡುವುದು ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಇಂದು ಮುಖ್ಯಮಂತ್ರಿಗಳ ಜೊತೆ ನಡೆದ ನೀತಿ ಆಯೋಗ್ನ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡುತ್ತಿದ್ದ ಮೋದಿ, “ಸ್ಪರ್ಧಾತ್ಮಕ ಮತ್ತು ಸಹಕಾರಿ ಒಕ್ಕೂಟತ್ವವನ್ನು (Federalism) ರಾಜ್ಯಗಳಷ್ಟೇ ಅಲ್ಲದೆ ಜಿಲ್ಲೆಗಳ ಮಧ್ಯೆಯೂ ತರಬೇಕಾದ ಸಮಯ ಬಂದಿದೆ” ಎಂದು ಅಭಿಪ್ರಾಯಪಟ್ಟರು.
“ರಾಜ್ಯ ಮತ್ತು ಕೇಂದ್ರ ಸರ್ಕಾರ ಒಟ್ಟಿಗೆ ಕೆಲಸ ಮಾಡುವುದನ್ನು ನಾವು ಕೊರೋನಾ ಸಂದರ್ಭದಲ್ಲಿ ನೋಡಿದ್ದೇವೆ. ಅದು ಯಶಸ್ವಿಯೂ ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಕೆಲಸ ಮಾಡುತ್ತಾ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಸಾಗುವುದು ಭಾರತದ ಅಭಿವೃದ್ಧಿಗೆ ಬುನಾದಿಯಾಗುತ್ತದೆ ಮತ್ತು ಸಹಕಾರ ಒಕ್ಕೂಟತ್ವವನ್ನು (Cooperative Federalism) ಇನ್ನೂ ಗಟ್ಟಿಗೊಳಿಸುತ್ತದೆ. ಇಷ್ಟೇ ಅಲ್ಲ, ಸ್ಪರ್ಧಾತ್ಮ, ಸಹಕಾರಿ ಒಕ್ಕೂಟತ್ವವನ್ನು ರಾಜ್ಯಗಳಷ್ಟೇ ಅಲ್ಲ ಜಿಲ್ಲೆಗಳಲ್ಲೂ ತರಲು ನಾವು ಪ್ರಯತ್ನಿಸಬೇಕು” ಎಂದು ಪ್ರಧಾನಿಗಳು ತಿಳಿಸಿದರು.
“ಈ ವರ್ಷದ ಬಜೆಟ್ಗೆ ಸಿಕ್ಕಿರುವ ಸ್ಪಂದನೆ ಗಮನಿಸಿದರೆ ಅದು ಈ ದೇಶದ ಭಾವನೆಯ ಸಂಕೇತ ಎನಿಸಿದೆ. ದೇಶ ಒಂದು ನಿರ್ಧಾರಕ್ಕೆ ಬಂದಿದೆ. ಈಗ ಸಮಯ ವ್ಯರ್ಥ ಮಾಡದೇ ವೇಗವಾಗಿ ಮುಂದಡಿ ಇಡಬೇಕೆಂಬ ಇರಾದೆ ಹೊಂದಿದೆ” ಎಂದು ಮೋದಿ ವಿಶ್ಲೇಷಿಸಿದರು.
ಇದನ್ನೂ ಓದಿ: ಸಂಕಷ್ಟದಲ್ಲಿ ಕರ್ನಾಟಕದ ಡೆಕನ್ ಅರ್ಬನ್ ಬ್ಯಾಂಕ್: ಗ್ರಾಹಕರಿಗೆ ಹಣ ಹಿಂಪಡೆಯಲು ಮಿತಿ ಹಾಕಿದ ಆರ್ಬಿಐ
ಸುಧಾರಣೆ ಮತ್ತು ಬದಲಾವಣೆಗಳ ಮೂಲಕ ಭಾರತವನ್ನ ತಯಾರಿಕಾ ಅಡ್ಡೆಯಾಗಿ ಮಾಡುವುದು, ಹಾಗೂ ರಫ್ತನ್ನು ಗಮನದಲ್ಲಿಟ್ಟುಕೊಂಡು ಬೆಳೆಗಳ ಮರುವಿಂಗಡಣೆ ಮಾಡುವುದು ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳನ್ನ ತರುವುದು ಪ್ರಧಾನಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಯ ಮುಖ್ಯ ಅಂಶಗಳವಾಗಿವೆ. ಕೃಷಿ, ಸೌಕರ್ಯ, ತಯಾರಿಕೆ, ಮಾನವ ಸಂಪನ್ಮೂಲ ಇತ್ಯಾದಿ ಕ್ಷೇತ್ರಗಳ ಸಮಸ್ಯೆಗಳನ್ನ ಈ ಸಭೆಯಲ್ಲಿ ಚರ್ಚಿಸಲಾಗುತ್ತಿದೆ.
ಪಶ್ಚಿಮ ಬಂಗಾಳ ಮತ್ತು ಪಂಜಾಬ್ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ ಮತ್ತು ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೊರತುಪಡಿಸಿ ಬಹುತೇಕ ಬೇರೆಲ್ಲಾ ರಾಜ್ಯಗಳ ಸಿಎಂಗಳು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ನೀತಿ ಆಯೋಗ್ ಹಲ್ಲಿಲ್ಲದ ಸಂಸ್ಥೆಯಾಗಿದೆ. ಹಣಕಾಸು ಅಧಿಕಾರ ಇಲ್ಲದ ಈ ಸಂಸ್ಥೆಯಿಂದ ರಾಜ್ಯಗಳಿಗೆ ಏನೂ ಪ್ರಯೋಜನ ಇಲ್ಲ. ಈ ಸಭೆ ನಿಷ್ಪ್ರಯೋಜಕ ಎಂದು ಮಮತಾ ಬ್ಯಾನರ್ಜಿ ಅವರು ಅಭಿಪ್ರಾಯವ್ಯಕ್ತಪಡಿಸಿ ಈ ಸಭೆಯಲ್ಲಿ ಭಾಗವಹಿಸದಿರುವ ಬಗ್ಗೆ ಕಾರಣ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ