Punjab Politics| ನವಜೋತ್ ಸಿಧು 'ಪಂಜಾಬ್‌ ರಾಜಕೀಯದ ರಾಖಿ ಸಾವಂತ್'; ಎಎಪಿ ನಾಯಕ ರಾಘವ್ ಚಡ್ಡಾ ಗೇಲಿ

ದೆಹಲಿಯ ಅರವಿಂದ ಕೇಜ್ರಿವಾಲ್ ಸರ್ಕಾರ ಈ ರೈತ ಹೋರಾಟವನ್ನು ಬಹಿರಂಗವಾಗಿ ಬೆಂಬಲಿಸಿ ಇಡೀ ದೇಶದ ಗಮನ ಸೆಳೆದಿತ್ತು. ಆದರೆ, ಈ ವಿಚಾರದಲ್ಲಿ ಪಂಜಾಬ್ ಕಾಂಗ್ರೆಸ್​ ಮುಖಂಡ ನವಜೋತ್​ ಸಿಂಗ್ ಸಿಧು ಕೇಜ್ರಿವಾಲ್ ನಡೆಯನ್ನು ವಿರೋಧಿಸಿದ್ದರು.

ಎಎಪಿ ನಾಯಕ ರಾಘವ್ ಚಡ್ಡಾ- ನವಜೋತ್ ಸಿಂಗ್ ಸಿಧು.

ಎಎಪಿ ನಾಯಕ ರಾಘವ್ ಚಡ್ಡಾ- ನವಜೋತ್ ಸಿಂಗ್ ಸಿಧು.

 • Share this:
  ನವ ದೆಹಲಿ; ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಒಂದು ವರ್ಷದಿಂದ ದೇಶದ ರೈತರು ಸತತ ಹೋರಾಟ ನಡೆಸುತ್ತಿದ್ದಾರೆ. ಆದರೂ, ಕೇಂದ್ರ ಸರ್ಕಾರ ಮಾತ್ರ ತನ್ನ ನಿಲುವಿನಿಂದ ಹೊರ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಈ ನಡುವೆ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರ ಹೋರಾಟ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದ್ದು, ದೆಹಲಿಯ ಅರವಿಂದ ಕೇಜ್ರಿವಾಲ್ ಸರ್ಕಾರ ಈ ರೈತ ಹೋರಾಟವನ್ನು ಬಹಿರಂಗವಾಗಿ ಬೆಂಬಲಿಸಿ ಇಡೀ ದೇಶದ ಗಮನ ಸೆಳೆದಿತ್ತು. ಆದರೆ, ಈ ವಿಚಾರದಲ್ಲಿ ಪಂಜಾಬ್ ಕಾಂಗ್ರೆಸ್​ ಮುಖಂಡ ನವಜೋತ್​ ಸಿಂಗ್ ಸಿಧು ಕೇಜ್ರಿವಾಲ್ ನಡೆಯನ್ನು ವಿರೋಧಿಸಿದ್ದರು. ಇದೀಗ ನವಜೋತ್ ಸಿಂಗ್ ಸಿಧು ವಾಗ್ದಾಳಿ ನಡೆಸಿರುವ ಎಎಪಿ ಮುಖಂಡ ರಾಘವ್ ಚಡ್ಡಾ, "ನವಜೋತ್ ಸಿಧು ಪಂಜಾಬ್‌ ರಾಜಕೀಯದ ರಾಖಿ ಸಾವಂತ್" ಎಂದು ಹೇಳುವ ಮೂಲಕ ಗೇಲಿ ಮಾಡಿದ್ದಾರೆ.

  ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡುತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಖಾಸಗಿ ಮಂಡಿಗಳಿಗೆ ಒಪ್ಪಿಗೆ ನೀಡಿದ್ದನ್ನು ಡಿನೋಟಿಫೈ ಮಾಡಿದ್ದಿರಾ ಅಥವಾ ನಿಮ್ಮ ಮುಖವಾಡ ಇನ್ನೂ ಹಾಗೆಯೇ ಮುಂದುವರೆಯುತ್ತಿದೆ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು ವಿಡಿಯೊವೊಂದರಲ್ಲಿ ಪ್ರಶ್ನೆ ಮಾಡಿದ್ದರು.  ಅರವಿಂದ್ ಕೇಜ್ರೀವಾಲ್ ಕೃಷಿ ಕಾನೂನುಗಳನ್ನು ವಿರೋಧಿಸುತ್ತಾ, ಅವುಗಳನ್ನು ಬೆಂಬಲಿಸುತ್ತಿದ್ದಾರೆ. ಎರಡು ಮುಖವಾಡ ಧರಿಸಿದ್ದಾರೆ ಎಂದು ನವಜೋತ್ ಸಿಂಗ್ ಸಿಧು ಆರೋಪಿಸಿದ್ದರು. ಇದನ್ನು ರೀ ಟ್ವೀಟ್ ಮಾಡಿ ಉತ್ತರ ನೀಡಿರುವ ರಾಘವ್ ಚಡ್ಡಾ, ಬಾಲಿವುಡ್ ನಟಿ ರಾಖಿ ಸಾವಂತ್‌ಗೆ ಹೋಲಿಸಿದ್ದಾರೆ.

  "ಪಂಜಾಬ್ ರಾಜಕೀಯದ ರಾಖಿ ಸಾವಂತ್ ನವಜೋತ್ ಸಿಂಗ್ ಸಿಧು. ಕ್ಯಾಪ್ಟನ್ (ಮುಖ್ಯಮಂತ್ರಿ ಅಮರಿಂದರ್ ಸಿಂಗ್) ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಗದರಿಸಿದ್ದಾರೆ. ಆದ್ದರಿಂದ ಇಂದು ಬದಲಾವಣೆಗಾಗಿ, ಅವರು ಅರವಿಂದ ಕೇಜ್ರಿವಾಲ್ ಹಿಂದೆ ಬಿದ್ದಿದ್ದಾರೆ" ಎಂದು ರಾಘವ್ ಚಡ್ಡಾ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

  ಮುಂದುವರೆದು, "ನಾಳೆಯವರೆಗೆ ಕಾಯಿರಿ, ಅವರು ಕ್ಯಾಪ್ಟನ್ ವಿರುದ್ಧ ವೀರಾವೇಶದಿಂದ ಮತ್ತೆ ಹೇಳಿಕೆ ನೀಡುವುದನ್ನು ಪುನರಾರಂಭಿಸುತ್ತಾರೆ" ಎಂದು ರಾಘವ್ ಚಡ್ಡಾ ಟ್ವೀಟ್ ಮಾಡಿದ್ದಾರೆ.

  ರಾಜಕೀಯ ನಾಯಕರ ಹೇಳಿಕೆಗಳಲ್ಲಿ ನಟಿ ರಾಖಿ ಸಾವಂತ್ ಹೆಸರು ಬಳಸಿರುವುದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಷ್ಟು ಕೀಳು ಮಟ್ಟದಲ್ಲಿ ಟ್ವೀಟ್ ಮಾಡುವ ಮೂಲಕ ಮಹಿಳೆಯರಿಗೆ ಅವಮಾನ ಮಾಡಲಾಗಿದೆ ಎಂದು ಕಿಡಿ ಕಾರಿದ್ದಾರೆ.

  ಇದನ್ನೂ ಓದಿ: Child Marriage| 'ಬಾಲ್ಯ ವಿವಾಹ ನೋಂದಣಿ ಮಸೂದೆ' ಅಂಗೀಕರಿಸಿದ ರಾಜಸ್ಥಾನ; ವಿರೋಧ ಪಕ್ಷಗಳಿಂದ ಆಕ್ರೋಶ!

  ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇಜ್ರಿವಾಲ್ ಮತ್ತು ಅವರ ಸರ್ಕಾರವು ಕೇಂದ್ರದ ಮೂರು ವಿವಾದಿತ ಕಾನೂನುಗಳಲ್ಲಿ ಒಂದನ್ನು ಪರಿಗಣಿಸಿ, ಇತರ ಎರಡು ಕಾನೂನುಗಳು ಪರೀಕ್ಷೆಯಲ್ಲಿದೆ ಎಂದು ಹೇಳಿ ಭಾರೀ ಟೀಕೆಗೆ ಒಳಗಾಗಿತ್ತು. ನಂತರ ರೈತರು ನಡೆಸಿದ ದೆಹಲಿ ಚಲೋ, ಅನಿರ್ಧಿಷ್ಠಾವಧಿ ಪ್ರತಿಭಟನೆಗೂ ಆಪ್ ಸರ್ಕಾರ ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದೆ. ಪಂಜಾಬ್ ಚುನಾವಣೆ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಎರಡು ಕೂಡ ರೈತ ಪ್ರತಿಭಟನೆಯನ್ನು ಬೆಂಬಲಿಸುತ್ತಾ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸುತ್ತಿವೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: