Navjot Singh Sidhu Resignation: ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು: ಮುಂದುವರೆದ ಕಗ್ಗಂಟು

Navjot Singh Sidhu resigns as Punjab Congress President: ಮುಂದುವರೆದ ರಾಜಕೀಯ ಬೆಳವಣಿಗೆಯಲ್ಲಿ, ಪಂಜಾಬ್​ ಕಾಂಗ್ರೆಸ್​ ಪ್ರದೇಶ ಸಮಿತಿ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ

ನವಜೋತ್​ ಸಿಂಗ್​ ಸಿಧು ರಾಜೀನಾಮೆ

ನವಜೋತ್​ ಸಿಂಗ್​ ಸಿಧು ರಾಜೀನಾಮೆ

 • Share this:
  ಅಮೃತ್​ಸರ್​: ಪಂಜಾಬ್​ ರಾಜ್ಯದ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿರುವ ಹೊತ್ತಿನಲ್ಲೇ ಪಕ್ಷದೊಳಗಿನ ಆಂತರಿಕ ಸಮರ ತಾರಕಕ್ಕೇರಿದ್ದು, ಈಗಾಗಲೇ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ್ದರು. ಇದೀಗ, ಮುಂದುವರೆದ ರಾಜಕೀಯ ಬೆಳವಣಿಗೆಯಲ್ಲಿ, ಪಂಜಾಬ್​ ಕಾಂಗ್ರೆಸ್​ ಪ್ರದೇಶ ಸಮಿತಿ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬಗ್ಗೆ ಸಿಧು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಟ್ವೀಟ್​ ಮಾಡಿ ರಾಜೀನಾಮೆಯನ್ನು ಅಧಿಕೃತಗೊಳಿಸಿದ್ದಾರೆ. ಕಾಂಗ್ರೆಸ್​ ರಾಷ್ಟ್ರೀಯಾಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಸಲ್ಲಿಸಿರುವ ಸಿಧು, ಆಮ್​ ಆದ್ಮಿ ಪಕ್ಷದ ಕಡೆ ಮುಖ ಮಾಡಿದ್ದಾರ ಎಂಬ ಪ್ರಶ್ನೆ ಎದ್ದಿದೆ. 

  ನವಜೋತ್​ ಸಿಂಗ್​ ಸಿಧು ಮತ್ತು ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ನಡುವಿನ ಜಟಾಪಟಿಯಿಂದ, ಅಮರಿಂದರ್ ಸಿಂಗ್​ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಚರಂಜೀತ್​ ಸಿಂಗ್ ಚನ್ನಿಯವ​ರನ್ನು ಮುಖ್ಯಮಂತ್ರಿಯಾಗಿ ಕಾಂಗ್ರೆಸ್​ ಹೈಕಮಾಂಡ್​ ನೇಮಕ ಮಾಡಿತ್ತು. ಅಮರಿಂದರ್ ಉತ್ತರಾಧಿಕಾರಿಯಾಗಿ, ಮುಖ್ಯಮಂತ್ರಿ ಸ್ಥಾನದ ಮೇಲೆ ಸಿಧು ಕಣ್ಣಿಟ್ಟಿದ್ದರು. ಆದರೆ ಚರಂಜೀತ್​ ಸಿಂಗ್​ ಚನ್ನಿಯನ್ನು ಕಾಂಗ್ರೆಸ್​ ಆಯ್ಕೆ ಮಾಡಿತ್ತು. ಇದಾದ ನಂತರ ಮಂತ್ರಿ ಮಂಡಲ ರಚನೆಯಲ್ಲಿ ಸಿಧು ಬೆಂಬಲಿಗರಿಗೆ ಉತ್ತಮ ಖಾತೆ ನೀಡದೇ ಇರುವುದೇ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.

  ಮಂತ್ರಿಮಂಡಲ ರಚನೆ ಗುದ್ದಾಟ:

  ಚರಂಜೀತ್​ ಸಿಂಗ್​ ಚನ್ನಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ, ಮಂತ್ರಿ ಮಂಡಲ ರಚನೆಯಾಗಿತ್ತು. ರಾಣಾ ಗುರ್ಜೀತ್​ ಸಿಂಗ್​ರಿಗೆ ಮಂತ್ರಿ ಸ್ಥಾನ ನೀಡಲು ಮುಂದಾಗಿದ್ದು, ಕೆಲ ಶಾಸಕರಿಗೆ ಇಷ್ಟವಿರಲಿಲ್ಲ. ಹಲವು ಶಾಸಕರು, ಈ ಬಗ್ಗೆ ತಮ್ಮ ಅಸಮಾಧಾನವನ್ನು ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ಅವರಿಗೆ ಪತ್ರ ಮುಖೇನ ತಿಳಿಸಿದ್ದರು. ರಾಣಾ ಗುರ್ಜೀತ್​ ಸಿಂಗ್​ ವಿರುದ್ಧ ಭ್ರಷ್ಟಾಚಾರದ ಆರೋಪಗಳಿದ್ದು, ಯಾವುದೇ ಕಾರಣಕ್ಕೂ ಅವರಿಗೆ ಮಂತ್ರಿ ಸ್ಥಾನ ನೀಡಬಾರದು ಎಂಬುದು ಶಾಸಕರ ಅಭಿಪ್ರಾಯವಾಗಿತ್ತು. ಇದನ್ನು ಸಿಧು ಚರಂಜೀತ್​ ಸಿಂಗ್​ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರಾದರೂ, ಪ್ರಯೋಜನವಾಗಲಿಲ್ಲ. ಈ ಕಾರಣಕ್ಕಾಗಿ ಇಬ್ಬರ ನಡುವೆ ಶೀತಲ ಸಮರ ಆರಂಭವಾಗಿತ್ತು.

  ಚರಂಜೀತ್​ ಸಿಂಗ್​ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ, ಸಿಧು ಪಂಜಾಬ್​ನ ಸೂಪರ್​ ಸಿಎಂ ಆಗಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಧಿಕಾರ ಸ್ವೀಕರಿಸಿದ ನಂತರ ಸಿಧು ಮಾತನ್ನು ಚರಂಜೀತ್​ ಸಿಂಗ್​ ಕೇಳುವುದನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ಒಂದರ್ಥದಲ್ಲಿ ಚರಂಜೀತ್​ ಮುಖ್ಯಮಂತ್ರಿ ಗದ್ದುಗೆಗೇರಲು ಸಿಧುವೇ ಕಾರಣ. ಯಾಕೆಂದರೆ, ಸಿಧು ಜತೆ ಜಗಳದ ಕಾರಣದಿಂದಾಗಿಯೇ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ರಾಜೀನಾಮೆ ನೀಡಿದ್ದರು.

  ಇದನ್ನೂ ಓದಿ: ಬಿಜೆಪಿ ಸೇರ್ತಾರಾ ಮಾಜಿ ಸಿಎಂ ಅಮರೀಂದರ್ ಸಿಂಗ್? ಶಾ- ನಡ್ಡಾ ಭೇಟಿ ಸಾಧ್ಯತೆ

  ಈಗ ನವಜೋತ್​ ಸಿಂಗ್​ ಸಿಧು ರಾಜೀನಾಮೆ ನೀಡಿರುವುದು ಕಾಂಗ್ರೆಸ್​ ಹೈಕಮಾಂಡ್​ ಹೊಸ ತಲೆನೋವಾಗಿ ಪರಿಣಮಿಸಿದೆ. ಸಿಧು ಮುಂದಿನ ನಡೆ ಏನು, ಕಾಂಗ್ರೆಸ್​ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿ ಹೊರ ನಡೆಯುತ್ತಾರ? ಅಥವಾ ಕಾಂಗ್ರೆಸ್​ ಶಾಸಕರಾಗಿ ಮುಂದುವರೆಯುತ್ತಾರ? ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕಿದೆ. ಹೈಕಮಾಂಡ್​ ಸಿಧು ಮತ್ತು ಅಮರಿಂದರ್​ ಸಿಂಗ್​ ಸಮರದಲ್ಲಿ, ಸಿಧು ಪರ ನಿಂತಿತ್ತು. ಆದರೆ ಈಗ, ಸಿಧು ಮತ್ತೆ ಬಂಡಾಯದ ಕಹಳೆ ಮೊಳಗಿಸಿರುವುದು, ಕಾಂಗ್ರೆಸ್​ಗೆ ದೊಡ್ಡ ತಲೆನೋವಾಗಿದೆ. ಸಿಧುರನ್ನು ಸಮರ್ಥಿಸಿ, ಅಮರಿಂದರ್​ ಸಿಂಗ್​ ವಿರುದ್ಧ ನಿರ್ಣಯ ಕೈಗೊಂಡ ಕಾಂಗ್ರೆಸ್​ ಮುಖಂಡರಿಗೆ, ಸಿಧು ನಡೆ ನುಂಗಲಾರದ ತುತ್ತಾಗಿದೆ ಎನ್ನಲಾಗುತ್ತಿದೆ.

  ಇದನ್ನೂ ಓದಿ: ಚುನಾವಣೆಗೆ 4 ತಿಂಗಳಿರುವಂತೆ ಮನೆಯೊಂದು ಮೂರು ಬಾಗಿಲಿನಂತಾದ ಪಂಜಾಬ್ ಕಾಂಗ್ರೆಸ್ ಪರಿಸ್ಥಿತಿ!

  ಸಿಧು ತಮ್ಮ ರಾಜೀನಾಮೆ ಪತ್ರದಲ್ಲಿ ಪಂಜಾಬ್​ನ ಭವಿಷ್ಯಕ್ಕೆ ತೊಂದರೆಯಾಗುವುದನ್ನು ತಾವು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ. ಇದರ ಜೊತೆಗೆ ಪ್ರದೇಶಿಕ ಅಸ್ಮಿತೆಯನ್ನು ಸಿಧು ಪ್ರದರ್ಶಿಸಿದ್ದಾರೆ. ಈಗಲೂ ಸಿಧು ಪಾಳಯದಲ್ಲಿ ಅಧಿಕ ಶಾಸಕರಿದ್ದಾರೆ ಎನ್ನಲಾಗಿದ್ದು, ಮುಂದೆ ಅವರ ಬೆಂಬಲಿಗರೂ ರಾಜೀನಾಮೆ ನೀಡಲಿದ್ದಾರ. ಆ ಮೂಲಕ ಪಂಜಾಬ್​ ಕಾಂಗ್ರೆಸ್ಸಿನಲ್ಲೂ ರಾಜೀನಾಮೆ ಪರ್ವ ಆರಂಭವಾಗಲಿದೆಯಾ ಎಂಬುದನ್ನು ಕಾದು ನೋಡಬೇಕು.

  ಬಿಜೆಪಿಯತ್ತ ಕ್ಯಾಪ್ಟನ್​?:

  ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕ್ಯಾಪ್ಟನ್ ಅಮರೀಂದರ್ ಸಿಂಗ್ (Amarinder Singh) ಮಂಗಳವಾರ ಸಂಜೆ ದೆಹಲಿ ತಲುಪಲಿದ್ದಾರೆ. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ  (Union Home Minister Amit Shah), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (BJP president JP Nadda) ಅವರನ್ನ ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ಯಾಪ್ಟನ್ ದೆಹಲಿ ಪ್ರಯಾಣದ ಬೆನ್ನಲ್ಲೇ ಪಂಜಾಬ್ ಕಾಂಗ್ರೆಸ್ ನಲ್ಲಿ ರಾಜಕೀಯ ಚರ್ಚೆಗಳು ತೀವ್ರಗೊಂಡಿವೆ. ಇಬ್ಬರು ನಾಯಕರ ಭೇಟಿ ಬಳಿಕ ಅಮರೀಂದರ್ ಸಿಂಗ್ ಬಿಜೆಪಿ ಸೇರುವ ಅಧಿಕೃತ ಹೇಳಿಕೆ ನೀಡಬಹುದು ಎಂದು ಊಹಿಸಲಾಗಿದೆ. ರಾಜಕೀಯ ವಿಶ್ಲೇಷಕರಿಂದ ವಿರೋಧ ಪಕ್ಷಗಳೆಲ್ಲ ಕ್ಯಾಪ್ಟನ್ ಮುಂದಿನ ನಡೆ ಏನು ಇರಬಹುದು ಎಂದು ಲೆಕ್ಕ ಹಾಕುತ್ತಿವೆ.
  Published by:Sharath Sharma Kalagaru
  First published: