ಅಪ್ಪ-ಅಮ್ಮ ಸ್ವಾರ್ಥಿಗಳಲ್ಲ: ಮಕ್ಕಳಿಗಾಗಿ ಹಗಲಿರುಳೆನ್ನದೇ ದುಡಿವ ಕಷ್ಟಜೀವಿಗಳು

news18
Updated:July 29, 2018, 7:48 PM IST
ಅಪ್ಪ-ಅಮ್ಮ ಸ್ವಾರ್ಥಿಗಳಲ್ಲ: ಮಕ್ಕಳಿಗಾಗಿ ಹಗಲಿರುಳೆನ್ನದೇ ದುಡಿವ ಕಷ್ಟಜೀವಿಗಳು
news18
Updated: July 29, 2018, 7:48 PM IST
ನ್ಯೂಸ್​ 18 ಕನ್ನಡ

ಮನೇಲಿ ಅಪ್ಪ-ಅಮ್ಮ ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಪಕ್ಕದ ಮನೆಯವರ ಜೊತೆಯೋ, ಗೆಳೆಯರ ಅಪ್ಪ-ಅಮ್ಮನ ಜೊತೆಗೋ ಅವರನ್ನು ಹೋಲಿಕೆ ಮಾಡುವುದು ಮಕ್ಕಳ ರೂಢಿ. ಆದರೆ, ತಮ್ಮ ಮಕ್ಕಳು ಬೇರೆಯರಿಗಿಂತ ಚೆನ್ನಾಗಿರಬೇಕು, ಅವರು ಬಯಸಿದ್ದೆಲ್ಲ ಕೊಡಿಸಬೇಕು ಅಂತ ಅಪ್ಪ-ಅಮ್ಮ ತಮ್ಮ ಇಷ್ಟ-ಕಷ್ಟಗಳನ್ನೆಲ್ಲ ಬದಿಗಿಟ್ಟು ಯೋಚಿಸುತ್ತಿರುತ್ತಾರೆ ಎಂಬುದು ಅನೇಕ ಮಕ್ಕಳಿಗೆ ಗೊತ್ತಾಗುವುದೇ ಇಲ್ಲ.

ಶ್ರೀಮಂತರಿರಲಿ, ಬಡವರೇ ಇರಲಿ ಮಕ್ಕಳ ಬಗ್ಗೆ ತಮಗೆಷ್ಟು ಸಾಧ್ಯವೋ ಅಷ್ಟು ಕಾಳಜಿ ವಹಿಸುತ್ತಾರೆ. ಕೆಲವರು ತಾವು ಪಟ್ಟ ಕಷ್ಟವನ್ನು ಮಕ್ಕಳೊಂದಿಗೆ ಹೇಳಿಕೊಂಡರೆ ಇನ್ನು ಕೆಲವರು ಮಕ್ಕಳೆದುರು ನಗುನಗುತ್ತಿದ್ದು, ಒಳಗೊಳಗೇ ನೋವು ನುಂಗಿಕೊಳ್ಳುತ್ತಾರೆ. ಅದರಲ್ಲೂ ಮಕ್ಕಳನ್ನು ಕಾಲೇಜು ಮೆಟ್ಟಿಲು ಹತ್ತಿಸುವ ವೇಳೆಗೆ ಬಹುತೇಕ ಪೋಷಕರು ಹೈರಾಣಾಗಿರುತ್ತಾರೆ.

ಈ ಕುರಿತು ಅಧ್ಯಯನ ನಡೆಸಿರುವ ಎಚ್​ಎಸ್​ಬಿಸಿ ಗ್ಲೋಬಲ್​ ಸರ್ವೆ, ಭಾರತದ ಅರ್ಧದಷ್ಟು ಉದ್ಯೋಗಸ್ಥ ಪೋಷಕರು ತಮ್ಮ ರಜೆಯನ್ನು ತ್ಯಾಗ ಮಾಡಿ ಹೆಚ್ಚುವರಿ ಕೆಲಸ ಮಾಡುತ್ತಾರೆ, ಅದರಿಂದ ಹಣವನ್ನು ಮಕ್ಕಳ ಉನ್ನತ ಶಿಕ್ಷಣಕ್ಕೆ ಬಳಸುತ್ತಾರೆ ಎಂಬ ಸಂಗತಿಯನ್ನು ಹೊರಹಾಕಿದೆ. ಈ ಸಮೀಕ್ಷೆಗಾಗಿ 10 ಸಾವಿರ ಪೋಷಕರನ್ನು ಪರಿಗಣಿಸಿದ್ದ ಸಂಸ್ಥೆ ಭಾರತವನ್ನೊಳಗೊಂಡು 15 ದೇಶಗಳ ಒಂದೂವರೆ ಸಾವಿರ ವಿದ್ಯಾರ್ಥಿಗಳನ್ನು ಕೂಡ ಒಳಗೊಂಡಿತ್ತು.

ಸುಮಾರು ಶೇ. 49ರಷ್ಟು ಪೋಷಕರು ಈ ರೀತಿ ಹೆಚ್ಚುವರಿ ಕೆಲಸ ಮಾಡಿ ಮಕ್ಕಳನ್ನು ಓದಿಸುತ್ತಾರೆ ಅಥವಾ ಎರಡೆರಡು ಕೆಲಸ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಉನ್ನತ ಶಿಕ್ಷಣ ದುಬಾರಿಯಾಗುತ್ತಿರುವ ಕಾರಣ ಮಧ್ಯಮ ಮತ್ತು ಬಡ ವರ್ಗದವರಿಗೆ ಕಾಲೇಜಿನ ಶುಲ್ಕವನ್ನು ಭರಿಸುವುದು ಸುಲಭದ ಮಾತಲ್ಲ. ತಮ್ಮ ಮಕ್ಕಳು ದೊಡ್ಡ ಕಾಲೇಜಿನಲ್ಲಿ ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕೆಂಬುದು ಪ್ರತಿಯೊಬ್ಬ ಅಪ್ಪ-ಅಮ್ಮನ ಕನಸು. ಆ ಕನಸನ್ನು ಈಡೇರಿಸಲು ಅವರು ತಮ್ಮ ಖುಷಿಯನ್ನು ತ್ಯಾಗ ಮಾಡುತ್ತಾರೆ.

ಈ ಸಮೀಕ್ಷೆಯಲ್ಲಿ ಹೊರಬಂದಿರುವ ಮಾಹಿತಿ ಪ್ರಕಾರ, ಶೇ. 60ರಷ್ಟು ಪೋಷಕರು ತಾವು ತಮ್ಮ ಮಕ್ಕಳ ಉನ್ನತ ಶಿಕ್ಷಣದ ಖರ್ಚಿಗಾಗಿ ಹಣ ಕೂಡಿಡುತ್ತಿದ್ದೇವೆ, ಅದಕ್ಕಾಗಿ ಹೋಟೆಲ್​, ಸಿನಿಮಾ, ಶಾಪಿಂಗ್​ ಮುಂತಾದ ಖರ್ಚುಗಳನ್ನು ನಿಯಂತ್ರಿಸುತ್ತಿದ್ದೇವೆ ಎಂದು ಕೂಡ ಹೇಳಿಕೊಂಡಿದ್ದಾರೆ. ಶೇ. 49ರಷ್ಟು ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಜೆಯನ್ನು ಪಡೆಯದೆ ಆ ದಿನವೂ ಕೆಲಸ ಮಾಡಿ ಹೆಚ್ಚುವರಿ ಸಂಬಳ ಪಡೆಯುತ್ತಿದ್ದೇವೆ, ಮಾಮೂಲಿ ಉದ್ಯೋಗದ ಜೊತೆಗೆ ಬೇರೊಂದು ಉದ್ಯೋಗವನ್ನೂ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
First published:July 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...