ಕೋಲ್ಕತ್ತಾ (ಜೂನ್ 23); ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಆರಂಭವಾಗು ವುದಕ್ಕೆ ಒಂದು ವರ್ಷದ ಮುಂಚೆಯೇ ಬಿಜೆಪಿ ನಾಯಕರು ಬಂಗಾಳದಲ್ಲಿ ಪಕ್ಷಾಂತರ ಪರ್ವ ಆರಂಭಿಸಿದ್ದರು. ಈ ವೇಳೆ ನೂರಾರು ಟಿಎಂಸಿ ಕಾರ್ಯಕರ್ತರು ಮತ್ತು ನಾಯಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೂ, ಆ ಚುನಾವಣೆ ಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಸಾಧ್ಯವಾಗಿಲ್ಲ. ಪರಿಣಾಮ ಇದೀಗ ದಂಡು ದಂಡಾಗಿ ಎಲ್ಲಾ ಕಾರ್ಯಕರ್ತರು ಬಿಜೆಪಿಯಿಂದ ಟಿಎಂಸಿಗೆ ಮರಳುತ್ತಿದ್ದಾರೆ. ಅದರಲ್ಲೂ ಟಿಎಂಸಿಗೆ ಮರಳುವ ಮುನ್ನ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸುಮಾರು 200 ಬಿಜೆಪಿ ಕಾರ್ಯಕರ್ತರು ತಲೆ ಬೋಳಿಸಿ ಗಂಗಾ ಜಲದಿಂದ ತಮ್ಮನ್ನು ಶುದ್ದೀಕರಿಸಿ ತೃಣಮೂಲ ಕಾಂಗ್ರೆಸ್‌ಗೆ ಮರಳಿದ ಘಟನೆ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಟಿಎಂಸಿಯಲ್ಲೇ ಇದ್ದ ಅವರು ಚುನಾವಣೆಯ ಸಮಯದಲ್ಲಿ ಬಿಜೆಪಿಗೆ ಸೇರಿದ್ದರು. ಇದೀಗ ಅವರು ತಾವು ಬಿಜೆಪಿಗೆ ಸೇರಿರುವುದು ತಪ್ಪು ಎಂದು ಪ್ರತಿಪಾದಿಸಿ ಟಿಎಂಸಿಗೆ ಮರಳಿದ್ದಾರೆ ಎನ್ನಲಾಗಿದೆ.
ಬಿಜೆಪಿಗೆ ಸೇರಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಅವರು ತಲೆ ಬೋಳಿಸಿಕೊಂಡು, ಗಂಗಾಜಲವನ್ನು ಸಿಂಪಡಿಸಿ ತಮ್ಮನ್ನು ತಾವು ಶುದ್ದೀಕರಿಸಿ, ಅರಂಬಾಗ್ ಸಂಸದ ಅಪರೂಪಾ ಪೋದ್ದಾರ್ ಅವರ ಸಮ್ಮುಖದಲ್ಲಿ ಟಿಎಂಸಿ ಧ್ವಜವನ್ನು ಹಿಡಿದು ಪಕ್ಷಕ್ಕೆ ಮರಳಿದ್ದಾರೆ. ಈ ಸಂಬಂಧ ಬಿಡುಗಡೆಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅರಂಬಾಗ್‌ನಲ್ಲಿರುವ ಬಡವರಿಗೆ ಉಚಿತ ಆಹಾರವನ್ನು ನೀಡುವ ನಿಟ್ಟಿನಲ್ಲಿ ಪಕ್ಷವು ಮಂಗಳವಾರ ಕಾರ್ಯಕ್ರಮವನ್ನು ಆಯೋಜಿಸಿತ್ತು ಎಂದು ಟಿಎಂಸಿ ಸಂಸದ ಅಪರೂಪಾ ಪೋದ್ದಾರ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಸಂದರ್ಭದಲ್ಲಿ ದಲಿತ ಸಮುದಾಯದ ಕೆಲವರು ಬಂದು ಬಿಜೆಪಿಗೆ ಸೇರುವ ಮೂಲಕ ತಪ್ಪು ಮಾಡಿದ್ದೇವೆ ಎಂದು ಹೇಳಿದ್ದಾರೆ. ಅವರು ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿ ನಂತರ ಮತ್ತೆ ಟಿಎಂಸಿಗೆ ಸೇರಲು ಅವರು ಬಯಸಿದ್ದರು ಎಂದು ಅಪರೂಪಾ ಪೋದ್ದಾರ್ ಹೇಳಿದ್ದಾರೆ.
ಟಿಎಂಸಿ ಸೇರುತ್ತಿರುವ ಹಲವು ಬಿಜೆಪಿ ಕಾರ್ಯಕರ್ತರು
ಇತ್ತೀಚೆಗೆ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಜಯಗಳಿಸಿದಾಗಿನಿಂದ, ಪಶ್ಚಿಮ ಬಂಗಾಳದ ಹಲವಾರು ಜಿಲ್ಲೆಗಳಲ್ಲಿ ನೂರಾರು ಕಾರ್ಯಕರ್ತರು ಪಕ್ಷಕ್ಕೆ ಮರಳುತ್ತಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಪಶ್ಚಿಮ ಬಂಗಾಳದ ಬಿರ್ಭಂನಲ್ಲಿ 50 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ತಮ್ಮನ್ನು ಟಿಎಂಸಿಗೆ ಸೇರಿಸಿಕೊಳ್ಳಬೇಕು ಎಂದು ಪಕ್ಷದ ಕಚೇರಿಯ ಹೊರಗೆ ಧರಣಿ ನಡೆಸಿದ್ದರು. ನಂತರ ಅವರನ್ನು ಟಿಎಂಸಿಗೆ ಸೇರಿಸಿಕೊಳ್ಳಲಾಯಿತು. ಈ ಕಾರ್ಯಕರ್ತರು ತಾವು ಪಕ್ಷ ಬದಲಾಯಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದರು.
ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ಭುಗಿಲೆದ್ದ ಹಿಂಸಾಚಾರದ ಪರಿಣಾಮವಾಗಿ ಪಕ್ಷದ ಕಾರ್ಯಕರ್ತರು ಟಿಎಂಸಿಗೆ ವಲಸೆ ಹೋಗುತ್ತಿದ್ದಾರೆ ಎಂದು ಬಿಜೆಪಿ ಬಣ್ಣಿಸಿದೆ. ಈ ಕಾರ್ಯಕರ್ತರು ತಮ್ಮ ಮತ್ತು ತಮ್ಮ ಕುಟುಂಬದ ಭಯಕ್ಕಾಗಿ ಮತ್ತೆ ಆಡಳಿತ ಪಕ್ಷಕ್ಕೆ ಸೇರಲು ಬಯಸುತ್ತಿದ್ದಾರೆ ಎಂದು ಅದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ