ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗಿನ ಸುದೀರ್ಘ ಘರ್ಷಣೆಯ ನಂತರ ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ಅವರನ್ನು ಭಾನುವಾರ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ಸಿಧು ಅವರೊಂದಿಗೆ ನಾಲ್ಕು ಕಾರ್ಯಕಾರಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಸಂಗತ್ ಸಿಂಗ್ ಗಿಲ್ಜಿಯಾನ್, ಸುಖ್ವಿಂದರ್ ಸಿಂಗ್ ಡ್ಯಾನಿ, ಪವನ್ ಗೋಯೆಲ್, ಮತ್ತು ಕುಜಿತ್ ಸಿಂಗ್ ನಾಗ್ರಾ. ದಲಿತ ಸಿಖ್ ಆದ ಡ್ಯಾನಿ ಅವರನ್ನು ರಾಹುಲ್ ಗಾಂಧಿಯವರ ಆಯ್ಕೆಮಾಡಿದ್ದಾರೆ ಎನ್ನಲಾಗಿದೆ. ಸಂಗತ್ ಸಿಂಗ್ ಒಬಿಸಿ ಆಗಿದ್ದರೆ, ಗೋಯೆಲ್ ಹಿಂದೂ ಮತ್ತು ನಾಗ್ರಾ ಅವರು ಜಾಟ್ ಸಿಖ್ ಆಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇತ್ತೀಚೆಗೆ ಸಿಧು ಮತ್ತು ಕ್ಯಾಪ್ಟನ್ ಅವರ ನಡುವಿನ ಜಗಳ ತಾರಕಕ್ಕೆ ಏರಿ ಬಹಿರಂಗವಾಗಿಯೇ ಸಿಧು ಮುಖ್ಯಮಂತ್ರಿಯ ಮೇಲೆ ಹರಿಹಾಯುತ್ತಾ ಇದ್ದರು. ಅಲ್ಲದೇ ಸರಣಿ ಟ್ವೀಟ್ ಮೂಲಕ ಎಎಪಿ ಪರವಾಗಿ ಒಂದಷ್ಟು ಹೇಳಿಕೆಗಳನ್ನು ನೀಡಿದ್ದ ಸಿಧು ಅವರ ನಡೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಅಲ್ಲದೇ ಸಿಧುಗೆ ಉನ್ನತ ಸ್ಥಾನ ನೀಡಿದರೆ ಪಂಜಾಬ್ ಕಾಂಗ್ರೆಸ್ ಹೊಡೆದು ಹೋಳಾಗಲಿದೆ ಎಂದು ಅಮರೀಂದರ್ ಸಿಂಗ್ ಸೋನಿಯಾ ಗಾಂಧಿ ಅವರಿಗೆ ಕಳೆದ ವಾರ ಪತ್ರ ಬರೆದಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರ ಸಮ್ಮುಖದಲ್ಲಿ ಸಭೆ ಕೂಡ ನಡೆದಿತ್ತು. ಅಲ್ಲದೇ ಪ್ರಿಯಾಂಕ ಗಾಂಧಿ ಸಹ ಈ ಬಂಡಾಯ ಶಮನಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದರು. ಅಲ್ಲದೇ ಭಾನುವಾರ ಬೆಳಿಗ್ಗೆ ಸಿಎಂ ಬೆಂಬಲಿಸಿ ಕಾಂಗ್ರೆಸ್ಸಿನ ಶಾಸಕರು ಪತ್ರಿಕಾ ಗೋಷ್ಟಿ ನಡೆಸಿ, ಕ್ಯಾಪ್ಟನ್ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಸಿಧು ಅವರು ಬಹಿರಂಗವಾಗಿ ಅವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.
ಕಳೆದ ಅನೇಕ ದಿನಗಳಿಂದ ನಡೆಯುತ್ತಿದ್ದ ಈ ಸಮರ ಭಾನುವಾರ ಅಂತ್ಯ ಕಂಡಿದ್ದು ಕೊನೆಗೂ ಸಿಧು ತಾವು ಹಿಡಿದ ಹಠ ಸಾಧಿಸಿದ್ದಾರೆ.
ಶುಕ್ರವಾರ ನಡೆದಿದ್ದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹರೀಶ್ ರಾವತ್ ಅವರು ಇವರಿಬ್ಬರ ನಡುವೆ ಸಂಧಾನಕಾರರಾಗಿ ಕೆಲಸ ಮಾಡಿ, ಈಗ ಬಂಡಾಯ ಶಮನ ಮಾಡಿದ ಗೆಲುವಿನಲ್ಲಿ ಇದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಇಬ್ಬರೂ ನಾಯಕರು ಒಂದು ಸಂಧಾನಕ್ಕೆ ಬರಬೇಕು ಎಂದು ಹರೀಶ್ ರಾವತ್ ಕಳೆದ ಶುಕ್ರವಾರ ನುಡಿದಿದ್ದರು.
2022 ರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗುರಿಯಲ್ಲಿ ಇಟ್ಟುಕೊಂಡು ಈ ದೊಡ್ಡ ಬದಲಾವಣೆ ಮಾಡಲಾಗಿದೆ. ಅಲ್ಲದೇ ಅಮೃತಸರದ ಗುರುದ್ವಾರ ದಾಳಿ ಹಾಗೂ ಆ ನಂತರದ ಸಿಖ್ ಹತ್ಯಾಕಾಂಡ ನಡೆದ ಮೇಲೆ ಪಂಜಾಬಿನಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನೇ ಕಳೆದುಕೊಂಡಿತ್ತು ಅಲ್ಲದೇ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಮತ್ತೆ ಪಂಚ ನದಿಗಳ ನಾಡಿನಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದು ಇತಿಹಾಸ.
ಇದನ್ನೂ ಓದಿ: ನಮ್ಮದೇ ಕ್ಷೇತ್ರದಲ್ಲಿ ಶಕ್ತಿಹೀನರಾಗಿದ್ದೇವೆ: ಎಂಪಿ ಫಂಡ್ ಮತ್ತೆ ಪ್ರಾರಂಭಿಸಿ ಎಂದು ದನಿ ಎತ್ತಿದ ಸಂಸದರು
ಈಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿಧು ಅವರ ಕಮಾಲ್ ಹೇಗೆ ನಡೆಯಲಿದೆ ಎನ್ನುವುದು ಕಾದು ನೋಡಬೇಕಿದೆ. ಅಲ್ಲದೇ ಪಂಜಾಬಿನಲ್ಲಿ ವಿರೋಧಿಗಳ ಸಂಖ್ಯೆ ಹೆಚ್ಚಾಗಿದ್ದು ಎಎಪಿ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದೆ. ಅಕಾಲಿದಳದೊಂದಿಗೆ ಸೇರಿಕೊಂಡಿರುವ ಬಿಎಸ್ಪಿ ದಲಿತರ ಓಟುಗಳನ್ನು ಕಸಿಯಬಹುದು ಎನ್ನುವ ಆತಂಕ ಎಲ್ಲಾ ಪಕ್ಷಗಳಲ್ಲೂ ಮೂಡಿದೆ. ಒಟ್ಟಿನಲ್ಲಿ ಬಂಡಾಯ ಎದ್ದು ಪಡೆದ ಹುದ್ದೆ ಸಿಧುಗೆ ಮುಳ್ಳಿನ ಹಾದಿ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ