ಹೊಸದಿಲ್ಲಿ: ಟರ್ಕಿಯಲ್ಲಿ (Turkey) ಒಮ್ಮೆಲೇ ಮೂರು ಭೂಕಂಪಗಳು ಸಂಭವಿಸಿದ ಕಾರಣ ಆ ದೇಶ ಅಕ್ಷರಶಃ ಸಾವಿನ ಮನೆಯಂತಾಗಿತ್ತು. ಎಲ್ಲಿ ನೋಡಿದರಲ್ಲೂ ಮನೆಗಳು ಉರುಳಿ ಬಿದ್ದಿರೋದು, ಕಟ್ಟಡಗಳು ಧರಾಶಾಹಿಯಾಗಿರೋದು, ಸಾವಿರಾರು ಜನರ ಭೀಕರ ಮರಣ, ಕೈ ಕಾಲು ಮುರಿದುಕೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದವರನ್ನು ಕಂಡು ಇಡೀ ವಿಶ್ವವೇ ಮರುಗಿತ್ತು. ಈ ವರೆಗೆ ಸುಮಾರು 45 ಸಾವಿರಕ್ಕೂ ಹೆಚ್ಚು ಜನ ಟರ್ಕಿಯಲ್ಲಿ ಮೃತಪಟ್ಟಿದ್ದು, ಭೂಕಂಪದಿಂದ (Turkey Earthquake) ಸಂತ್ರಸ್ತಗೊಂಡ ಟರ್ಕಿ ದೇಶಕ್ಕೆ ವಿಶ್ವದಾದ್ಯಂತ ಅನೇಕ ದೇಶದಗಳು ನೆರವಿನ ಹಸ್ತ ಬಂದಿದೆ.
ಇತ್ತ ಭಾರತೀಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಟರ್ಕಿಯ ಜನರ ರಕ್ಷಣೆಗೆಂದು ತೆರಳಿತ್ತು. ಆದರೆ ರಕ್ಷಣಾ ತಂಡ ಟರ್ಕಿಗೆ ಕಾಲಿಡುತ್ತಿದ್ದಂತೆ ಅವರಿಗೆ ಕೇವಲ ಸವಾಲುಗಳೇ ಎದುರಾಗಿದೆ. ಒಂದು ಕಡೆ ಸಮಸ್ಯೆಯಲ್ಲಿ ಸಿಲುಕಿದ ಜನರನ್ನು ರಕ್ಷಣೆ ಮಾಡಲೇಬೇಕಾದ ಅನಿವಾರ್ಯತೆಯಾದರೆ ಮತ್ತೊಂದು ಕಡೆ ತಿನ್ನಲು ಸರಿಯಾದ ಆಹಾರ ಸಿಗದೆ, ಸ್ನಾನ ಮಾಡಲು ನೀರೂ ಇಲ್ಲದೆ ಬರೀ ಸವಾಲುಗಳನ್ನೇ ಎದುರಿಸಿದೆ. ಇದರಿಂದ ಎನ್‌ಡಿಆರ್‌ಎಫ್ ಸಿಬ್ಬಂದಿ ಬಳಲಿದ್ದಾರೆ.
18 ತಿಂಗಳ ಅವಳಿ ಮಕ್ಕಳನ್ನು ಬಿಟ್ಟು ಹೋಗಿದ್ದ ವೈದ್ಯ!
ಇದರ ಜೊತೆಗೆ ತನ್ನ 18 ತಿಂಗಳ ಅವಳಿ ಮಕ್ಕಳನ್ನು ಭಾರವಾದ ಮನಸ್ಸಿನಲ್ಲಿ ಬಿಟ್ಟು ಟರ್ಕಿ ಜನರ ನೆರವಿಗೆ ಹೋದ ವೈದ್ಯಾಧಿಕಾರಿಯೊಬ್ಬರು ತಮ್ಮ ಕರಾಳ ಅನುಭವವನ್ನ ಬಿಚ್ಚಿಟ್ಟಿದ್ದಾರೆ. ಭೂಕಂಪ ಪೀಡಿತ ಟರ್ಕಿ ಜನರ ನೆರವಿಗೆ ಸ್ಪಂದಿಸಿ ಭಾರತಕ್ಕೆ ಮರಳಿರುವ ವೈದ್ಯಾಧಿಕಾರಿ, ‘ರಾತ್ರೋ ರಾತ್ರಿ 140 ಪಾಸ್ಪೋರ್ಟ್ಗಳನ್ನು ಸಿದ್ಧಪಡಿಸಲು ಅಧಿಕಾರಿಗಳು ಸಾವಿರಾರು ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದರು. ನಾವು ಟರ್ಕಿಯಲ್ಲಿ ಎಷ್ಟು ಸಂಕಷ್ಟವನ್ನು ಎದುರಿಸಿದೆವು ಎಂದರೆ 10 ದಿನಗಳ ಕಾಲ ಸ್ನಾನವೇ ಮಾಡಿರಲಿಲ್ಲ. ಸರಿಯಾಗಿ ಊಟ ತಿಂಡಿ ನಿದ್ದೆಯೂ ಸಿಕ್ಕಿರಲಿಲ್ಲ. ಹಾಗಿದ್ದರೂ ಕೂಡ ನಾವು ಮತ್ತಷ್ಟು ಜೀವಗಳನ್ನು ಉಳಿಸಬಹುದಿತ್ತು ಎಂದು ಮನಸ್ಸು ಹೇಳುತ್ತಿತ್ತು ಎಂದು ವೈದ್ಯಾಧಿಕಾರಿ ಹೇಳಿದ್ದಾರೆ.
ನೋವಿನಲ್ಲೂ ಪ್ರೀತಿ ತೋರಿಸಿದ ಟರ್ಕಿ ಜನರು
ಎನ್‌ಡಿಆರ್‌ಎಫ್‌ನ 152 ಸದಸ್ಯರ ಮೂರು ತಂಡದ ಜೊತೆಗೆ ಆರು ಶ್ವಾನಗಳು ಟರ್ಕಿ ದೇಶದಲ್ಲಾದ ಭೂಕಂಪ ಪೀಡಿತರ ರಕ್ಷಣೆಗೆ ಹೋಗಿತ್ತು. ಭೂಕಂಪಕ್ಕೆ ತುತ್ತಾದ ಜನರನ್ನು ರಕ್ಷಣೆ ಮಾಡಿದ ಬಳಿಕ ಟರ್ಕಿ ದೇಶದ ಜನರ ಪ್ರೀತಿ ವಾತ್ಸಲ್ಯ ಮತ್ತು ಜೀವ ಉಳಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ ಪರಿಗೆ ಎನ್‌ಡಿಆರ್‌ಎಫ್ ಸಿಬ್ಬಂದಿ ಭಾವುಕರಾಗಿದ್ದಾರೆ. ಅಲ್ಲದೇ ನಮಗೆ ಸಸ್ಯಾಹಾರಿ ಆಹಾರ ಬೇಕಿದ್ದರಿಂದ ಅಲ್ಲಿನ ಜನರು ತಮ್ಮ ಮನೆಯ ಸದಸ್ಯರನ್ನು ಕಳೆದುಕೊಂಡ ಆ ನೋವಿನ ಮಧ್ಯೆಯೂ ವೆಜ್ ಆಹಾರವನ್ನು ನೀಡಿದ್ದಾರೆ ಎಂದು ವೈದ್ಯಾಧಿಕಾರಿ ಹೇಳಿದ್ದಾರೆ.
ಇನ್ನು ಟರ್ಕಿ ಜನರ ನೆರವಿಗೆ ತೆರಳಿದ್ದ ರಕ್ಷಣಾ ತಂಡಕ್ಕೆ ಆಪರೇಷನ್ ದೋಸ್ತ್ ಎಂದು ಹೆಸರಿಡಲಾಗಿತ್ತು. ಫೆಬ್ರವರಿ 7 ರಂದು ಆರಂಭಗೊಂಡ ಭಾರತ ತಂಡದ ಸದಸ್ಯರ ರಕ್ಷಣಾ ಕಾರ್ಯ ಇಬ್ಬರು ಮಕ್ಕಳನ್ನು ರಕ್ಷಿಸುವುದರ ಜೊತೆಗೆ ಉರುಳಿಬಿದ್ದ ಕಟ್ಟಡದ ಒಳಗಿಂದ 85 ಶವಗಳನ್ನು ಹೊರತೆಗೆಯಲಾಗಿದೆ. ಟರ್ಕಿ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಭಾರತೀಯ ಎನ್‌ಡಿಆರ್‌ಎಫ್ ತಂಡಕ್ಕೆ ಟರ್ಕಿ ದೇಶದ ಅನೇಕ ಪ್ರಜೆಗಳು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ