ಪುಣೆ: ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನೆ ಪಕ್ಷ (Shiv Sena Party) ತಮ್ಮ ಪಾರ್ಟಿಯ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಕಳೆದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಎನ್‌ಸಿಪಿ ಮುಖ್ಯಸ್ಥ (NCP) ಶರದ್ ಪವಾರ್ (Sharad Pawar) ಅವರು ಪ್ರತಿಕ್ರಿಯೆ ನೀಡಿದ್ದು, ಇದು ಪಕ್ಷಕ್ಕೆ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ, ಜನರು ಹೊಸ ಚಿಹ್ನೆಯನ್ನು ಸ್ವೀಕಾರ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಚುನಾವಣಾ ಆಯೋಗವು ಶಿವಸೇನೆ ಪಕ್ಷದ ಚಿಹ್ನೆಯನ್ನು ಏಕನಾಥ್ ಶಿಂಧೆ ಬಣಕ್ಕೆ ನೀಡುವಂತೆ ಆದೇಶ ನೀಡಿದ ನಂತರ ಈ ವಿಚಾರವಾಗಿ ಮಾತನಾಡಿರುವ ಶರದ್ ಪವಾರ್, ಚುನಾವಣಾ ಆಯೋಗದ ನಿರ್ಧಾರವನ್ನು ಒಪ್ಪಿಕೊಂಡು ಹೊಸ ಚಿಹ್ನೆಯನ್ನು ತೆಗೆದುಕೊಳ್ಳುವಂತೆ ಉದ್ಧವ್ ಠಾಕ್ರೆ ಅವರಿಗೆ ಸಲಹೆ ನೀಡಿದ್ದಾರೆ.
'ದೊಡ್ಡ ಪರಿಣಾಮ ಬೀರುವುದಿಲ್ಲ'
ಇದು ಚುನಾವಣಾ ಆಯೋಗದ ನಿರ್ಧಾರ ಆಗಿರುವುದರಿಂದ ಒಮ್ಮೆ ನಿರ್ಧಾರ ನೀಡಿದ ನಂತರ ಯಾವುದೇ ಚರ್ಚೆ ಸಾಧ್ಯವಿಲ್ಲ ಎಂದಿರುವ ಶರದ್ ಪವಾರ್, ಆಯೋಗದ ತೀರ್ಪನ್ನು ಸ್ವೀಕರಿಸಿ ಹೊಸ ಚಿಹ್ನೆ ತೆಗೆದುಕೊಳ್ಳಿ, ಹಳೆಯ ಚಿಹ್ನೆಯನ್ನು ಕಳೆದುಕೊಂಡಿರುವುದರಿಂದ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ಜನರು ಹೊಸ ಚಿಹ್ನೆಯನ್ನು ಸ್ವೀಕರಿಸುತ್ತಾರೆ. ಈ ವಿಚಾರ ಮುಂದಿನ 15-30 ದಿನಗಳವರೆಗೆ ಚರ್ಚೆಯಲ್ಲಿ ಉಳಿಯುತ್ತದೆ, ಅಷ್ಟೆ ಎಂದು ಪವಾರ್ ಹೇಳಿದರು.
ಇದನ್ನೂ ಓದಿ: Shiv Sena Symbol Row: ಶಿಂಧೆ ಬಣದ ಪಾಲಾಯ್ತು ಶಿವಸೇನೆ ಬಿಲ್ಲು-ಬಾಣ! ಉದ್ಧವ್ ಠಾಕ್ರೆಗೆ ಹಿನ್ನಡೆ, ಸಿಎಂ ಏಕನಾಥ್‌ಗೆ ಗೆಲುವು
'ಕಾಂಗ್ರೆಸ್‌ಗೂ ಸಮಸ್ಯೆಯಾಗಿತ್ತು'
ಈ ಹಿಂದೆ ಕಾಂಗ್ರೆಸ್ ಪಕ್ಷ ಎರಡು ಹೋರಿಗಳ ಜೊತೆಗೆ ಕೈಯಲ್ಲಿ ನೊಗ ಹಿಡಿದುಕೊಂಡ ಚಿಹ್ನೆಯನ್ನು ಬದಲಾಯಿಸಬೇಕಾದ ಅನಿವಾರ್ಯತೆ ಎದುರಾಗಿದ್ದ ಸನ್ನಿವೇಶವನ್ನು ಸ್ಮರಿಸಿದ ಶರದ್ ಪವಾರ್, ಇಂದಿರಾಗಾಂಧಿ ಅವರು ಕೂಡ ಈ ಪರಿಸ್ಥಿತಿಯನ್ನು ಎದುರಿಸಿದ್ದು ನನಗೆ ನೆನಪಿದೆ. ಕಾಂಗ್ರೆಸ್‌ನಲ್ಲಿ ನೊಗವಿರುವ ಎರಡು ಎತ್ತುಗಳ ಚಿಹ್ನೆ ಇತ್ತು, ನಂತರ ಅವರು ಅದನ್ನು ಕಳೆದುಕೊಳ್ಳಬೇಕಾದ ಸನ್ನಿವೇಶ ಎದುರಾಯಿತು. ಆಗ ಹೊಸ ಚಿಹ್ನೆಯಾಗಿ 'ಕೈ' ಅಳವಡಿಸಿಕೊಂಡರು. ಜನರು ಅದನ್ನು ಒಪ್ಪಿಕೊಂಡರು ಕೂಡ. ಹಾಗೆಯೇ ಕಾಂಗ್ರೆಸ್‌ನ ಹೊಸ ಚಿಹ್ನೆಯನ್ನು ಜನರು ಸ್ವೀಕರಿಸಿದ ರೀತಿಯಲ್ಲಿಯೇ ಉದ್ಧವ್ ಠಾಕ್ರೆ ಬಣದ ನೂತನ ಚಿಹ್ನೆಯನ್ನು ಕೂಡ ಜನರು ಸ್ವೀಕಾರ ಮಾಡಲಿದ್ದಾರೆ ಎಂದು ಭರವಸೆ ತುಂಬಿದರು.
ಸುಪ್ರೀಂ ಕೋರ್ಟ್ ಮೊರೆ
ಶಿವಸೇನೆ ಪಕ್ಷದ ಚಿಹ್ನೆಯನ್ನು ಪಡೆಯುವ ವಿಚಾರವಾಗಿ ಪಕ್ಷ ಇಬ್ಭಾಗವಾದಾಗಿನಿಂದ ಉದ್ಧವ್ ಠಾಕ್ರೆ ಬಣ ಮತ್ತು ಏಕನಾಥ್ ಶಿಂಧೆ ಬಣದ ನಡುವೆ ಪರಸ್ಪರ ತಿಕ್ಕಾಟ ನಡೆಯುತ್ತಿತ್ತು. ಶುಕ್ರವಾರ ಕೇಂದ್ರ ಚುನಾವಣಾ ಆಯೋಗ ಶಿವಸೇನೆ ಪಕ್ಷದ ‘ಬಿಲ್ಲು ಮತ್ತು ಬಾಣ’ದ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡುವಂತೆ ನೀಡುವಂತೆ ಸೂಚನೆ ನೀಡಿತ್ತು. ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸಿದ ಏಕನಾಥ್ ಶಿಂಧೆ ಬಣ ಇದು ನಿಜವಾದ ಶಿವಸೇನೆ ಎಂದು ಗುರುತಿಸುವ ನಿರ್ಧಾರ ಎಂದು ಹೇಳಿದರೆ, ಉದ್ಧವ್ ಠಾಕ್ರೆ ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Maharashtra: ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಬಣಕ್ಕೆ ಹೊಸ ಹೆಸರು, ಚಿಹ್ನೆ ಕೊಟ್ಟ ಚುನಾವಣಾ ಆಯೋಗ!
'ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ಆಗಿದೆ'
ಶಿವಸೇನೆಯ ‘ಬಿಲ್ಲು ಮತ್ತು ಬಾಣ’ದ ಚಿಹ್ನೆ ಏಕನಾಥ ಶಿಂಧೆ ಬಣದ ಪಾಲಾಗುತ್ತಿದ್ದಂತೆ ಶಿಂಧೆ ಬಣದ ಕಾರ್ಯಕರ್ತರು ನಾಸಿಕ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದೆ. ಅತತ ಚುನಾವಣಾ ಆಯೋಗವು ಭಾರೀ ಆತುರದಲ್ಲಿದೆ ಎಂದು ಉದ್ಧವ್ ಠಾಕ್ರೆ ಬಣ ಆರೋಪಿಸಿದೆ, ಅಲ್ಲದೇ, ಈ ನಿರ್ಧಾರವು ‘ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ’ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದೆ.
ಚುನಾವಣಾ ಸಮಿತಿಯ ನಿರ್ಧಾರವನ್ನು ‘ಪ್ರಜಾಪ್ರಭುತ್ವದ ಕೊಲೆ’ ಎಂದು ಕರೆದಿರುವ ಉದ್ಧವ್ ಠಾಕ್ರೆ, ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ